ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿ, ಅಭ್ಯರ್ಥಿ ಗೆಲುವಿಗೆ ಶ್ರಮಿಸಿ

ಗ್ಯಾರಂಟಿಗಳನ್ನು ಜನರಿಗೆ ತಲುಪಿಸಿ, ಅಭ್ಯರ್ಥಿ ಗೆಲುವಿಗೆ ಶ್ರಮಿಸಿ

ಸಚಿವ ಎಸ್ಸೆಸ್ಸೆಂ ಕರೆ

ದಾವಣಗೆರೆ, ಮಾ. 26- ಈ ದೇಶದಲ್ಲಿ ಶಾಲೆಗಳು, ಆಸ್ಪತ್ರೆಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಪ್ರಸ್ತುತ ರಾಜ್ಯದಲ್ಲಿ ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿ ಕೊಟ್ಟು ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮದು ಎಂದು  ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದರು. 

ನಗರದ ಬಂಟರ ಭವನದಲ್ಲಿ ಇಂದು ಏರ್ಪಾಡಾಗಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿ ಕಾರ್ಜುನ್ ಅವರ ಪರ ಶಾಸಕರು, ಮುಖಂ ಡರು, ವಿವಿಧ ಹಂತದ ಪದಾಧಿಕಾರಿಗಳ ಸಭೆ ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಣ್ಣ – ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಮರೆತು ಮುಖಂಡರೆಲ್ಲಾ ಒಗ್ಗಟ್ಟಾಗಬೇಕು. ನಾವೆಲ್ಲಾ ಒಂದೇ ಕುಟುಂಬದ ಸದಸ್ಯರಿದ್ದಂತೆ. ಏನೇ ಸಮಸ್ಯೆ, ವ್ಯತ್ಯಾಸಗಳಿದ್ದರೂ ನನ್ನ ಬಳಿ ಹೇಳಿ ಅವುಗಳನ್ನೆಲ್ಲಾ ಸರಿಪಡಿಸಿಕೊಂಡು ಹೋ ಗೋಣ, ಲೋಕಸಭಾ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಗೆಲ್ಲಿಸುವ ಹೊಣೆ ನಮ್ಮೆಲ್ಲರದ್ದು ಎಂದರು.

ಮುಖಂಡರು, ಕಾರ್ಯಕರ್ತರ ಸಭೆಯನ್ನು ಇದೇ ದಿನಾಂಕ 29 ರಂದು ಜಗಳೂರು, 30 ರಂದು ಹರಪನಹಳ್ಳಿ, ಹರಿಹರ ಹೀಗೆ ಎಲ್ಲಾ ತಾಲ್ಲೂಕುಗಳಲ್ಲೂ ಪ್ರಚಾರ ನಡೆಸುವ ಮೂಲಕ ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಲು ಶ್ರಮಿಸೋಣ. ಅಭಿವೃದ್ಧಿ ಪಥದತ್ತ ಜಿಲ್ಲೆಯನ್ನು ಕೊಂಡೊಯ್ಯಬೇಕಾಗಿದೆ ಎಂದು ತಿಳಿಸಿದರು.

ಸಿಎಂ ಮತ್ತು ಡಿಸಿಎಂ ಒತ್ತಡ ಹಾಕಿದ್ದರಿಂದ ತಮ್ಮ ಪತ್ನಿ ಪ್ರಭಾ ಅವರನ್ನು ಚುನಾವಣಾ ಕಣಕ್ಕೆ ಇಳಿಸಲಾಗಿದೆ. ನಾವಾಗಿಯೇ ಟಿಕೆಟ್ ಕೇಳಿರಲಿಲ್ಲ. ಕೆಪಿಸಿಸಿ ಮತ್ತು ಎಐಸಿಸಿ ಸರ್ವೆ ವರದಿ ಆಧರಿಸಿ ಟಿಕೆಟ್ ನೀಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ನೀರಿನ ವ್ಯವಸ್ಥೆಯನ್ನು ಮುಖ್ಯವಾಗಿ ಮಾಡಬೇಕಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗಕ್ಕೂ ನೀರು ಕೊಡುವ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ರೈತರಿಗೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಶ್ರಮಪಡಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಐದು ಗ್ಯಾರಂಟಿ ಜಾರಿ ಮಾಡಿ ಜನಮನ್ನಣೆ ಪಡೆದಿದೆ. ಮಹಿಳೆಯರು ಹೆಚ್ಚು ಪ್ರಯೋಜನವನ್ನು ಗ್ಯಾರಂಟಿ ಯೋಜನೆಗಳಿಂದ ಪಡೆಯುತ್ತಿದ್ದಾರೆ ಎಂದರು.

ಪಾರ್ಲಿಮೆಂಟ್ ಚುನಾವಣೆಯಲ್ಲಿ ಮೋದಿ ಮೋದಿ ಎಂದು ಹೇಳುತ್ತಿದ್ದಾರೆ. ಆದರೆ ಕರ್ನಾಟಕಕ್ಕೆ ತುಂಬಾ ಅನ್ಯಾಯ ಮಾಡಿದ್ದಾರೆ. ರಾಜ್ಯಕ್ಕೆ ಬರಬೇಕಾದ ಅನುದಾನ ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಎಲ್ಲೂ ಕೂಡ ನಾನೇ ಅಭ್ಯರ್ಥಿ ಎಂದು ಹೇಳಿಕೊಂಡಿಲ್ಲ. ಕಾರ್ಯಕರ್ತರು, ಮುಖಂಡರೇ ಅಭ್ಯರ್ಥಿ ಎಂದು ಹೇಳಿಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಗೆಲುವು ಸುಲಭವಾಗುತ್ತದೆ ಎಂದರು.

ಶಿಕ್ಷಣ ಮತ್ತು ಆರೋಗ್ಯವನ್ನು ಮುಖ್ಯ ಧ್ಯೇಯವನ್ನಾಗಿಟ್ಟುಕೊಂಡು ಮಹಿಳೆಯರು, ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಎಸ್.ಎಸ್. ಕೇರ್ ಟ್ರಸ್ಟ್ ಕೆಲಸ ಮಾಡುತ್ತಾ ಬಂದಿದೆ. ಜನರಿಗೆ ಆರೋಗ್ಯ ಸೇವೆ ದೊರಕಬೇಕೆಂಬ ಎಸ್ಸೆಸ್ ಅವರ ಆಶಯದಂತೆ `ಮೊಬೈಲ್ ವ್ಯಾನ್’ಮೂಲಕ ಆರೋಗ್ಯ ಸೇವೆ ಮಾಡುತ್ತಾ ಬರಲಾಗುತ್ತದೆ ಎಂದರು.

ಕೆಪಿಸಿಸಿ ವಕ್ತಾರ ನಿಖಿತ್ ರಾಜ್ ಮೌರ್ಯ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರುಗಳಾದ ಜಗಳೂರಿನ ಬಿ. ದೇವೇಂದ್ರಪ್ಪ, ಚನ್ನಗಿರಿಯ ಬಸವರಾಜ ಶಿವಗಂಗಾ, ಹೊನ್ನಾಳಿಯ ಡಿ.ಜಿ. ಶಾಂತನಗೌಡ, ಹರಪನಹಳ್ಳಿಯ ಶ್ರೀಮತಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಮಾಯಕೊಂಡದ ಕೆ.ಎಸ್. ಬಸವಂತಪ್ಪ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಎಸ್. ರಾಮಪ್ಪ, ಮುಖಂಡರುಗಳಾದ ಹೊದಿಗೆರೆ ರಮೇಶ್, ನಂದಿಗಾವಿ ಶ್ರೀನಿವಾಸ್, ಸೈಯದ್ ಸೈಫುಲ್ಲಾ ಮತ್ತಿತರೆ ಮುಖಂಡರು ಮಾತನಾಡಿದರು.

ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಸ್ವಾಗತಿಸಿದರು. ಎ. ನಾಗರಾಜ್ ವಂದಿಸಿದರು.

ವಕ್ತಾರ  ಡಿ. ಬಸವರಾಜ್, ಮೇಯರ್ ವಿನಾಯಕ ಪೈಲ್ವಾನ್, ಅರಸೀಕೆರೆ ಕೊಟ್ರೇಶ್, ಜಗಳೂರಿನ ಕೆ.ಪಿ. ಪಾಲಯ್ಯ, ಸುಭಾನ್ ಸಾಬ್, ಕೆ. ಚಮನ್ ಸಾಬ್, ಬಿ.ಹೆಚ್. ವೀರಭದ್ರಪ್ಪ, ಅನಿತಾಬಾಯಿ ಮಾಲತೇಶ್ ರಾವ್ ಜಾಧವ್, ಅಯೂಬ್,  ಕೆ.ಜಿ. ಶಿವಕುಮಾರ್, ಕುಬೇರಗೌಡ, ಮಂಜುನಾಥ್ ಪಾಟೀಲ್, ಹನುಮಂತಪ್ಪ, ಕಲ್ಲೇಶರಾಜ್ ಪಟೇಲ್, ಡೋಲಿ ಚಂದ್ರು, ಮೈನುದ್ದೀನ್, ನಿಖಿಲ್ ಕೊಂಡಜ್ಜಿ, ವಿಶ್ವನಾಥ್, ನಂಜಾನಾಯ್ಕ, ಆರೀಫ್, ಉದಯಕುಮಾರ್  ಮತ್ತಿತರರು  ಭಾಗವಹಿಸಿದ್ದರು.

error: Content is protected !!