ಬುದ್ದ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ

ಬುದ್ದ, ಬಸವ ಮತ್ತು ಅಂಬೇಡ್ಕರ್ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ

ಬುದ್ದ, ಬಸವ, ಅಂಬೇಡ್ಕರ್ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ

ದಾವಣಗೆರೆ, ಮೇ 28- ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ. ವಚನ ಚಳವಳಿ ಹುಟ್ಟಿಕೊಂಡಿದ್ದು ಬುದ್ದ ತತ್ವದ ಆಧಾರದ ಮೇಲೆ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ. ರಾಮಚಂದ್ರಪ್ಪ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಇಂಟರ್ ನ್ಯಾಷನಲ್ ಫ್ರೆಂಡ್ಸ್ ಆಫ್ ಬುದ್ದಿಸ್ಟ್ ಸೋಷಿಯಲ್ ಎಜುಕೇಶನ್, ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಂದು ಏರ್ಪಡಿಸಿದ್ದ ಬುದ್ದ, ಬಸವ, ಅಂಬೇಡ್ಕರ್ ಜಯಂತಿ ಹಾಗೂ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ  ನಮ್ಮ ಬದುಕಿನಲ್ಲಿ ಬಸವೇಶ್ವರರ ವಚನಗಳ ಪ್ರಾಮುಖ್ಯತೆ ಕುರಿತು ಮಾತನಾಡಿದರು.

ಬುದ್ದ ಮಹಾನ್ ಚಿಂತಕ. ದೇವರೇ ಇಲ್ಲದ ಧರ್ಮವನ್ನು ಬೋಧಿಸಿದ ಬುದ್ದನ ಚಿಂತನೆಗಳು ಕೇವಲ ಭಾರತಕ್ಕೆ ಅಷ್ಟೇ ಅಲ್ಲದೇ ವಿಶ್ವಕ್ಕೇ ಅನ್ವಯ ಆಗುವಂತಹವು ಎಂದರು.

ಜನ ಸಾಮಾನ್ಯರ ಸಂಕಷ್ಟಗಳನ್ನು ಅರಿಯಲು  ಗೌತಮ ಬುದ್ಧ ರಾಜಪ್ರಭುತ್ವವನ್ನೇ ದಿಕ್ಕರಿಸಿ ಬಂದಿದ್ದು ಮಹತ್ವದ್ದು. ಜನರ ಅತೀವ ಶೋಷಣೆ, ದುಸ್ಥಿತಿಗೆ ದೇವರು ಸಹ ಕಾರಣ ಎಂದು ದೇವರ ಬಗ್ಗೆ ಬುದ್ಧ ಎಲ್ಲಿಯೂ ಪ್ರಸ್ತಾಪಿಸದೇ ಇರುವುದನ್ನು ನಾವು ಕಾಣಬಹುದು ಎಂದು ಹೇಳಿದರು.

ಬುದ್ಧ ಪ್ರಾರಂಭಿಸಿದ ನೆಲದಲ್ಲೇ ಬೌದ್ಧ ಧರ್ಮ ಅಷ್ಟಾಗಿ ಬೆಳೆಯದೇ ಇರುವುದಕ್ಕೆ ಅನೇಕ ಕಾರಣಗಳಿವೆ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕಿನ ಮಾರ್ಗ ತೋರಿಸಿಕೊಟ್ಟ ಮತ್ತು ಜಾತಿ, ಮತ, ಪಂಥಗಳ ತಾರತಮ್ಯದ ವಿರುದ್ಧ ಹೋರಾಡಿದ ಮಹಾನ್ ದಾರ್ಶನಿಕ ಬುದ್ಧ ಎಂದು ಬಣ್ಣಿಸಿದರು.

12 ನೇ ಶತಮಾನದಲ್ಲಿ ಬಸವಣ್ಣ ಆರಂಭಿಸಿದ್ದ ಶರಣ ಚಳವಳಿ ಕೂಡ ಕಾಯಕ ಧರ್ಮದ ಬೋಧನೆ ಮಾಡಿದ್ದು, ಅಲ್ಲಿಯವರೆಗೆ ಯಾವ ಚಳವಳಿ ಸಹ ಕಾಯಕ ಸಂಸ್ಕೃತಿಯ ಬಗ್ಗೆ ಹೇಳಿರಲಿಲ್ಲ ಎಂದರು.

ಧಾರವಾಡ ಜ್ಞಾನಬುದ್ಧ ವಿಹಾರದ ಕಾರ್ಯದರ್ಶಿ ಎಫ್.ಹೆಚ್. ಜಕ್ಕಪ್ಪನವರ್ ಅವರು ` ಭಾರತೀಯ ಸಮುದಾಯಕ್ಕೆ ಅಂಬೇಡ್ಕರ್ ಕೊಡುಗೆ’ ಕುರಿತು ಮಾತನಾಡಿ, ಅಂಬೇಡ್ಕರ್ ಕೇವಲ ದಲಿತ ಸಮುದಾಯಕ್ಕೆ ಅಷ್ಟೇ ಅಲ್ಲದೇ ಸರ್ವ ಜನರ ಹಿತವನ್ನು ಬಯಸಿದವರು. ಅಂಬೇಡ್ಕರ್ ಇಲ್ಲದೇ ಜೀವನವೇ ಇಲ್ಲ ಎಂದರು.

ಭಾರತೀಯ ರಿಸರ್ವ ಬ್ಯಾಂಕ್ ಆರಂಭಿ ಸಿದ, ಮೊದಲ ನೀರಾವರಿ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಹೇಳಿದರು. ಪ್ರತಿಯೊಬ್ಬರೂ ಕೂಡ ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಅಂಬೇಡ್ಕರ್ ಜೀವನ ಚರಿತ್ರೆ, ಅವರ ಸಾಧನೆಗಳ ಬಗ್ಗೆ ಓದುವ ಅಗತ್ಯವಿದೆ ಎಂದರು.

ಟ್ರಸ್ಟ್ ಜಿಲ್ಲಾಧ್ಯಕ್ಷ ಡಿ.ಎನ್. ಹಾಲೇಶ್ ಅಧ್ಯಕ್ಷತೆ ವಹಿಸಿದ್ದರು. ಬಂತೇಜಿ ಬಿಕ್ಕುಣಿ ಬುದ್ಧಮ್ಮ ಸಾನ್ನಿಧ್ಯ ವಹಿಸಿದ್ದರು.

`ಭಾರತ ಸಂವಿಧಾನ ರಚನೆಯಲ್ಲಿ ಬುದ್ಧ ತತ್ವಗಳ ಅಳವಡಿಕೆ’ ಕುರಿತು ಶಿವಮೊಗ್ಗ ನಿವೃತ್ತ ನ್ಯಾಯಾಧೀಶರಾದ ಡಿ.ಟಿ. ದೇವೇಂದ್ರನ್, `ವಿಪಶ್ಯನ ಧ್ಯಾನ’ ಕುರಿತು ದಾವಣಗೆರೆ ವಿವಿ ನಿವೃತ್ತ ಪ್ರಾಧ್ಯಾಪಕ ಡಾ.ಜಿ.ಟಿ. ಗೋವಿಂದಪ್ಪ ಹಾಗೂ  `ಪ್ರಸ್ತುತ ದಿನಮಾನಕ್ಕೆ ಬುದ್ಧರ ತತ್ವಗಳ ಅನಿವಾರ್ಯತೆ’ ಕುರಿತು ಡಾ. ಹೆಚ್.ಆರ್. ಸುರೇಂದ್ರ ಮಾತನಾಡಿದರು.

ವಿಶ್ವಮಾನವ ಮಂಟಪ ಟ್ರಸ್ಟ್ ಸಂಸ್ಥಾಪಕ ಆವರಗೆರೆ ರುದ್ರಮುನಿ, ಪ್ರಜಾ ಪರಿವರ್ತನೆ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ, ಡಾ. ಕೆ.ಹೆಚ್. ಜ್ಞಾನೇಂದ್ರಪ್ಪ, ಶೇಖರಪ್ಪ, ಹೆಚ್.ಕೆ. ಚನ್ನಪ್ಪ ಮತ್ತಿತರರು ಭಾಗವಹಿಸಿದ್ದರು.

ಭಾರತೀಯ ಜನಕಲಾ ಸಮಿತಿ (ಇಪ್ಟಾ) ಜಿಲ್ಲಾಧ್ಯಕ್ಷ ಐರಣಿ ಚಂದ್ರು, ಆವರಗೆರೆ ಕೆ.ಬಾನಪ್ಪ, ಶರಣಪ್ಪ ಶ್ಯಾಗಲೆ, ನರೇಗಾ ರಂಗನಾಥ್, ಪಿ.ಕೆ. ಖಾದರ್ ಜಾಗೃತಿ ಗೀತೆಗಳನ್ನಾಡಿದರು. ನಿವೃತ್ತ ಶಿಕ್ಷಕ ಎ.ಡಿ. ರೇವಣಸಿದ್ಧಪ್ಪ ಸ್ವಾಗತಿಸಿದರು. 

ಇದೇ ವೇಳೆ ಚಿಂತಕ ಡಾ.ಎ.ಬಿ. ರಾಮ ಚಂದ್ರಪ್ಪ ಸಂಪಾದಿಸಿರುವ, ಮಾನವ ಬಂಧುತ್ವ ವೇದಿಕೆ ಪ್ರಕಾಶಿಸಿರುವ `ಮಹಾ ಬೆಳಕು’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

error: Content is protected !!