ನಗರದಲ್ಲಿ ಯುವಜನ ಫೆಡರೇಷನ್ ಪ್ರತಿಭಟನೆ
ದಾವಣಗೆರೆ, ನ.21- ರಾಜ್ಯದಲ್ಲಿ ಜಾತಿ ನಿಗಮ, ಪ್ರಾಧಿಕಾರ ರಚಿಸುತ್ತಿರುವ ಸರ್ಕಾರ ಯುವ ಜನರಿಗಾಗಿ ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಸಮಿತಿ ವತಿಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಪ್ರತಿಯೊಂದು ಜಾತಿ, ಧರ್ಮಗಳಿಗೆ ತೆರೆಯುತ್ತಿರುವ ನಿಗಮ ಮತ್ತು ಪ್ರಾಧಿಕಾರಗಳಿಂದ ರಾಜ್ಯದ ಯುವಜನರಿಗೆ ಯಾವ ರೀತಿಯಾದ ಉಪಯೋಗ ಇಲ್ಲ. ರಾಜ್ಯ ದಲ್ಲಿ ಸುಮಾರು 1 ಕೋಟಿ 80 ಲಕ್ಷ ಯುವ ಜನರಿದ್ದು ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗಂಭೀರವಾಗಿದ್ದು ಬದುಕಿನ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಬದುಕು ಕಟ್ಟಿಕೊ ಳ್ಳಲು ನೆರವಾಗಬೇಕಾಗಿದೆ ಎಂದು ಸಂಘಟನೆಯ ರಾಜ್ಯ ಸಂಚಾಲಕ ಆವರಗೆರೆ ವಾಸು ತಿಳಿಸಿದರು.
ಈ ಹಿಂದೆ 2012ರಲ್ಲಿ ಅಂದಿನ ರಾಜ್ಯ ಸರ್ಕಾರ ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪಿಸಲು ಶಿಫಾರಸ್ಸು ಮಾಡಿತ್ತು. ಅದಕ್ಕೆ ಅನುಗುಣವಾಗಿ 2013ರಲ್ಲಿ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ 2013 ಡಿಸೆಂಬರ್ 30ರಂದು ಸಚಿವ ಸಂಪುಟದ ಸಭೆ ನಡೆಸಿ ರಾಜ್ಯದಲ್ಲಿ ಯುವಜನ ಅಭಿವೃದ್ಧಿಗಾಗಿ ಯುವ ಸಬಲೀಕರಣ ನಿಗಮದ ಕುರಿತು ಚರ್ಚೆ ನಡೆಸಿ ಒಪ್ಪಿಗೆ ನೀಡಲಾಗಿತ್ತು. ಆದರೆ ಅದು ನೆನೆಗುದಿಗೆ ಬಿದ್ದಿತು. ಈಗ ಇಂಥ ಕೆಲಸ ಮಾಡಲು ಸರ್ಕಾರಕ್ಕೆ ಅವಕಾಶ ಸಿಕ್ಕಿದೆ. ರಾಜ್ಯ ಸರ್ಕಾರ ಯುವಜನ ಸಬಲೀಕರಣ ನಿಗಮವನ್ನು ರಚಿಸಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು, ಜಿಲ್ಲಾ ಕಾರ್ಯದರ್ಶಿ ಎ. ತಿಪ್ಪೇಶಿ, ಜಿಲ್ಲಾ ಉಪಾಧ್ಯಕ್ಷ ಗದಿಗೇಶ್ ಪಾಳೇದ್, ಇರ್ಫಾನ್, ಮುಖಂಡರಾದ ಹೆಚ್.ಎಂ. ಮಂಜುನಾಥ, ಮಂಜುನಾಥ ದೊಡ್ಡಮನೆ, ಮಂಜುನಾಥ ಹರಳಯ್ಯ ನಗರ, ರುದ್ರೇಶ್ ಮಳಲಕೆರೆ, ಆಂಜಿನಪ್ಪ ಮಳಲಕೆರೆ, ಮಂಜುನಾಥ ಮಳಲಕೆರೆ, ಲೋಹಿತ್ ಸೇರಿದಂತೆ ಇತರರು ಭಾಗವಹಿಸಿದ್ದರು.