ಶಕ್ತಿ ನಗರದಲ್ಲಿ ಪಾರ್ಕ್ ಒತ್ತುವರಿ ಮಾಡಿಕೊಂಡಿದ್ದ ಕಟ್ಟಡಗಳ ತೆರವು
ದಾವಣಗೆರೆ, ನ. 11- ಮಹಾನಗರ ಪಾಲಿಕೆ ಅಧಿಕಾರಿಗಳು ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮಂಗಳವಾರ ನಗರದ ಶಕ್ತಿ ನಗರದಲ್ಲಿ ಪಾರ್ಕ್ ಅತಿಕ್ರಮಿಸಿಕೊಂಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.
ಬೆಳ್ಳಂ ಬೆಳಿಗ್ಗೆ ದಾಳಿ ಜೆಸಿಬಿ ಸಹಿತ ಅತಿಕ್ರಮಿತ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಸಾರ್ವಜನಿಕ ಉದ್ಯಾನವನದ ಜಾಗದಲ್ಲಿ ನಿರ್ಮಿಸಿಕೊಂಡಿದ್ದ ಶೆಡ್ ಮಾದರಿಯ ಕಟ್ಟಡ, ಒತ್ತುವರಿ ಮಾಡಿಕೊಂಡಿದ್ದ ಬಿಲ್ಡಿಂಗ್ ಹಾಗೂ ಕಾಂಪೌಂಡ್ ತೆರವುಗೊಳಿಸಿದ್ದಾರೆ.
`ಜನತಾವಾಣಿ’ ಯೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಶಕ್ತಿ ನಗರದಲ್ಲಿ ಪಾರ್ಕ್ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಅಳತೆ ಮಾಡಿಸಿದಾಗ ಜಾಗ ಒತ್ತುವರಿ ಮಾಡಿಕೊಂಡಿರುವುದು ತಿಳಿದು, ತೆರವು ಗೊಳಿಸಲಾಗಿದೆ ಎಂದು ಹೇಳಿದರು.
ಹೈ ಟೆನ್ಷನ್ ವಿದ್ಯುತ್ ತಂತಿ ಕೆಳಗಿನ ಪ್ರದೇಶವನ್ನು ಬಫರ್ ಝೋನ್ ಎಂದು ತೀರ್ಮಾನಿಸ ಲಾಗಿರುತ್ತದೆ. ಅಲ್ಲಿ ಯಾವುದೇ ಕಟ್ಟಡ ಅಥವಾ ಶೆಡ್‌ಗಳ ನಿರ್ಮಾಣಕ್ಕೆ ಅವಕಾಶವಿರುವುದಿಲ್ಲ. ನಿಯಮ ಮೀರಿ ಕಟ್ಟಿಕೊಂಡಿದ್ದ ಕಟ್ಟಡ ತೆರವುಗೊಳಿಸಲಾಗಿದೆ ಎಂದು ಹೇಳಿದರು.
ಈ ಹಿಂದೆ ರಿಂಗ್ ರಸ್ತೆ ನಿರ್ಮಾಣದ ವೇಳೆ ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿ ಕಟ್ಟಿದ್ದ ಮನೆಯನ್ನು ತೆರವುಗೊಳಿಸಲಾಗಿತ್ತು. ನಿಟುವಳ್ಳಿ ವೃತ್ತದಲ್ಲಿರುವ ಗ್ರಾಮೀಣ ಪೊಲೀಸ್ ಠಾಣೆ ಮುಂಭಾಗದಲ್ಲಿನ ಹಣ್ಣಿನ ಅಂಗಡಿಗಳು, ದೇವಸ್ಥಾನದ ಮಳಿಗೆಗಳನ್ನೂ ತೆರವುಗೊಳಿಸಲಾಗಿದೆ. ಈ ರೀತಿ ನಿಯಮ ಬಾಹಿರವಾಗಿ ಕಟ್ಟಿದ ಕಟ್ಟಡಗಳು ಪಾಲಿಕೆ ಗಮನಕ್ಕೆ ಬಂದರೆ ಕೂಡಲೇ ತೆರವುಗೊಳಿಸಲಾಗುವುದು ಎಂದು ಆಯುಕ್ತರು ತಿಳಿಸಿದರು.