ಬಿಜೆಪಿ ಭಿನ್ನಮತಕ್ಕೆ ವರಿಷ್ಠರ ತೇಪೆ

ಬಿಜೆಪಿ ಭಿನ್ನಮತಕ್ಕೆ ವರಿಷ್ಠರ ತೇಪೆ

ಎಸ್.ಎ. ರವೀಂದ್ರನಾಥ್‌ಗೆ ಗಾಯತ್ರಿ ಸಿದ್ದೇಶ್ವರ ಗೆಲುವಿನ ನೇತೃತ್ವ

ದಾವಣಗೆರೆ, ಮಾ. 26 – ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಉಂಟಾಗಿದ್ದ ಭಿನ್ನಮತಕ್ಕೆ ಬಿಜೆಪಿ ವರಿಷ್ಠರು ಸುದೀರ್ಘ ಚರ್ಚೆ ನಡೆಸುವ ಮೂಲಕ ತೇಪೆ ಹಚ್ಚಿದ್ದು, ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರ ಗೆಲ್ಲಿಸುವ ನೇತೃತ್ವವನ್ನು ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರಿಗೆ ವಹಿಸಲಾಗಿದೆ.

ನಗರದ ಹೊರ ವಲಯದ ಅಪೂರ್ವ ರೆಸಾರ್ಟ್‌ನಲ್ಲಿ ನಡೆದ ಸಭೆಯ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಪಕ್ಷದ ಸದಸ್ಯರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಂಡಾಯ ಮುಖಂಡರು ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಬಣದ ಮುಖಂಡರ ಜೊತೆ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್‌ವಾಲ್‌, ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಅವರೂ ಉಪಸ್ಥಿತರಿದ್ದರು.

ಎರಡು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಉಭಯ ಬಣದವರೂ ತಮ್ಮ ಮನಸ್ಸಿನಲ್ಲಿದ್ದ ಅಸಮಾಧಾನ ಹೊರ ಹಾಕಿದರು. ಕಳೆದ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಲು ಸಂಸದ ಸಿದ್ದೇಶ್ವರ ಅವರು ಶ್ರಮಿಸಲಿಲ್ಲ ಎಂದು ದೂರಿದರು. 

ಬಂಡಾಯ ಮುಖಂಡರ ವರ್ತನೆಯ ಬಗ್ಗೆಯೂ ಸಿದ್ದೇಶ್ವರ ಬಣದವರು ತಮ್ಮ ಅಸ ಮಾಧಾನ ಹೊರ ಹಾಕಿದರು. ಒಂದು ಹಂತದಲ್ಲಿ ಉಭಯ ಬಣಗಳ ಕೆಲ ಮುಖಂಡರು ತೀವ್ರ ವಾಗ್ವಾದದ ಹಂತಕ್ಕೂ ಹೋದರು ಎಂದು ಮೂಲಗಳು ತಿಳಿಸಿವೆ.

ನಂತರ ಉಭಯರನ್ನೂ ಸಮಾಧಾನ ಪಡಿಸಿದ ವರಿಷ್ಠರು, ಅಭ್ಯರ್ಥಿಗಿಂತ ಪಕ್ಷ ಮುಖ್ಯ ಹಾಗೂ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನ ಮಂತ್ರಿ ಯಾಗುವುದು ಮುಖ್ಯ. ಈ ದಿಸೆಯಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ಅಲ್ಲದೇ, ಅಭ್ಯರ್ಥಿಯಾಗಿರುವ ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸುವ ಹೊಣೆಯನ್ನು ಬಂಡಾಯ ಗುಂಪಿನ ಮುಂಚೂಣಿ ನಾಯಕರಾದ ಎಸ್.ಎ. ರವೀಂದ್ರನಾಥ್ ಅವರಿಗೇ ವಹಿಸಲಾಯಿತು. ರವೀಂದ್ರನಾಥ್‌ ಅವರು ಈ ಚುನಾವಣೆಯ ನೇತೃತ್ವ ವಹಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಲೋಕಸಭಾ ಚುನಾವಣಾ ಉಸ್ತುವಾರಿ ಭೈರತಿ ಬಸವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್, ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಪ್ರೊ. ಲಿಂಗಣ್ಣ, ಬಸವರಾಜ ನಾಯ್ಕ, ಗುರುಸಿದ್ದನಗೌಡ, ಹೆಚ್.ಪಿ. ರಾಜೇಶ್, ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಜಿ ಅಜಯ್ ಕುಮಾರ್, ಲೋಕಿಕೆರೆ ನಾಗರಾಜ್, ಶಿವಕುಮಾರ್, ಮುಖಂಡರಾದ ಡಾ. ರವಿಕುಮಾರ್, ಯಶವಂತರಾವ್ ಜಾಧವ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!