ಉತ್ತಮ ಬದುಕಿಗೆ ಆತ್ಮಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಮುಖ್ಯ

ಉತ್ತಮ ಬದುಕಿಗೆ ಆತ್ಮಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಮುಖ್ಯ

ಕುಂಬಳೂರು : ಚಿಟ್ಟಕ್ಕಿ ಸ್ಕೂಲ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ತರಳಬಾಳು ಶ್ರೀ ಪ್ರತಿಪಾದನೆ

ಮಲೇಬೆನ್ನೂರು, ಮೇ 14- ಜ್ಞಾನಕ್ಕೂ-ವಿಜ್ಞಾನಕ್ಕೂ ವ್ಯತ್ಯಾಸ ಇದೆ. ಆತ್ಮಜ್ಞಾನಕ್ಕೆ ವಿಜ್ಞಾನ ಎನ್ನುತ್ತಾರೆ. ಆದರೆ, ಜ್ಞಾನ ಎನ್ನುವುದು ಉಪನಿಷತ್ತುಗಳ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಅದಕ್ಕೆ ತನ್ನದೇ ಆದ ವಿಶೇಷತೆ ಇದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಅವರು ಭಾನುವಾರ ಕುಂಬಳೂರು ಬಳಿ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಮಲೇಬೆನ್ನೂರಿನ ಎಸ್‌ಡಿಎಲ್‌ ಎಜುಕೇಷನಲ್‌ ಟ್ರಸ್ಟ್‌ ವತಿಯಿಂದ ನಿರ್ಮಿಸಿರುವ ಚಿಟ್ಟಕ್ಕಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನ ನೂತನ ಕಟ್ಟಡ ಉದ್ಘಾಟಿಸಿ, ನಂತರ ನಡೆದ ವೇದಿಕೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಉತ್ತಮ ಬದುಕಿಗೆ ಆತ್ಮಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಬಹಳ ಮುಖ್ಯ ಎಂದು ಪ್ರತಿಪಾದಿಸಿದ ಶ್ರೀಗಳು, ಒಬ್ಬ ವ್ಯಕ್ತಿಯ ವಿದ್ವತ್ತನ್ನು ಬೆಳೆಸುವುದು ಶಿಕ್ಷಣ. ಶಿಕ್ಷಣ ಎನ್ನುವುದು ಕೇವಲ ಜ್ಞಾನ ಅಲ್ಲ. ಅದೊಂದು ವಿಶೇಷ ಜ್ಞಾನಾರ್ಜನೆ ಆಗಿದೆ ಎಂದರು.

ಬದುಕಿನಲ್ಲಿ ತಪ್ಪು-ಒಪ್ಪುಗಳನ್ನು ಅರ್ಥ ಮಾಡಿಕೊಂಡು ಸರಿದಾರಿಯಲ್ಲಿ ಹೋಗಬೇಕು. ಯಾವುದು ಸರಿ-ಯಾವುದು ತಪ್ಪು ಎನ್ನುವುದನ್ನು ತಿಳಿಸುವುದೇ ಶಿಕ್ಷಣವಾಗಿದೆ. ಶತ ದಡ್ಡನಾಗಿದ್ದ ಥಾಮಸ್‌ ಎಡಿಸನ್‌ ತನ್ನ ತಾಯಿಯಿಂದಾಗಿ ಜಗತ್ತಿನ ಶ್ರೇಷ್ಠ ಸಂಶೋಧಕನಾದ ಬಗ್ಗೆ ಪೋಷಕರಿಗೆ ತಿಳಿಸಿದ ಶ್ರೀಗಳು. ನಿಮ್ಮ ಮಕ್ಕಳು ದಡ್ಡರೆಂದು ಹೇಳದೆ ಅವರಿಗೆ ನೀನು ಜಾಣ ಎಂಬ ಸ್ಪೂರ್ತಿಯ ಮಾತುಗಳನ್ನು ಹೇಳಿ ಬಳಸಬೇಕು. ಮಕ್ಕಳನ್ನು ಬೇರೆ ಯವರ ಎದುರಿಗೆ ಅವಹೇಳನ ಮಾಡದೇ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿ ಒಳ್ಳೆಯ ಮಾರ್ಗದರ್ಶನ ಮಾಡಿ ಎಂದರು.

ಶಿಕ್ಷಕರು ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನೂ ನೀಡಬೇಕು. ಆಗ ಮಾತ್ರ ಮಕ್ಕಳು ಸಾಮಾನ್ಯ ಜ್ಞಾನ ತಿಳಿದುಕೊಳ್ಳಲು ಸಾಧ್ಯ ಎಂದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಮಾತನಾಡಿ, ಶಿಕ್ಷಣ ಎಂದರೆ ಅನಿಶ್ಚಿತ ಬದುಕಿಗೆ ನಿಶ್ಚಿತ ಕಾರ್ಯಕ್ರಮವಾಗಿದೆ. ಬರೀ ಅಂಕಪಟ್ಟಿ ಅಥವಾ ರಾಂಕ್‌ ಪಡೆದ ವಿದ್ಯಾರ್ಥಿಗಳ ಜೀವನ ಸಮೃದ್ಧಿಯಾಗಿಲ್ಲ ಎಂದರು.

ಗಣಿತ, ವಿಜ್ಞಾನ ಬಂದವರು ದಡ್ಡರಲ್ಲ. ಪೋಷಕರು ತಮ್ಮ ಮಕ್ಕಳು ಡಾಕ್ಟರ್‌, ಇಂಜಿನಿಯರ್ ಆಗಿಲ್ಲ ಎಂದು ಚಿಂತೆ ಮಾಡ ಬಾರದು. ಮಕ್ಕಳಲ್ಲಿ ಯಾವ ಗುಣವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ನಂತರ ಅವನಲ್ಲಿರುವ ಗುಣವನ್ನೇ ಪ್ರೋತ್ಸಾಹಿಸಬೇಕೆಂದು ತಿಳಿಸಿದರು. ಭಾರತ ಸೇರಿದಂತೆ ಜಗತ್ತಿನಲ್ಲಿರುವ ಸಾಧಕರು ಬರೀ ಶಿಕ್ಷಣ ಕಲಿತೇ ಸಾಧಕರಾಗಿಲ್ಲ. ಅವರವರ ಆಸಕ್ತಿಯ ಕ್ಷೇತ್ರದಲ್ಲಿ ಅನುಭವದ ಆಧಾರದ ಮೇಲೆ ಸಾಧನೆ ಮಾಡಿದ್ದಾರೆಂಬುದನ್ನು ಪೋಷಕರು ಅರ್ಥಮಾಡಿಕೊಂಡಾಗ ಮಾತ್ರ ನಿಮ್ಮ ಮಗುವು ಶ್ರೇಷ್ಠ ವ್ಯಕ್ತಿಯಾಗಲು ನೀವೇ ಕಾರಣರಾಗುತ್ತೀರಿ ಎಂದು ಡಾ. ಗುರುರಾಜ ಕರಜಗಿ ಅವರು ಸ್ಪೂರ್ತಿಯ ಮಾತುಗಳನ್ನು ಹೇಳಿದರು. 

ಮಗುವಿನಿಂದ ಬರೀ ಅಂಕ ನಿರೀಕ್ಷೆ ಮಾಡದೇ ಆ ಮಗುವಿನ ಚಟುವಟಿಕೆ ಗಮನಿಸುವುದು ಶಿಕ್ಷಕನ ಕರ್ತವ್ಯ ಆಗಿರಬೇಕು. ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವುದು ಬಹಳ ಮುಖ್ಯವಾಗಿದ್ದು ಮಾತನಾಡುವುದರಿಂದ ಬರುವುದಿಲ್ಲ. ಅದನ್ನು ನಾವು ಆ ರೀತಿ ನಡೆದುಕೊಂಡೇ ತೋರಿಸಬೇಕು. ಮಕ್ಕಳಿಗೆ ಬುದ್ಧಿ ಹೇಳುವ ನಾವು ಮೊದಲು ಸರಿಯಾಗಿ ನಡೆದುಕೊಳ್ಳಬೇಕು. ಮಾಡಿದಂತೆ ಮಾಡಬೇಡಿ, ಹೇಳಿದಂತೆ ಮಾಡಿ ಎಂಬ ಅರಿವು ಎಲ್ಲರಲ್ಲಿ ಬರಬೇಕು. ಮಕ್ಕಳೂ ಸಹ ನಾವು ಮಾಡಿದಂತೆ ಮಾಡುತ್ತಾರೆ. ಹಾಗಾಗಿ ನಾವು ಬಹಳ ಎಚ್ಚರದಿಂದಿರಬೇಕೆಂದು ಪೋಷಕರಿಗೆ ಡಾ. ಗುರುರಾಜ ಕರಜಗಿ ಕಿವಿಮಾತು ಹೇಳಿದರು.

ಕರ್ನಾಟಕ ಬ್ಯಾಂಕಿನ ಸಹಾಯಕ ಪ್ರಧಾನ ವ್ಯವಸ್ಥಾಪಕ ಹಯವದನ ಉಪಾಧ್ಯಾಯ ಮಾತನಾಡಿದರು. ಈ ವೇಳೆ ಕಟ್ಟಡದ ವಿನ್ಯಾಸಕಾರ ಸತೀಶ್‌ ಹಿಂಡೇರ್‌, ಕಟ್ಟಡದ ಗುತ್ತಿಗೆದಾರ ಬಿಸಲೇರಿ ಗಂಗಣ್ಣ ಅವರನ್ನು ಸನ್ಮಾನಿಸಲಾಯಿತು.

ಎಸ್‌ಡಿಎಲ್‌ ಎಜುಕೇಷನಲ್‌ ಟ್ರಸ್ಟ್‌ ಗೌರವಾಧ್ಯಕ್ಷ ಬಸವರಾಜಪ್ಪ ಎಸ್‌. ಚಿಟ್ಟಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ನೂತನ ಶಾಸಕ ಬಿ.ಪಿ. ಹರೀಶ್‌, ಎಸಿಟಿ ವ್ಯವಸ್ಥಾಪಕಿ ಡಾ. ಸವಿತಾ, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಡಾ. ಬಿ. ಚಂದ್ರಶೇಖರ್, ಡಾ. ಶ್ರೀನಿವಾಸ್‌, ಜಿ. ಮಂಜುನಾಥ್‌ ಪಟೇಲ್‌, ಸಿರಿಗೆರೆ ರಾಜಣ್ಣ, ಜಿಗಳಿಯ ಜಿ. ಆನಂದಪ್ಪ, ಯಕ್ಕನಹಳ್ಳಿ ಬಸವರಾಜಪ್ಪ, ಮಾಗಾನಹಳ್ಳಿ ಹಾಲಪ್ಪ, ತಳಸದ ಬಸವರಾಜ್‌, ಚಂದ್ರಶೇಖರ್‌ ಪೂಜಾರ್‌, ನಿಟ್ಟೂರಿನ ಇಟಗಿ ಶಿವಣ್ಣ, ಬಿ.ಜಿ ಧನಂಜಯ, ಎನ್‌.ಜಿ. ನಾಗೇಂದ್ರಪ್ಪ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿ ಶುಭ ಕೋರಿದರು.

ದಾವಣಗೆರೆ ಕದಳಿ ವೇದಿಕೆಯ ಮಹಿಳೆಯರು ವಚನ ಗಾಯನದ ಮೂಲಕ ಪ್ರಾರ್ಥಿಸಿದರು. ಟ್ರಸ್ಟ್‌ ಅಧ್ಯಕ್ಷ ಚಿಟ್ಟಕ್ಕಿ ರಮೇಶ್‌ ಸ್ವಾಗತಿಸಿದರು. 

ಆಡಳಿತಾಧಿಕಾರಿ ಎಸ್‌.ಕೆ. ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಮಹಾಂತೇಶ್‌ ಸ್ವಾಮಿ, ಪೊಲೀಸ್‌ ಮಂಜು, ಚಿಟ್ಟಕ್ಕಿ ನಾಗರಾಜ್‌ ವಂದಿಸಿದರು. 

ಶ್ರೀಗಳಿಗೆ ಮನವಿ : ಗೋವಿನಹಾಳ್‌ ಬಳಿ ತುಂಗಭದ್ರಾ ನದಿಯಿಂದ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸುವ ಬಗ್ಗೆ ನೂತನ ಸರ್ಕಾರಕ್ಕೆ ಮಾರ್ಗದರ್ಶನ ಮಾಡುವಂತೆ ಸಿರಿಗೆರೆ ಶ್ರೀಗಳಿಗೆ ಜಿಗಳಿಯ ಇಂದೂಧರ್‌, ನಂದಿತಾವರೆ ವಕೀಲ ತಿಮ್ಮನಗೌಡ ಮನವಿ ಪತ್ರ ಸಲ್ಲಿಸಿದರು.

error: Content is protected !!