ಹರಿಹರದ ಬಂಜಾರ ಸಮಾಜದ ವತಿಯಿಂದ ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ
ಹರಿಹರ, ಸೆ.18- ಬಹಿರಂಗ ಚರ್ಚೆಗೆ ಒಳಪಡಿಸದೆ ಸದಾಶಿವ ಆಯೋಗದ ವರದಿ ಜಾರಿಗೆ ತರದಂತೆ ಆಗ್ರಹಿಸಿ ಬಂಜಾರ ಸಮಾಜ, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಶುಕ್ರವಾರ ಶಾಸಕ ಎಸ್. ರಾಮಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಬಂಜಾರ ಸಮಾಜದ ಕಾರ್ಯಾಧ್ಯಕ್ಷ ಅರ್ಜಾನಾಯ್ಕ ಯಲವಟ್ಟಿ ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಗೊಳಿಸಿ ಅಸ್ಪೃಶ್ಯ ಸಮುದಾಯಗಳಿಗೆ ನ್ಯಾಯ ಒದಗಿಸಿಕೊಡಬೇಕೆಂಬ ಹುಸಿ ವಾದ ವನ್ನು ಮುಂದಿಟ್ಟು ಪರಿಶಿಷ್ಟ ಜಾತಿಗಳ ಒಗ್ಗಟ್ಟು ಮುರಿಯಲು ಕೆಲವರು ಹುನ್ನಾರ ನಡೆಸಿ ದ್ದಾರೆ. ಇದು ಒಡೆದಾಳುವ ನೀತಿ ಬಿಟ್ಟರೆ ಬೇರೇನೂ ಇಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಪಟ್ಟಿಯಿಂದ ಲಂಬಾಣಿ, ಕೊರಮ, ಕೊರಚ, ಭೋವಿ ಸಮುದಾಯಗಳನ್ನು ಕೈಬಿಡಬೇಕೆಂಬ ವಾದದಲ್ಲಿ ಎಳ್ಳಷ್ಟೂ ಹುರುಳಿಲ್ಲ. ಆಯೋಗದ ವರದಿ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯಲಿ. ಆಗ ಜನ ಸಾಮಾನ್ಯರಿಗೆ ಅದರ ಬಗ್ಗೆ ತಿಳಿಯುತ್ತದೆ. ಹಾಗೇ ಮಾಡದೆ ನೇರವಾಗಿ ವರದಿ ಜಾರಿಗೆ ತರುವುದು ಸರಿಯಲ್ಲ. ಒಂದು ವೇಳೆ ತಂದರೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಗೌರವಾಧ್ಯಕ್ಷ ಬಿ. ಮೋತ್ಯನಾಯ್ಕ ಮಾತನಾಡಿ, ಕೆನೆಪದರ, ವರ್ಗೀಕರಣ ಮುಂತಾದ ವಿಚಾರಗಳಿಂದ ಐಕ್ಯತೆಯನ್ನು ಛಿದ್ರಗೊಳಿಸುವುದು ಬೇಡ ಎಂದು ಹೇಳಿದರು. ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತಂದು 99 ಸಮುದಾಯಗಳ ಹಿತ ಕಾಪಾಡಬೇಕು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಶಿವಾನಂದ್ ಎಸ್. ಚೌಹ್ಹಾಣ್, ಪ್ರಧಾನ ಕಾರ್ಯದರ್ಶಿ ಮಂಜಾನಾಯ್ಕ ಹೆಚ್., ಪದಾಧಿಕಾರಿಗಳಾದ ಲಕ್ಷ್ಮಣ್ ನಾಯ್ಕ, ಅಣ್ಣಪ್ಪ ಸ್ವಾಮಿ, ರಾಜನಾಯ್ಕ, ಬಾಬು ರಾಠೋಡ್, ರಘುನಾಯ್ಕ, ರವಿನಾಯ್ಕ, ಹರೀಶ್ ನಾಯ್ಕ ಸೇರಿದಂತೆ, ಹಲವರಿದ್ದರು.