ಅಧಿವೇಶನದ ಅಮೂಲ್ಯ ಸಮಯ ಹಾಳು ಮಾಡುತ್ತಿರುವ ಕಾಂಗ್ರೆಸ್

ದಾವಣಗೆರೆ, ಫೆ.24- ಕಾಂಗ್ರೆಸ್ ಶಾಸಕರು, ನಾಯಕರು ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಷ್ಟ್ರಧ್ವಜದ ಹೇಳಿಕೆಯನ್ನೇ ನೆಪವಾಗಿಟ್ಟುಕೊಂಡು ಸದನದಲ್ಲಿ ಗೊಂದಲ ಸೃಷ್ಟಿ ಮಾಡಿ ಅತೀವ ನಾಟಕ ಮಾಡುವ ಮೂಲಕ ಅಧಿವೇಶನ ಹಾಳು ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.

ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ, ರೈತರು, ಕಾರ್ಮಿಕರು, ವಿದ್ಯಾರ್ಥಿಗಳ ಸಮಸ್ಯೆ, ಕುಡಿಯುವ ನೀರು ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸುವ ಬದಲು, ಅಧಿವೇಶನದ ಅಮೂಲ್ಯ ಸಮಯವನ್ನು ವಿನಾಕಾರಣ ಕಾಲ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ವಿಚಾರದಲ್ಲಿ ನಡೆಯುತ್ತಿರುವ ಗೊಂದಲ, ಪ್ರತಿಭಟನೆ, ಗಲಾಟೆಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾಂಗ್ರೆಸ್ ಕಾರಣ ಎಂದರು.

ಕಾಂಗ್ರೆಸ್ ನಾಯಕರು ಕೇವಲ ಅಲ್ಪಸಂಖ್ಯಾತರ ಓಲೈಕೆಗಾಗಿ ಪರ ಮತ್ತು ವಿರೋಧದ ಹೇಳಿಕೆ ನೀಡುತ್ತಿದ್ದಾರೆ. ಚರ್ಚೆಗೆ ಯಾವ ವಿಷಯ ಸಿಗದ ಕಾರಣ ಸಚಿವ ಈಶ್ವರಪ್ಪ ಅವರ ಹೇಳಿಕೆ ವಿರೋಧಿಸಿ, ಅಹೋರಾತ್ರಿ ಧರಣಿ ಮಾಡುವ ಮೂಲಕ ರಾಜ್ಯದ ಜನತೆ ಮುಂದೆ ಕಾಂಗ್ರೆಸ್ ಪಕ್ಷ ಹಾಸ್ಯಾಸ್ಪದಕ್ಕೀಡಾಗಿದೆ ಎಂದು ಹೇಳಿದರು.

ತಮ್ಮಲ್ಲಿರುವ ಕಿತ್ತಾಟಗಳನ್ನು ಮರೆಮಾಚಲು ಈ ರೀತಿಯ ಪ್ರತಿಭಟನೆ, ಧರಣಿಯ ನಾಟಕವಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರಲ್ಲಿನ ನೈತಿಕ ಹಾಗೂ ಬೌದ್ಧಿಕ ದಿವಾಳಿತನ ಕಾರಣವಾಗಿದೆ. ಬರೀ ಢೋಂಗಿ ರಾಷ್ಟ್ರಭಕ್ತಿಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ವಕ್ತಾರ ಡಿ.ಎಸ್. ಶಿವಶಂಕರ್, ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಮುಖಂಡ ಮಂಜಾನಾಯ್ಕ, ವಿಶ್ವಾಸ್ ಉಪಸ್ಥಿತರಿದ್ದರು.

error: Content is protected !!