ದಾವಣಗೆರೆ, ಸೆ.8- ಮೌಲ್ಯಾಧಾರಿತ ಶಿಕ್ಷಣ ಮತ್ತು ದೇಶದ ಉತ್ತಮ ನಾಗರಿಕರನ್ನು ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ. ಮನಸ್ಸನ್ನು ಬೆಳಗುವ, ಹೃದಯವನ್ನು ಪರಿಶುದ್ಧಗೊಳಿಸುವ ಮತ್ತು ಆತ್ಮೋನ್ನತಿಯನ್ನು ತಂದು ಕೊಡುವ ಶಿಕ್ಷಣವೇ ನಿಜವಾದ ಶಿಕ್ಷಣ ಎಂದು ನ್ಯಾಯವಾದಿಗಳೂ ಆದ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್.ಅರುಣ್‍ಕುಮಾರ್ ಹೇಳಿದರು.
ಆವರಗೆರೆಯ ಕಾಯಕ ಯೋಗಿ ಬಸವ ಪರಿಸರ ಸಂರಕ್ಷಣಾ ವೇದಿಕೆ ವತಿಯಿಂದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾ ಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಂದು ವಿಶ್ವವಿದ್ಯಾಲಯಗಳು ಪದವೀಧರ ರನ್ನು ಸೃಷ್ಠಿಸುತ್ತಿದ್ದು, ಉತ್ತಮ ನಾಗರಿಕರನ್ನು ಸೃಷ್ಠಿ ಸುವಂತಹ ರಚನಾತ್ಮಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವಲ್ಲಿ ಮುಂದಾಗಬೇಕು. ಹುಟ್ಟು ನಮ್ಮ ಆಯ್ಕೆಯಲ್ಲ. ಆದರೆ ಉತ್ತಮ ಬದುಕು ನಮ್ಮ ಆಯ್ಕೆ ಎಂದರು. ಶಿಕ್ಷಕರು ಬೇರೆಯವರ ಉದಾಹರಣೆ ಕೊಡುವುದಕ್ಕಿಂತ ತಮ್ಮ ಆಳವಾದ ಅಭ್ಯಾಸ, ಸರಿಯಾದ ನಡತೆ, ಮಾನವೀಯ ಮೌಲ್ಯಗಳು ಮತ್ತು ದೇಶಭಕ್ತಿಯನ್ನು ತಮ್ಮ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುವಂತಹ ರಚನಾತ್ಮಕ ಶಿಕ್ಷಣ ಕೊಡಬೇಕು ಎಂದು ಹೇಳಿದರು.
ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಅವರನ್ನು ದೇಶದ ಮೆದುಳು ಎಂದು ಕರೆಯಲಾಗುತ್ತದೆ. ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಶಿಕ್ಷಕರು ಸುಂದರವಾದ ಚಿತ್ರವನ್ನು ಮೂಡಿಸು ವುದರ ಮೂಲಕ ಅವರ ಭವಿಷ್ಯ ಬೆಳಗಲು ಸಹಕಾರಿಯಾಗಿದ್ದಾರೆಂದು ಪ್ರಶಂಸಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಜಿ.ಉಮೇಶ್, ಶ್ರೀ ಕಾಯಕಯೋಗಿ ಬಸವ ಪರಿಸರ ಸಂರಕ್ಷಣಾ ವೇದಿಕೆಯು ಗ್ರಾಮದಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದರ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯ ಎಂ. ಗುರುಸಿದ್ದಸ್ವಾಮಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಾಯಕ ಯೋಗಿ ಬಸವ ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಟಿ.ರುದ್ರಪ್ಪ ವಹಿಸಿದ್ದರು. ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯಮ್ಮ ಗೋಪಿನಾಯ್ಕ, ನಗರಸಭೆ ಮಾಜಿ ಸದಸ್ಯ ಎಲ್.ಕೆ.ಕರೇಗೌಡ, ವಿಎಸ್‍ಎಸ್‍ಎನ್ ಅಧ್ಯಕ್ಷ ಸಿ.ಮಂಜಪ್ಪ, ವಿಎಸ್‍ಎಸ್‍ಎನ್‍ನ ಮಾಜಿ ಅಧ್ಯಕ್ಷ ಜಿ.ಎಸ್.ಪರಮೇಶ್ವಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕ ಪ್ರಕಾಶ್ ಮಾತನಾಡಿದರು. ಕೆ.ಬಾನಪ್ಪ, ಎ.ತಿಪ್ಪೇಶ್, ಕೆರ್ನಳ್ಳಿ ರಾಜು ಮತ್ತು ಇತರರು ಇದ್ದರು.
ವೇದಿಕೆಯಲ್ಲಿ ಶಿಕ್ಷಕರಾದ ಕೇಶವಮೂರ್ತಿ, ವಿಜಯಲತಾ, ಸುಕ್ಲಾದೇವಿ, ಗಾಯತ್ರಿದೇವಿ, ಮಹಾದೇವಮ್ಮ, ಶಿವಾನಂದಪ್ಪ, ಶಂಕ್ರಪ್ಪ ಅವರುಗಳನ್ನು ಸನ್ಮಾನಿಸಲಾಯಿತು.