ಮಾನಸಿಕ ಶ್ರಮ ಮುಕ್ತಿಯ ‘ಸ್ಮಾರ್ಟ್’ ಸಮಸ್ಯೆ…

ಸಮುದ್ರದ ಆಮೆಗಳು ಕಡಲ ತೀರದ ಸ್ವಲ್ಪ ದೂರದಲ್ಲಿ ಮೊಟ್ಟೆ ಇಡುತ್ತವೆ. ಮರಿಗಳು ಮೊಟ್ಟೆ ಒಡೆದುಕೊಂಡು ಕಷ್ಟ ಪಟ್ಟು ಸಮುದ್ರದ ಕಡೆ ಸಾಗುತ್ತವೆ. ಈಗ ತಾನೇ ಹುಟ್ಟಿದ ಮರಿಗಳಿಗೆ ಕಷ್ಟ ಕೊಡುವುದೇಕೆ ಎಂದು ಅವುಗಳನ್ನು ಹಿಡಿದು ಸಮುದ್ರಕ್ಕೆ ತೆಗೆದುಕೊಂಡು ಹೋಗಿ ಬಿಟ್ಟರೆ ಏನಾಗುತ್ತದೆ? ಅವು ಸಾಯುತ್ತವೆ! ಏಕೆಂದರೆ ಲಕ್ಷ ಲಕ್ಷ ವರ್ಷಗಳಿಂದ ಅವುಗಳು ಮರಳಿನಲ್ಲಿ ತೆವಳಿ ಸಮುದ್ರ ಸೇರುವ ಪದ್ಧತಿ ಬೆಳೆಸಿಕೊಂಡಿವೆ. ನೇರವಾಗಿ ಸಮುದ್ರಕ್ಕೆ ಬಿಟ್ಟರೆ ಸಹಜವಾಗಿ ನಡೆಯುವ ಬೆಳವಣಿಗೆ ತಪ್ಪುತ್ತದೆ.
ಮೊನ್ನೆ ಚಿಂತಕರೊಬ್ಬರು ನನ್ನ ಜೊತೆ ಮಾತಾಡುತ್ತಾ, ಮುಂದಿನ ಪೀಳಿಗೆ ಬಹಳ ಶ್ರೀಮಂತವಾಗಿರುತ್ತದೆ. ಹಿಂದೆಂದೂ ಕಾಣದ ಐಷಾರಾಮಿ ಜೀವನ ಅವರದ್ದಾಗಿರುತ್ತದೆ. ನಾವೆಲ್ಲರೂ ಕಷ್ಟಪಟ್ಟು ಉತ್ತಮ ಜಗತ್ತನ್ನು ಅವರಿಗೆ ಬಿಟ್ಟು ಹೋಗುತ್ತೇವೆ ಎಂದಾಗ ಆಮೆಗಳ ಈ ವರ್ತನೆ ನೆನಪಾಯಿತು.
ಜಗತ್ತು 20ನೇ ಶತಮಾನದಲ್ಲಿ ಹಿಂದೆಂದಿಗಿಂತ ಶ್ರೀಮಂತವಾಗಿತ್ತಷ್ಟೇ ಅಲ್ಲದೇ, ಮನುಷ್ಯನ ದೈಹಿಕ ಪರಿಶ್ರಮವನ್ನು ಗಣನೀಯವಾಗಿ ಕುಗ್ಗಿಸಿತ್ತು. 21ನೇ ಶತಮಾನದ ಆರಂಭದ ವೇಳೆಗೆ ದೈಹಿಕ ಪರಿಶ್ರಮ ಎಷ್ಟರ ಮಟ್ಟಿಗೆ ಕಡಿಮೆ ಆಗಿದೆ ಎಂದರೆ, ಮನುಷ್ಯನಿಗೆ ಸೋಂಕು ರೋಗಕ್ಕಿಂತ ಜೀವನ ಶೈಲಿಯ ರೋಗಗಳಾದ ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡಗಳೇ ಹೆಚ್ಚಾಗಿವೆ. ಈಗಿನ ಜನ ಸೋಂಕು ಕಾಯಿಲೆಗಿಂತ ಹೆಚ್ಚಾಗಿ ಜೀವನ ಶೈಲಿ ಬಗ್ಗೆ ಯೋಚಿಸುವಂತಾಗಿದೆ.
ಒಂದು ಕಾಲರಾ, ಸಿಡುಬು, ಪ್ಲೇಗು ಇತ್ಯಾದಿ ರೋಗಗಳಿಗೆ ಸಾವಿರಾರು ಹೆಣಗಳು ಬೀಳುತ್ತಿದ್ದವು. ಈ ರೋಗಗಳಿಗೆಲ್ಲಾ ದೇವರ ಹೆಸರಿಟ್ಟು, ಎಡೆ ಕೊಟ್ಟು ಊರು ಬಿಟ್ಟು ಹೋಗುವಂತೆ ಹರಕೆ ಹೊತ್ತುಕೊಳ್ಳುತ್ತಿದ್ದರು. ಆದರೆ, ಈ ಭಯಂಕರ ರೋಗಗಳೆಲ್ಲಾ ಆಧುನಿಕ ಪ್ರಗತಿಯ ಕೇವಲ ಒಂದೆರಡು ಗುಳಿಗೆಗಳಿಗೆ ಕಂಡು ಕೇಳರಿಯದಂತೆ ಓಡಿ ಹೋಗುತ್ತಿವೆ. ಇನ್ನೊಂದು ಹತ್ತಿಪ್ಪತ್ತು ವರ್ಷಗಳಲ್ಲಿ ಕ್ಯಾನ್ಸರ್ ರೀತಿಯ ರೋಗಗಳೂ ಸಹ ಸಿಡುಬು – ಕಾಲರಾಗಳಂತೆ ಜಾಗ ಖಾಲಿ ಮಾಡಲಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.
ಜನನದ ಸಂದರ್ಭದಲ್ಲೇ ದೈಹಿಕ ಪರಿಶ್ರಮ ಶೂನ್ಯವಾಗುತ್ತಿದೆ. ಏಕೆಂದರೆ  ಸಹಜ ಹೆರಿಗೆಯ ಬದಲು ಸಿಸೇರಿಯನ್‌ಗಳ ಸಂಖ್ಯೆ ಹೆಚ್ಚಾಗಿ, ಸಿಸೇರಿಯನ್ ಆಗುವುದೇ ನಾರ್ಮಲ್ ಎಂಬಂತಾಗಿದೆ. ಹೀಗೆ ಶ್ರಮವಿಲ್ಲದೇ ಭೂಮಿಗೆ ಅವತರಿಪ ಹೊಸ ಜನಾಂಗ, ಜೀವನದ ಉದ್ದಕ್ಕೂ ಪರಿಶ್ರಮಕ್ಕೆ ವಿದಾಯ ಹೇಳುತ್ತಲೇ ಬೆಳೆದಿದೆ.
ಈಗ 21ನೇ ಶತಮಾನ ಇನ್ನೊಂದು ಹೆಜ್ಜೆ ಮುಂದೆ ಸಾಗುತ್ತಿದೆ. ದೈಹಿಕ ಶ್ರಮಕ್ಕಷ್ಟೇ ಅಲ್ಲದೇ ಮಾನಸಿಕ ಶ್ರಮಕ್ಕೂ ವಿದಾಯ ಹೇಳುತ್ತಿದೆ. . ಮನೆ ಕೆಲಸವೆಲ್ಲಾ ಸ್ವಯಂ ಚಾಲಿತದ ಹಂತ ದಾಟಿ, ಈಗ ಕೃತಕ ಬುದ್ಧಿವಂತಿಕೆಯ ಯಂತ್ರಗಳು ಬರುತ್ತಿವೆ. ಮೊಬೈಲ್ ಅಷ್ಟೇ ಸ್ಮಾರ್ಟ್ ಅಲ್ಲದೇ ಜಗತ್ತಿನ ಬಹುತೇಕ ಯಂತ್ರಗಳು ಸ್ಮಾರ್ಟ್ ಆಗುತ್ತಿವೆ. 

ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಕಸ ಗುಡಿಸುವುದು ಇತ್ಯಾದಿ ಕೆಲಸಗಳಿಗೆ ಯಂತ್ರಗಳು ಬಂದಿದ್ದು ಹಳೆಯದಾಯಿತು. ಈಗ ಅವುಗಳು ಕೃತಕ ಬುದ್ಧಿವಂತಿಕೆಯಿಂದ ಸ್ಮಾರ್ಟ್ ಆಗುತ್ತಿವೆ. ಸಾಫ್ಟ್‌ವೇರ್‌ ಬರೆಯುವುದರಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಯವರೆಗೆ ಎಲ್ಲೆಡೆ ಕೃತಕ ಬುದ್ಧಿವಂತಿಕೆಯ ಪಾತ್ರ ಹೆಚ್ಚಾಗುತ್ತಿದೆ.
ಆದರೆ, ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರಲೇಬೇಕು ಎಂಬುದು ಜಗತ್ತಿನ ಸಮಸ್ಯಾತ್ಮಕ ನಿಯಮ. ಹೀಗಾಗಿ ಸೌಲಭ್ಯಗಳಿಗೆಲ್ಲಾ ಒಂದಿಷ್ಟು ಸಮಸ್ಯೆಗಳು ಸೃಷ್ಟಿಯಾಗದೇ ಇದ್ದರೆ ಬದುಕಿದ್ದೂ ಪ್ರಯೋಜನವೇನು? ಹೀಗಾಗಿ ಮುಂದಿನ ಪೀಳಿಗೆಗೆ ಶ್ರೀಮಂತಿಕೆಯೇ ಶಾಪವಾಗಲಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ.
ಇದಕ್ಕೆ ಸರಳ ಉದಾಹರಣೆ ನಮ್ಮ ಮನೆಗಳಲ್ಲೇ ಕಂಡು ಬರುತ್ತಿದೆ. ಅದೆಂದರೆ, ಮಕ್ಕಳಿಗೆ ಊಟ ಮಾಡಿಸುವುದು. §ನಮಗೆ ಊಟದ ಸೂಚನೆ ಸಾಕಿತ್ತು, ಸರಿಯಾಗಿ ಬಾರಿಸುತ್ತಿದ್ದೆವು. ಈಗ ಬಾರಿಸುತ್ತೇವೆ ಎಂದರೂ ಊಟ ಮಾಡುತ್ತಿಲ್ಲ’ ಎಂಬ ರಾಗ ಸಾಕಷ್ಟು ಮನೆಗಳಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ದೊಡ್ಡ ಕಾರಣ ಎಂದರೆ §ಹಸಿವಿನ ರಾಕ್ಷಸನ ಸಂಹಾರ’ ಮಾಡಿರುವುದು.
ಒಂದು ಕಾಲದಲ್ಲಿ ಹಸಿವು ಹೊಟ್ಟೆಯನ್ನು ಇನ್ನಿಲ್ಲದಂತೆ ಕಾಡುತ್ತಿತ್ತು. ಅಂತಹ ಹಸಿವನ್ನು ಕೃಷಿ – ಹೈನುಗಾರಿಕೆ ಇತ್ಯಾದಿ ಕ್ರಾಂತಿಗಳು ನೀಗಿಸಿವೆ. ಹೀಗಾಗಿ ನಮ್ಮ ಮಕ್ಕಳಿಗೆ ಊಟ ಸಲೀಸಾಗಿ ಸಿಗುವಂತಾಗಿದೆ. ಹಸಿವು ಮರೆತಂತಿರುವ ಮಕ್ಕಳಿಗೆ ಊಟ ಮಾಡಿಸುವುದೇ ತಾಯಂದಿರಿಗೆ ಇನ್ನಿಲ್ಲದ ಸಮಸ್ಯೆ.
ದೈಹಿಕ ಶ್ರಮಕ್ಕೆ ವಿದಾಯ ಹೇಳಿಯೇ ಈ ಪರಿಸ್ಥಿತಿ ಆಗಿದೆ. ಕೃತಕ ಬುದ್ಧಿವಂತಿಕೆ ಕಾರಣದಿಂದಾಗಿ ಮುಂದಿನ ಪೀಳಿಗೆ ಮಾನಸಿಕ ಶ್ರಮದಿಂದ ಮುಕ್ತವಾಗಲಿದೆ. ಹೀಗೆ ಏನೊಂದು ಶ್ರಮವಿಲ್ಲದ ಯುವ ಸಮೂಹ ಯಾವ ರೀತಿ ವರ್ತಿಸಬಹುದು? ಗೊತ್ತಿಲ್ಲ. ಅಂತಹ ಪೀಳಿಗೆ ನೋಡಿದ ಮೇಲೆಯೇ ಸ್ಪಷ್ಟ ಉತ್ತರ ಸಿಗಲಿದೆ.
ನಾವು ಪ್ರಪಂಚವನ್ನೆಲ್ಲಾ ಬದಲಿಸಬಹುದು. ಆದರೆ, ದೇಹದ ಆಂತರಿಕ ರಚನೆಯನ್ನು ಬದಲಿಸುವುದು ಸುಲಭವಲ್ಲ. ಅದರಲ್ಲೂ ಮೆದುಳಿನ ಕಾರ್ಯ ನಿರ್ವಹಣೆಯ ಬಗ್ಗೆ ಅರಿವಾಗಿರುವುದೇ ತೀರಾ ಕಡಿಮೆ. ಹೀಗಿರುವಾಗ ಬದಲಿಸುವ ಪರಿ ದೂರವೇ ಉಳಿಯಿತು. ಹೀಗಾಗಿ ಹೊರ ಜಗತ್ತು ವೇಗವಾಗಿ ಬದಲಾದರೆ, ಅದಕ್ಕೆ ಹೊಂದಿಕೊಳ್ಳುವಾಗ ಸಾಕಷ್ಟು ಕಷ್ಟವಾಗುತ್ತದೆ.
ಉದಾಹರಣೆಗೆ, ಹಿಂದೊಂದು ಕಾಲದಲ್ಲಿ ಸಕ್ಕರೆಯುಕ್ತ ಆಹಾರ ಸಿಗುವುದು ಕಷ್ಟವಾಗಿತ್ತು. ಹೀಗಾಗಿ ನಮ್ಮ ದೇಹ ಸದಾ ಸಕ್ಕರೆ ಸೇವನೆಗೆ ಹಾತೊರೆಯುತ್ತದೆ. ಬದಲಾದ ಕಾಲದಲ್ಲಿ ಸಕ್ಕರೆ ಅಂಶದ ಆಹಾರ ದಂಡಿಯಾಗಿ ಸಿಗುತ್ತಿದೆ. ಸಕ್ಕರೆ ಹೆಚ್ಚಾಗಿ ಹತ್ತಾರು ಕಾಯಿಲೆಗಳೂ ಬರುತ್ತಿವೆ.  ಆದರೂ ನಮ್ಮ ದೇಹ ಸಿಹಿ ಬಯಸುವುದನ್ನು ನಿಲ್ಲಿಸುವುದಿಲ್ಲ. ಏಕೆಂದರೆ ಕೋಟ್ಯಂತರ ವರ್ಷಗಳಿಂದ ಬಂದ ಅಭ್ಯಾಸ ನಿಲ್ಲಿಸಲಾಗದು.
ಹೀಗೆಯೇ ದೈಹಿಕ ಹಾಗೂ ಮಾನಸಿಕ ಪರಿಶ್ರಮಗಳು ಮನುಷ್ಯನ ಆರೋಗ್ಯಕರ ಜೀವನಕ್ಕೆ ಬೇಕೇ ಬೇಕು. ಒಂದು ವೇಳೆ ಈ ಪರಿಶ್ರಮಗಳಿಲ್ಲದಿದ್ದರೆ ಮನುಷ್ಯನ ಇಡೀ ಜೀವನ ಅಸಮತೋಲನವಾಗುತ್ತದೆ. ಮುಂದಿನ ಪೀಳಿಗೆ ದೈಹಿಕ ಹಾಗೂ ಮಾನಸಿಕ  ಪರಿಶ್ರಮದಿಂದ ಮುಕ್ತವಾಗಿ §ಶ್ರೀಮಂತಿಕೆ’ಯಿಂದ ಬದುಕುವುದು, ಒಂದು ಸಂತೋಷದ ವಿಷಯದ ಜೊತೆಗೆ, ಸವಾಲಿನ ವಿಷಯವೂ ಆಗಿದೆ ಎಂಬುದು ಸ್ಪಷ್ಟ.

ಎಸ್.ಎ. ಶ್ರೀನಿವಾಸ್‌
9538641532
[email protected]

error: Content is protected !!