ತ್ರಿಪುರಾದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಮುಸ್ಲಿಂ ಸಮಾಜದ ಪ್ರತಿಭಟನೆ

ಹಲ್ಲೆ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮಕ್ಕೆ, ಘಟನೆ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಆಗ್ರಹ

ದಾವಣಗೆರೆ, ನ.12- ತ್ರಿಪುರಾದಲ್ಲಿ ಪ್ರಾರ್ಥನಾ ಮಂದಿರಗಳು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ವಿರುದ್ಧ ನಗರದಲ್ಲಿ ಇಂದು ಮುಸ್ಲಿಂ ಸಮಾಜದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ನಗರದ ಮಂಡಕ್ಕಿ ಭಟ್ಟಿಯಲ್ಲಿರುವ ಮಿಲಾದ್ ಮೈದಾನದಲ್ಲಿ ತಂಜೀಮುಲ್ ಮುಸ್ಲಿಮಿನ್ ಫಂಡ್ ಅಸೋಸಿಯೇಷನ್ ಮತ್ತು ತಂಜೀಮ್ ಉಲೇಮಾ ಅಹ್ಲೆ ಸುನ್ನತ್ ಸಂಘಟನೆ ನೇತೃತ್ವದಲ್ಲಿ  ಮುಸ್ಲಿಂ ಸಮಾಜ ಬಾಂಧವರು, ಮುಖಂಡರು, ಸಂಘಟನೆ ಪದಾಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ, ಬಹಿರಂಗ ಸಭೆ ನಡೆಸಿದರು.

ತ್ರಿಪುರಾದಲ್ಲಿ ಅಲ್ಪ ಸಂಖ್ಯಾತರ ಮೇಲೆ ಹಲ್ಲೆಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು. 

ಮುಖಂಡ ಅಯೂಬ್ ಪೈಲ್ವಾನ್ ಮಾತನಾಡಿ, ಇತ್ತೀಚೆಗೆ ಕೆಲ ಕೋಮುವಾದಿ ಜನರು ಮತ್ತು ಗುಂಪುಗಳು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ಹಿಂಸಾತ್ಮಕ ಘಟನೆಗಳು ಸಂಭವಿಸುತ್ತಿವೆ. ಇಂತಹ ಘಟನೆಗಳನ್ನು ಸಮಾಜ ಖಂಡಿಸುತ್ತದೆ ಎಂದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಶಾಂತಿ ಸಾಮರಸ್ಯದಿಂದ ಬಾಳುತ್ತಿರುವ ದಾವಣಗೆರೆಯ ಮುಸ್ಲಿಂ ಧರ್ಮೀಯರ ಮನವಿ ಪತ್ರವನ್ನು ರಾಷ್ಟ್ರಪತಿಗಳಿಗೆ ನಿಯಮಾನುಸಾರ ಕಳುಹಿಸಿ ಕೊಡಲಾಗುವುದು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಶಾಂತಿಯುತವಾಗಿ ಸಭೆ ನಡೆಸಿ, ಮನವಿ ಮಾಡಿದ್ದು, ಈ ಮೂಲಕ ಶಾಂತಿ ಪ್ರಿಯರು ಎನ್ನುವುದನ್ನು ತೋರಿಸಿದ್ದೀರಿ. ಮೆರವಣಿಗೆಗೆ ಜಿಲ್ಲಾ ಪೊಲೀಸ್ ಇಲಾಖೆ ಅನುಮತಿ ನೀಡುವುದಿಲ್ಲವೆಂದಾಗ ಸಭೆ ನಡೆಸಲು ನೀಡಿದ ಸಲಹೆಗೆ ಸ್ಪಂದಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಧಾರ್ಮಿಕ ಗುರುಗಳಾದ ಮೌಲಾನಾ ಮಹಮ್ಮದ್ ಅನೀಸ್ ರಜಾ ಖಾದ್ರಿ ಸಾನ್ನಿಧ್ಯದಲ್ಲಿ ಮೌಲಾನಾ ಶಾಹಿದ್ ರಜಾ, ಸೈಯದ್ ಮುಕ್ತಿಯಾರ್, ಮೌಲಾನಾ ಇಲಿಯಾಜ್ ಖಾದ್ರಿ, ಸಮಾಜದ ಮುಖಂಡರಾದ ಸಾಧಿಕ್ ಪೈಲ್ವಾನ್, ಸೈಯದ್ ಸೈಫುಲ್ಲಾ, ಜೆ. ಅಮಾನುಲ್ಲಾ ಖಾನ್, ಘನ್ನೀ ತಾಹೀರ್, ಸಿರಾಜ್ ಅಹಮ್ಮದ್, ಸಿ.ಆರ್. ನಸೀರ್ ಅಹಮ್ಮದ್, ಪಿ.ಕೆ. ಮುಸ್ತಾಕ್ ಅಹಮ್ಮದ್, ಎ.ಬಿ. ರಹೀಂ ಸಾಬ್, ಸೈಯದ್ ಚಾರ್ಲಿ, ಟಿ. ಅಸ್ಗರ್, ಅಹ್ಮದ್ ರಜಾ, ಭಾಷಾ ಪೈಲ್ವಾನ್, ಯು.ಎಂ. ಮನ್ಸೂರ್ ಅಲಿ, ಖಾದರ್ ಭಾಷಾ ಸೇರಿದಂತೆ ಧರ್ಮ ಗುರುಗಳು, ಸಮಾಜದ ಮುಖಂಡರು ಭಾಗವಹಿಸಿದ್ದರು.

error: Content is protected !!