ಭಕ್ತರನ್ನು ಕೈಬೀಸಿ ಕರೆಯುವ ‘ಹರಪನಹಳ್ಳಿ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆ’

 

ಭರತ ಹುಣ್ಣಿಮೆಯಂದು ಮೈಲಾರದಲ್ಲಿ ನಡೆಯುವ ಜಾತ್ರೆಯಂತೆ ಹರಪನಹಳ್ಳಿಯಲ್ಲಿಯೂ ಸಹ ಶ್ರೀ ಮೈಲಾರ ಲಿಂಗೇಶ್ವರ ಜಾತ್ರೆಯು ವಿಜೃಂಭಣೆಯಿಂದ ನಡೆಯಲಿದೆ.

ಅವರಾತ್ರಿ ಅಮಾವಾಸ್ಯೆ (ಮಾಗದ ಅಮಾವಾಸ್ಯೆ) ಮುಗಿದ 7ನೇ ದಿನಕ್ಕೆ ಶ್ರೀ ಸ್ವಾಮಿಯು ಡೆಂಕನ ಮರಡಿಯನ್ನು ರಾತ್ರಿ 9.30 ರಿಂದ 10.30 ರೊಳಗೆ (ಪಂಚಾಂಗದ ಪ್ರಕಾರ) ತಿಥಿಯನ್ನು ನೋಡಿ ಏರುತ್ತದೆ. ಅಂದು ದಂಡು ಅಂದರೆ ಮೈಲಾರ ಲಿಂಗೇಶ್ವರ ಸ್ವಾಮಿಯ ಭಕ್ತರು ಸೇರಿ ಡೆಂಕನ ಮರಡಿಯಲ್ಲಿ ಕಡುಬಿನ ಕಾಳಗವನ್ನು ಮಾಡಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವರು.

ಕಾರಣಿಕ ಹೇಳುವ ಗೊರವಪ್ಪನವರು ಸ್ವಾಮಿಯ ಮರಡಿ ಏರಿದ ದಿನದಿಂದ ಭರತ ಹುಣ್ಣಿಮೆಯ ದಿನದವರೆಗೂ ಪೂಜೆ ಬಂದ ದಿವಸಗಳವರೆಗೆ (9 ದಿನಗಳ ಕಾಲ) ಉಪವಾಸ ಇರುವರು. ಡೆಂಕನ ಮರಡಿ ಏರಿದ ದಿನದಿಂದ ಹುಣ್ಣಿಮೆಯವರೆಗೂ ದೇವಸ್ಥಾನ ದಲ್ಲಿ ಗಂಟಿಯ (ಗಂಟಿಯನ್ನು ಯಾರು ಮುಟ್ಟದಂತೆ ಕಟ್ಟಿರುತ್ತಾರೆ) ಶಬ್ಧನೂ ಮಾಡುವಂತಿಲ್ಲ. ಅಂದರೆ ಅಲ್ಲಿ ಪೂಜೆ ಅಷ್ಟಾಗಿ ನಡೆಯುವುದಿಲ್ಲ. ಪೂಜೆ ಏನಿದ್ದರೂ ಆ 9 ದಿವಸವೂ ಕೂಡ ಡೆಂಕನ ಮರಡಿಯಲ್ಲಿಯೇ.

ಈ 9 ದಿವಸಗಳೂ ಸಹ ಗೊರವಪ್ಪನವರು ದಂಡಿನ ಮೇಲೆ (ಹಳ್ಳಿಗಳ, ಭಕ್ತಾದಿಗಳ ಹತ್ತಿರ) ಭಿಕ್ಷಕ್ಕೆ ಹೊರಡುವರು. ಭಿಕ್ಷೆಯಿಂದ ಬಂದಂತಹ ದವಸ ಧಾನ್ಯಗಳಿಂದ ಮರಡಿಯಲ್ಲಿ ಮುದ್ದೆ ಮತ್ತು ಸೊಪ್ಪಿನ ಸಾರನ್ನು ಎಷ್ಟೇ ಜನ ಭಕ್ತರೂ ಬಂದರು ಪ್ರಸಾದವನ್ನು ನೀಡುತ್ತಾರೆ. ಇದು ಪ್ರತಿ ದಿನ ಮುಂಜಾನೆ ಮತ್ತು ಸಂಜೆ ನಡೆಯುತ್ತದೆ.

ಭರತ ಹುಣ್ಣಿಮೆ ದಿನ ಬೆಳಗಿನ ಜಾವದಲ್ಲಿ ಶ್ರೀ ಮೈಲಾರ ಲಿಂಗೇಶ್ವರನು ಮಹಿಸಾಸುರ ಮತ್ತು ಮಲ್ಲಾಸುರರನ್ನು ಸಂಹಾರ ಮಾಡಿದ ದಿನದಂದು ಡೆಂಕನ ಮರಡಿಯನ್ನು ಏರುವನು. ಆಗಿನ ಕಾಲದಲ್ಲಿ ಕತ್ತಿ ಗುರಾಣಿಗಳು ಜಳಪಿಸುತ್ತಿದ್ದವು. ಆದರೆ, ಇಂದು ಸ್ವಾಮಿಯ ಹೊರೆಯನ್ನು ಹೊತ್ತಂತಹ ಗೊರವಪ್ಪನವರ ಢಮರುಗ, ಪಾರಿಗಂಟೆ, ಕಾಯಿಕೋಲು, ನಗರಿಯಿಂದ ಶ್ರೀ ಸ್ವಾಮಿಯನ್ನು ಬರಮಾಡಿಕೊಳ್ಳುವರು. ಎಲ್ಲಾ ಪೂಜೆಗಳು ಮುಗಿದ ನಂತರ ಅಲ್ಲಿ ಒಂದು ಸತ್ಯವನ್ನು ತೋರಿಸುವನು. ಅದೇನೆಂದರೆ, ಒಂದು ಮಡಿಕೆಯಲ್ಲಿ ಹಾಲನ್ನು ತೆಗೆದುಕೊಂಡು ಬಂದು ಭೂತಾಳಗುಣಿಯಲ್ಲಿ ಇಟ್ಟು ಹಾಲನ್ನು ಕಾಯಿಸುವರು. ಆ ಹಾಲು ಉಕ್ಕುತ್ತಾ ಉಕ್ಕುತ್ತಾ ಯಾವ ದಿಕ್ಕಿನಲ್ಲಿ ವಾಲುತ್ತದೆಯೋ ಆ ದಿಕ್ಕಿನ ಪ್ರದೇಶದಲ್ಲಿ ಸಮೃದ್ಧವಾಗಿ ಮಳೆ-ಬೆಳೆ ಬರುತ್ತದೆ ಎನ್ನುವ ಪ್ರತೀತಿಯೂ ಕೂಡ ಇಲ್ಲಿದೆ.

ಪಡವಿಗೆ ದೊಡ್ಡವ ಗುಡ್ಡದು ರಾಯನು
ಸೆಡಗರ ನುಡಿ ಮೇಲ್ ಪೂರೈ ಪೂರೈ…
ಮನರಿಗೊಳ್ಳು ಮಾ ಪ್ರೀತಿವಂತನು
ಮುದಿಯ ಮಲ್ಲ ಮೈಲಾರವೇನು?
ಬೇಗು ಬೆಳಗು ತಿರುಗುತಲೈತ್ರಿ
ಸಪನಿ ಪಾರಿ ಗಂಟದು ಏನೈಯಿ
ತಾಸು ತಾಸುಗೊಮ್ಮೆ ಹೊಡೆಯುತಲೈತ್ರಿ
ಅದೇ ಒಂದು ನಗರಿಯೇನು
ಸದ್ದವಿಲ್ಲದೇ ಎದ್ದು ಬಂದನವ್ವ
ತೈತೈ ಕುಣಿಲಿಕ ಚೇಜಿ ಮರಿ
ಡೆಂಕನ ಮರಡಿಗೆ
ಮೂರತವಾದನು ಶೀಲವಂತ ಜಜ್ಜುರಿ…

ಈ ರೀತಿಯಾದ ಜಾನಪದ ಪದವನ್ನು ಹೇಳಲಾಗುತ್ತದೆ. ನಂತರ ಸಂಜೆ 5 ಗಂಟೆ ಸುಮಾರಿಗೆ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯು ಮುಂದಿನ ಕಾಲಜ್ಞಾನವನ್ನು ಜನಸಮೂಹಕ್ಕೆ ತಿಳಿಸಲು ಡೆಂಕನ ಮರಡಿಯಿಂದ ಕಾರಣಿಕದ ಕಟ್ಟೆಗೆ ಬಂದು ಬಿಲ್ಲನ್ನೇರಿ ಸದ್ದಲೇ ಎನ್ನುತ್ತಾ ನಾಲ್ಕು ನುಡಿಗಳನ್ನು ಹೇಳುವನು. ಆ ನಾಲ್ಕು ನುಡಿಗಳು ಜಗತ್ತಿನ ಆಗು-ಹೋಗುಗಳ ವಾಸ್ತವದ ಬಗ್ಗೆ ಒಗಟಿನ ರೂಪದಲ್ಲಿ ಬಿತ್ತರಿಸಿದ ನಂತರ, ಸ್ವಾಮಿಯು ಗುಡಿಯನ್ನು ತುಂಬುವನು (ದೇವಸ್ಥಾನದಲ್ಲಿ ಹೋಗುವನು) ಇಲ್ಲಿಯೂ ಒಂದು ಸ್ವಾರಸ್ಯಕರ ಪವಾಡವೊಂದು ನಡೆಯುತ್ತದೆ. ಅದೇನೆಂದರೆ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ಹೆಂಡತಿ ಗಂಗೆಮಾಳಮ್ಮನಿಗೆ ನಾನೊಂದು ಪವಾಡ ಮಾಡೇನಿ ಈಗ ನೀನೊಂದು ಪವಾಡ ಮಾಡು ಎಂದು ಹೇಳುತ್ತಾನಂತೆ, ಆಗಲಿ ಸ್ವಾಮಿ ಹೇಳಿದಕ್ಕೆ ಒಪ್ಪುತ್ತಾಳೆ. ಮಾರನೇ ದಿನ ಸ್ವಾಮಿಯು ಉಕ್ಕಿನ ಕೋಟೆಯನ್ನು ನಿರ್ಮಿಸಿ, ಇದನ್ನು ಹೊಡೆ ಎಂದು ಹೇಳುತ್ತಾನೆ, ಆಗ ಗಂಗೆಮಾಳಮ್ಮ ಏಳುಕೋಟಿ ಏಳುಕೋಟಿಗೋ ಎಂದು ಆ ಉಕ್ಕಿನ ಕೋಟೆಯನ್ನು ಪುಡಿ ಪುಡಿ ಮಾಡು ತ್ತಾನೆ. ಗಂಗೀ ನೀನು ನನ್ನ ಹೆಸರನ್ನು ನೆನೆದು ಈ ಉಕ್ಕಿನ ಕೋಟಿಯನ್ನು ಪುಡಿ ಮಾಡಿದಿಯಾ, ನನ್ನ ಹೆಸರನ್ನು ನೆನೆಯದೇ ನೀನು ನಿನ್ನ ಪವಾಡ ತೋರಿಸು ಎನ್ನುತ್ತಾನೆ. ಆಗ ಕಬ್ಬಿಣದ ಸರಪಳಿಯನ್ನು ನಿರ್ಮಿಸಿ, ಅದನ್ನು ಕೀಳಲು ಹೇಳುತ್ತಾನೆ. ಆಗ ಕೋಪಗೊಂಡಿದ್ದ ಗಂಗೆ ಮಾಳಮ್ಮ, ಅವ್ವ ಅವ್ವಾ ಎಂದು ಹೇಳುತ್ತಾ, ಆ ಕಬ್ಬಿಣ ಸರಪಳಿಯನ್ನು ನುಗ್ಗು ಮಾಡುತ್ತಾಳೆ. ಆ ಗಂಗೆಯ ಆರ್ಭಟ ಹೇಗೆ ಇರುತ್ತದೆ ಎಂದು ಸಾಕ್ಷಾತ್ ಶಿವನಾದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯನ್ನೇ ನುಂಗಲು ಹೋಗುತ್ತಾಳೆ ಎನ್ನುವ ಹಳ್ಳಿಯ ಸೊಗಡಿನಲ್ಲಿ, ಜಾನ ಪದ ಕಲೆಯಲ್ಲಿ ಪದದ ರೂಪದಲ್ಲಿ ಕಟ್ಟಿ ಗೊರವರು ಹಾಡುತ್ತಾರೆ. ಇಂತಹ ಸಾವಿರಾರು ಪವಾಡಗಳು ಹಾಡಿನ ರೂಪದಲ್ಲಿ ಇಂದಿಗೂ ಗೊರವರು ಹಾಡುವುದುಂಟು.

ಎಲ್ಲಾ ಕಾರ್ಯಕ್ರಮಗಳು ನಡೆದ ನಂತರ ಗಂಗೆಮಾಳಮ್ಮ ಮತ್ತು ಮೈಲಾರಲಿಂಗೇಶ್ವರ ದೇವರುಗಳು ದೇವಸ್ಥಾನದಲ್ಲಿ ಕೂರಿಸುವರು. ಆಗಿನ ಕಾಲದಿಂದ ನಡೆಸಿಕೊಂಡು ಬಂದಂಥಹ ಸಂಪ್ರದಾಯವನ್ನು ಇಂದಿಗೂ ಕೂಡ ದೇವಸ್ಥಾನದ ಗೌಡ್ರು ಸಮ್ಮುಖದಲ್ಲಿ ಹರಪನಹಳ್ಳಿಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಕಾಣಬಹುದಾಗಿದೆ.ಸರಪಳಿ ಪವಾಡದ ಬಗ್ಗೆ…

ಶ್ರೀ ಮೈಲಾರಲಿಂಗೇಶ್ವರ ಕಾರಣಿಕವನ್ನು
ನುಡಿದು ಬರುತ್ತಾನೆ.
ಕರಿಯಲ್ದ ಕಟ್ಟಿ ಬಿಟ್ಟು ಕಾರಣಿಕದ ಕಟ್ಟಿಗೆ
ಬಂದು ಮುಂದೆಲ್ಲಾ ಕಾಲಿಜ್ಞಾನ ಇಂದು ಮಾಡಿ ನುಡುಸುತಾನ ಒಲದು ಬಾರನು
ಒಲಿದು ಬಾರನಮ್ಮ ನೀಲ ಮನೆಗೆ ಬಾರನು
ಸ್ವಾಮಿ ಕರೆದರೂ ಬಾರನು…
ಆರು ಸಾವಿರ ಏಳು ಸಾವಿರ ಕಾವಿಕೋಲು
ದೀವಿಟಿಗೆ ಅಪ್ಪ ಮೈಲಾರಲಿಂಗ ಒಪ್ಪದಿಂದ ನುಡಿಸುತಾನ್ ಒಲದು ಬಾರನು
ಒಲದು ಬಾರನಮ್ಮ ನೀಲ ಮನೆಗೆ
ಬಾರನು ಸ್ವಾಮಿ ಕರೆದರೆ ಬಾರನು..
ಸುತ್ತೆಲ್ಲಾ ಪರಿಸಿರೆಲ್ಲ ಒತ್ತಿಗೆ ನಿಲ್ಲೀರಯ್ಯ
ಮುತ್ತಿನ ಪಲ್ಲಕ್ಕಿಯೊಳಗೊಂದು ಎತ್ತೊಂದುಚೌರೊಂದು ಹಾರಸುತಾರ್
ಒಲಿದು ಬಾರನು ಒಲಿದು ಬಾರನಮ್ಮ ನೀಲ ಮನೆಗೆ ಬಾರನುಸ್ವಾಮಿ ಕರೆದರೆ ಬಾರನು..
ಹಿಂದೆ ಮುಂದೆ ನೋಡಿದವರ ಮುಂದಕ ತಾನು ಕರೆಸುತಾನ ಕಬ್ಬಿಣದ ಹಗ್ಗಗಳೆಲ್ಲ ನುಗ್ಗು ಮಾಡೊಂದು ಹರಿಯುತಾನ್
ಒಲದು ಬಾರನು ಒಲದು ಬಾರನಮ್ಮ ನೀಲ ಮನೆಗೆ ಬಾರನು ಸ್ವಾಮಿ ಕರೆದರೆ ಬಾರನು…
ಸ್ವಾಮಿಯು ಮಾಡಿದಂತಹ ಮತ್ತು ಶ್ರೀ ಗಂಗಿಮಾಳಮ್ಮ ದೇವಿಯು ಮಾಡಿದಂತಹ ಪವಾಡದ ಬಗ್ಗೆ ಜಾನಪದಲ್ಲಿ ಅನೇಕ ಕಥೆಗಳನ್ನು ಹಾಡಿನ ರೂಪದಲ್ಲಿ ಹೇಳಲಾಗಿದೆ.

ಶತಮಾನಗಳಷ್ಟು ಇತಿಹಾಸವಿರುವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯು ಅಂದಿನ ಕಾಲದಲ್ಲಿ ನಿಚ್ಚೇನಹಳ್ಳಿಯ ಬ್ರಾಹ್ಮಣ ಕುಟುಂಬದ ಗೌಡ್ರ ವಂಶಸ್ಥರು ಸ್ವಾಮಿಯ ಸಕಲ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿಯ ಪವಾಡ ಮತ್ತು ಶ್ರೀ ಮೈಲಾರಲಿಂಗ ಸ್ವಾಮಿಯ ಭಕ್ತರು ಅದೇ ರೀತಿ ಸಹಕಾರವನ್ನು ನೀಡುತ್ತಾ ಜಾತ್ರೆಯು ವಿಜೃಂಭಣೆ ಯಿಂದ ನಡೆಯಲು ಕಾರಣೀಭೂತರಾಗಿದ್ದಾರೆ.

ಕಾರಣಿಕದ ಗೊರವಪ್ಪ : ಮತ್ತಿಹಳ್ಳಿಯ ಕೋಟೆಪ್ಪ ಕಾರಣಿಕದ ಗೊರವಪ್ಪನವರು. ಇವರು ಅಮಾವಾಸ್ಯೆ ಮುಗಿದ 7ನೇ ದಿನಕ್ಕೆ ಸ್ವಾಮಿಯು ಡೆಂಕನ ಮರಡಿಯನ್ನು ಏರಿದ ದಿನದಿಂದ 9 ದಿನಗಳ ಉಪವಾಸವಿದ್ದು, ಭಾರತ ಹುಣ್ಣಿಮೆಯ ದಿನದಂದು ಸ್ವಾಮಿಯು ಕಾರಣಿಕ ನುಡಿಯುವರು.

ಶ್ರೀ ಸ್ವಾಮಿಯ ದಂಡು : ದೇವಸ್ಥಾನದ ಗೌಡ್ರ ಸಮ್ಮುಖದಲ್ಲಿ ಸರಪಳಿ ಪವಾಡವನ್ನು ಕಂಚಿಕೇರಿ ವಂಶಸ್ಥರು, ಪಾರಿ ಗಂಟೆಯ ಸೇವೆಯನ್ನು ಪಾರಿ ವಂಶಸ್ಥರು, ಇವರೆಲ್ಲರನ್ನೂ ಒಟ್ಟಿಗೆ ನಡೆಸಿಕೊಂಡು ಹೋಗುವಂತಹ ಹೊಣೆಯನ್ನು ಗಣೇಚಾರಿ ಮನೆತನದವರು ಸೇರಿ ಈ ಸ್ವಾಮಿಯನ್ನು ಸೇವೆ ಮಾಡುತ್ತಾರೆ. ಇದು ವಂಶಪಾರಂಪರೆಯಾಗಿ ಬಂದಂತಹ ಸೇವೆಯಾಗಿದ್ದು, ಈ ವಂಶದವರಿಗೆ, ಸ್ವಾಮಿಗೆ ಸಂಬಂಧಪಟ್ಟಂತಹ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಹರಪನಹಳ್ಳಿ ಭಾರತ ಹುಣ್ಣಿಮೆಗೆ ಕಾರಣಿಕವಾದರೆ, ಮೈಲಾರದಲ್ಲಿ ಹುಣ್ಣಿಮೆಯಾಗಿ ಎರಡನೇ ದಿನ ಕಾರಣಿಕವಾಗುತ್ತದೆ. ಅಂದರೆ ಇದರರ್ಥ ಹರಪನಹಳ್ಳಿಯಲ್ಲಿರುವ ಮೈಲಾರ ಸ್ವಾಮಿಯು ಒಗಟನ್ನು ಹೇಳುತ್ತಾನಂತೆ; ಮೈಲಾರದಲ್ಲಿರುವ ಸ್ವಾಮೀಯು ಒಗಟನ್ನು ಬಿಡಿಸುವನಂತೆ ಎನ್ನುವ ಪ್ರತೀತಿಕೂಡ ಇದೆ.

ಚಂದ್ರಶೇಖರ ಹೆಚ್. ಕಂಚೀಕೆರೆ

error: Content is protected !!