ಐವತ್ತರ ಹೊಸ್ತಿಲಲ್ಲಿ ಜನತಾವಾಣಿ

ಐವತ್ತರ ಹೊಸ್ತಿಲಲ್ಲಿ ಜನತಾವಾಣಿ

ಮಧ್ಯ ಕರ್ನಾಟಕದ ಆಪ್ತ ಒಡನಾಡಿ `ಜನತಾವಾಣಿ’ ಇಂದಿಗೆ 50ನೇ ವರ್ಷಕ್ಕೆ ಕಾಲಿಡುತ್ತಿದೆ. ಬದಲಾವಣೆ ಜಗದ ನಿಯಮ ಎಂಬಂತೆ ಈ ಐವತ್ತು ವರ್ಷಗಳ ಸುದೀರ್ಘ ಪಯಣವನ್ನೊಮ್ಮೆ ಹಿಂದಿರುಗಿ ನೋಡಿದರೆ ಆಗಿರುವ ಬದಲಾವಣೆಗಳು ಅಚ್ಚರಿ ಪಡಿಸುತ್ತವೆ. 

1974ರಲ್ಲಿ ಇದ್ದ ಒತ್ತುವ ಯಂತ್ರದ ಬಳಕೆಯಿಂದ ಆರಂಭಗೊಂಡ ಎರಡು ಪುಟಗಳ ಪತ್ರಿಕೆ ಇಂದು ಸ್ವಯಂ ಚಾಲಿತ ಮುದ್ರಣ ಯಂತ್ರದಲ್ಲಿ ಬಣ್ಣಗಳಲ್ಲಿ ಎಷ್ಟು ಪುಟಗಳನ್ನಾದರೂ ಪ್ರಕಟಿಸುವ ಸಾಮರ್ಥ್ಯ ಹೊಂದಿರುವುದು. ಅಚ್ಚು ಮೊಳೆಯಿಂದ ಅತ್ಯಾಧುನಿಕ ಕಂಪ್ಯೂಟರ್‌ಗಳ ಬಳಕೆ, ಕೈ ಬರಹದ ಸುದ್ದಿಗಳ ಜಾಗದಲ್ಲಿ ಈ ಮೇಲ್ ವರದಿಗಳು. ಆಗುತ್ತಿರುವ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಂಡು ಮುನ್ನಡೆದಿದ್ದು `ಜನತಾವಾಣಿ’. 

ಬದಲಾಗುತ್ತಿರುವ ರಾಜಕೀಯ ಸನ್ನಿವೇಶಗಳೂ, ಸಾಮಾಜಿಕ ಜನ ಜೀವನ, ಮಾರುಕಟ್ಟೆ, ಜನರ ಮನಸ್ಥಿತಿ ಇವೆಲ್ಲವುಗಳನ್ನು  ಅವು ಹೇಗಿರುತ್ತವೆಯೋ ಹಾಗೆ ಯಾವುದೇ ಪೂರ್ವಾಗ್ರಹ ಗಳಿಲ್ಲದೆ ಓದುಗರಿಗೆ ದಾಖಲಿಸುತ್ತಾ ಸಾಗಿದೆ ಪತ್ರಿಕೆಯ ಈ ಪಯಣ.

ಎಲ್ಲವೂ ಬದಲಾಗುತ್ತಿರುವ ಈ ವೇಳೆಯಲ್ಲಿ ಬದಲಾಗದಂತೆ ಉಳಿದಿರುವುದು ಓದುಗರ ಪತ್ರಿಕೆಯ ಬಗೆಗಿನ ಪ್ರೀತಿ. ಇದು ನಮ್ಮ ಪತ್ರಿಕೆ ಎನ್ನುವ ಅವರ ಅಭಿಮಾನ. ಕೆಲವೊಮ್ಮೆ ಸ್ಥಳಾಭಾವದಿಂದ ವರದಿಗಳು ತಡವಾದಾಗಲೂ ಬೇಸರಿಸಿಕೊಳ್ಳದೆ ತಡವಾದರೂ ಪ್ರಕಟವಾಗಲಿ ಎಂಬ ಅಭಿಮಾನದ ಪ್ರೀತಿ ಬದಲಾಗದೆ ಮುಂದೆ ಸಾಗಿದೆ.

ಅಚ್ಚು ಮೊಳೆಯ ಕಾಲದಿಂದ 5ಜಿ ಮೊಬೈಲ್‌ವರೆಗಿನ ಈ ಪ್ರಯಾಣ ಅವಿಸ್ಮರಣೀಯ. ಅಶೋಕ ರಸ್ತೆಯಲ್ಲಿ 1974ರಲ್ಲಿ ಇದ್ದ ಸಣ್ಣ ಕಚೇರಿಯಲ್ಲಿ ಹೆಚ್.ಎನ್. ಷಡಾಕ್ಷರಪ್ಪ ಅವರು ಪತ್ರಿಕೆ ಆರಂಭಿಸಿದಾಗ, ಅವರಲ್ಲಿದ್ದ ಒಂದೇ ಕನಸೆಂದರೆ ಪತ್ರಿಕೆಯು ಜನರ ಆಪ್ತ ಒಡನಾಡಿ ಆಗಬೇಕು ಎಂಬುದು ಹಾಗೂ ಪತ್ರಿಕೆ ನಿಷ್ಪಕ್ಷಪಾತ ಕನ್ನಡಿ ರೀತಿ ಇರಬೇಕು ಎಂಬುದು ದೃಢ ನಿಲುವು. ಇದೇ ಕಾರಣಕ್ಕಾಗಿಯೇ ಪತ್ರಿಕೆ ಎಂದೂ ನಿಂತ ನೀರಾಗಲಿಲ್ಲ.

ಸ್ಥಳೀಯ ಪತ್ರಿಕೆಗಳನ್ನು ನಡೆಸಲು ಉಂಟಾಗುವ ನಿರಂತರ ಒತ್ತಡಗಳನ್ನು ಮೀರಿ ಓದುಗರೇ ತನ್ನ ಆದ್ಯತೆ ಎಂಬ ಮನೋಭಾವನೆ ಹೊಂದಿರುವ ಪತ್ರಿಕೆಗೆ ಅದರ ವಿಶ್ವಾಸಾರ್ಹ ಸುದ್ದಿಗಳೇ ಜೀವಾಳ. ಸದಾ ಜನರ ದನಿಯಾಗಿದ್ದುಕೊಂಡೇ ಬಂದಿರುವ ಪತ್ರಿಕೆಯ ಹಳೇ ಬೇರು ಹೊಸ ಚಿಗುರಿನ ಹಾದಿಯಲ್ಲಿ ಪರಿಶುದ್ಧತೆ, ಪ್ರಾಮಾಣಿಕತೆ ಹಾಗೂ ಪರಿಶ್ರಮಗಳೇ  ಧ್ಯೇಯ.


– ಎಂ.ಎಸ್. ವಿಕಾಸ್

error: Content is protected !!