ಕಸ ಜ್ಞಾನದಿಂದ ಇಂಜಿನಿಯರ್‌ಗಳಿಗೆ ಲಾಭ : ಕಟ್ಟಿಮನಿ

ಕಸ ಜ್ಞಾನದಿಂದ ಇಂಜಿನಿಯರ್‌ಗಳಿಗೆ ಲಾಭ : ಕಟ್ಟಿಮನಿ

ಜಿಎಂಐಟಿ ಪದವಿ ದಿನಾಚರಣೆಯಲ್ಲಿ ಕೇಂದ್ರ ಬುಡಕಟ್ಟು ವಿ.ವಿ. ಕುಲಪತಿ

ದಾವಣಗೆರೆ, ಮೇ 28 – ಇಂಜಿನಿಯರ್‌ಗಳು ಸಮಾಜಕ್ಕೆ ಕೊಡುಗೆ ನೀಡಲು ಹಲವು ವಲಯಗಳಲ್ಲಿ ಅಪಾರ ಅವಕಾಶಗಳಿವೆ. ಕಸವೂ ಸಹ ಇತ್ತೀಚಿನ ದಿನಗಳಲ್ಲಿ ಇಂಜಿನಿಯರ್‌ಗಳಿಗೆ ಲಾಭ ತಂದುಕೊಡುವ ವಲಯವಾಗಿ ಪರಿವರ್ತನೆಯಾಗಿದೆ ಎಂದು ಆಂಧ್ರಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಟಿ.ವಿ. ಕಟ್ಟಿಮನಿ ತಿಳಿಸಿದರು.

ನಗರದ ಜಿ.ಎಂ.ಐ.ಟಿ.ಯಲ್ಲಿ ಆಯೋಜಿಸಲಾಗಿದ್ದ 18ನೇ ಪದವಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕಸ ಸಮಾಜದ ಪ್ರಮುಖ ಸಮಸ್ಯೆ. ಆದರೆ, ಕಸದ ಸಮಸ್ಯೆ ಬಗೆಹರಿಸುವುದರ ಜೊತೆಗೆ ಅದರಿಂದ ಲಾಭವನ್ನೂ ಪಡೆಯಬಹುದು. ಕಸಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಜ್ಞಾನ ಶಾಖೆಯನ್ನೇ ರೂಪಿಸಲಾಗಿದೆ. ಇದಕ್ಕೆ ಗಾರ್ಬಾಲಜಿ (ತ್ಯಾಜ್ಯ ಶಾಸ್ತ್ರ) ಎಂಬ ಹೆಸರಿದೆ ಎಂದವರು ಹೇಳಿದರು.

ಜನರು ಬಳಸಿ ಬಿಸಾಕುವ ಟೂತ್‌ಬ್ರಶ್‌ ಒಂದೇ ಸಾಕಷ್ಟು ತ್ಯಾಜ್ಯಕ್ಕೆ ಕಾರಣವಾಗುತ್ತಿದೆ. ಪ್ರತಿನಿತ್ಯ ಉತ್ಪತ್ತಿಯಾಗುವ ರಾಶಿಗಟ್ಟಲೆ ಕಸವನ್ನು ವಿಲೇವಾರಿ ಮಾಡುವ ವಲಯದಲ್ಲೂ ಇಂಜಿನಿಯರ್‌ಗಳಿಗೆ ಅವಕಾಶಗಳಿವೆ ಎಂದು ಕಟ್ಟಿಮನಿ ಹೇಳಿದರು.

ಸ್ಟೆಮ್ ಭವಿಷ್ಯ : ಪದವೀಧರ ಇಂಜಿನಿಯರ್‌ಗಳು ಮುಂದಿನ ದಿನಗಳಲ್ಲಿ ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಹಾಗೂ ಗಣಿತ) ವಲಯಗಳಲ್ಲಿ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದೀರಿ. ಸ್ಟೆಮ್ ವಲಯ ಜಗತ್ತಿನ ರೂಪಾಂತರಣ ಮಾಡುತ್ತಿದೆ. ಯುವ ಇಂಜಿನಿಯರ್‌ಗಳು ಅನ್ವೇಷಣೆ, ಸಮಸ್ಯೆ ಬಗೆಹರಿಸುವಿಕೆ ಹಾಗೂ ಜಗತ್ತನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರಬೇಕು ಎಂದರು.

ನಿರಂತರ ಕಲಿಕೆ : ತಂತ್ರಜ್ಞಾನ ವಲಯ ಕ್ಷಿಪ್ರವಾಗಿ ಬದಲಾಗುತ್ತಿದೆ. ಹೀಗಾಗಿ ಪದವಿ ಮುಗಿದ ನಂತರವೂ ನಿರಂತರ ಕಲಿಕೆಯಲ್ಲಿ ತೊಡಗಬೇಕು. ಹೊಸ ವಿಚಾರಗಳನ್ನು ಕಾರ್ಯಗತಗೊಳಿಸಬೇಕು. ಅನ್ವೇಷಣೆಗಳನ್ನು ಉತ್ಪನ್ನಗಳಾಗಿ ರೂಪಿಸುವಲ್ಲಿ ಶ್ರಮಿಸಬೇಕು ಎಂದರು.

ಕೃತಕ ಬದಲಿಸಿ : ಭವಿಷ್ಯದ ದಿನಗಳಲ್ಲಿ ಕೃತಕ ಬುದ್ಧಿವಂತಿಕೆ ಪ್ರಮುಖ ಪಾತ್ರ ವಹಿಸಲಿದೆ. ಕೃತಕ ಬುದ್ಧಿವಂತಿಕೆಯೇ ಪ್ರಬಲವಾದರೂ, ಅದು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ನಿರ್ಧರಿಸುವವರು ಇಂಜಿನಿಯರ್‌ಗಳೇ ಆಗಿರುತ್ತಾರೆ. ಹೀಗಾಗಿ ಭವಿಷ್ಯದ ಸ್ವರೂಪ ನಿರ್ಧರಿಸುವವರು ನೀವೇ ಆಗಿದ್ದೀರಿ ಎಂದು ಕಟ್ಟೀಮನಿ ಹೇಳಿದರು.

ಪ್ರಾಯೋಗಿಕ ತರಬೇತಿ : ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಕೌಶಲ್ಯ ಹಾಗೂ ತರಬೇತಿಗೆ ಹೆಚ್ಚಿನ ಒತ್ತು ನೀಡಿದೆ. ಕೈಗಾರಿಕಾ ಸಹಭಾಗಿತ್ವವನ್ನು ಪಠ್ಯದಲ್ಲಿ ತರಲಾಗಿದೆ. ಇದರಿಂದ ಸಿದ್ಧಾಂತ ಹಾಗೂ ಪ್ರಾಯೋಗಿಕತೆ ನಡುವಿನ ಅಂತರ ಕಡಿಮೆಯಾಗಿದೆ. ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಸಾಮರ್ಥ್ಯವೂ ಹೆಚ್ಚಾಗಿದೆ ಎಂದವರು ತಿಳಿಸಿದರು.

ವೇದಿಕೆಯ ಮೇಲೆ ಶ್ರೀಶೈಲ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನ ಕುಮಾರ್, ಕಾರ್ಯದರ್ಶಿ ಜಿ.ಎಂ. ಲಿಂಗರಾಜು, ಆಡಳಿತ ಮಂಡಳಿ ಸದಸ್ಯ  ಕೆ. ದಿವ್ಯಾನಂದ, ಜಿಎಂ ಗ್ರೂಪ್ ಆಫ್‌ ಇನ್‌ಸ್ಟಿಟ್ಯೂಷನ್ ಸಿಇಒ ಯು. ಚಂದ್ರಶೇಖರ್, ಜಿಎಂಐಟಿ ಪ್ರಾಂಶುಪಾಲ ಎಂ.ಬಿ. ಸಂಜಯ್ ಪಾಂಡೆ ಹಾಗೂ  ಎಂ.ಬಿ.ಎ. ನಿರ್ದೇಶಕ ಬಕ್ಕಪ್ಪ ಉಪಸ್ಥಿತರಿದ್ದರು.

ಬಿ.ಎಸ್. ಸುನೀಲ್ ಕುಮಾರ್ ಸ್ವಾಗತಿಸಿದರು. 

error: Content is protected !!