ದಾವಣಗೆರೆ ವಿ.ವಿ.ಯಿಂದ ಹೊಸ ದಾಖಲೆ : ಮೌಲ್ಯಮಾಪನದ 2 ಗಂಟೆಯಲ್ಲಿ ಪದವಿ ಫಲಿತಾಂಶ

ದಾವಣಗೆರೆ, ಅ.27 –  ದಾವಣಗೆರೆ ವಿಶ್ವವಿದ್ಯಾನಿಲ ಯವು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪರೀಕ್ಷೆಗಳ ಮೌಲ್ಯಮಾಪನ ಮುಗಿದ ಕೇವಲ ಎರಡನೇ ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿ ಹೊಸ ದಾಖಲೆ ನಿರ್ಮಿಸಿದೆ.

ದಾವಣಗೆರೆ ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 14ರಿಂದ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಆಯೋಜಿಸಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂತಿಮ ವರ್ಷದ ಜೊತೆಗೆ ಹಿಂಬಾಕಿ ಪತ್ರಿಕೆಗಳಿಗೂ ಪರೀಕ್ಷೆ ನಡೆಸಿತ್ತು. 

ಅಕ್ಟೋಬರ್ 23ಕ್ಕೆ ಎಲ್ಲ ಪರೀಕ್ಷೆಗಳು ಮುಗಿದು, ಫಲಿತಾಂಶಗಳನ್ನೂ ಪ್ರಕಟಿಸಲಾಗಿದೆ. ಪರೀಕ್ಷೆ ಮುಗಿದ 48 ಗಂಟೆಗಳಲ್ಲಿ ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಿದೆ. ಇದಾಗಿ ಎರಡು ಗಂಟೆಯಲ್ಲಿ ಫಲಿತಾಂಶ ಪ್ರಕಟಿಸಿದ್ದು ಗಮನಾರ್ಹ. ರಾಜ್ಯದ ವಿಶ್ವವಿದ್ಯಾನಿಲಯಗಳ ಮಟ್ಟಿಗೆ ಇದೊಂದು ದಾಖಲೆ ಎಂದು ವಿಶ್ವವಿದ್ಯಾನಿಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೆಲವು ವಿಭಾಗಗಳ ಪರೀಕ್ಷಾ ಕಾರ್ಯ ಮುಗಿದ ಮರುದಿನವೇ ಫಲಿತಾಂಶ ಪ್ರಕಟಿಸಿರುವ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನ ಹಾಗೂ ಉದ್ಯೋಗಕ್ಕೆ ನೆರವಾಗಿದೆ ಎಂದು ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ತಿಳಿಸಿದ್ದಾರೆ.

ಸ್ನಾತಕೋತ್ತರ ಅಧ್ಯಯನ ಪರೀಕ್ಷೆಗೆ 2,211 ವಿದ್ಯಾರ್ಥಿಗಳು ಹಾಜರಾಗಿದ್ದು, ಸರಾಸರಿ ಶೇ 95ರಷ್ಟು ಫಲಿತಾಂಶ ಬಂದಿದೆ. ವಿಜ್ಞಾನ ನಿಕಾಯದಲ್ಲಿ 707, ವಾಣಿಜ್ಯ ನಿಕಾಯದಲ್ಲಿ 871 ಮತ್ತು ಕಲಾ ನಿಕಾಯದಲ್ಲಿ 633 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಅಂತಿಮ ವರ್ಷದ ಸ್ನಾತಕ ಪರೀಕ್ಷೆಗೆ ಒಟ್ಟು 44,651 ವಿದ್ಯಾರ್ಥಿಗಳು ಹಾಜರಾಗಿದ್ದು, ಸರಾಸರಿ ಶೇ. 72ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಪೈಕಿ ಕಲಾ ವಿಭಾಗದಲ್ಲಿ ಶೇ. 86, ವಾಣಿಜ್ಯ ವಿಭಾಗದಲ್ಲಿ ಶೇ. 79ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ವಿಜ್ಞಾನ ವಿಭಾಗದಲ್ಲಿ ಶೇ. 62ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ ಭೌತವಿಜ್ಞಾನ ವಿಷಯದಲ್ಲಿ ಬಹುತೇಕ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರಿಂದ ಫಲಿತಾಂಶದ ಪ್ರಮಾಣ ಕಡಿಮೆಯಾಗಿದೆ ಎಂದು ಪ್ರೊ. ಅನಿತಾ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಹಿತರಕ್ಷಣೆ, ಅವರ ಭವಿಷ್ಯದ ದೃಷ್ಟಿಯಿಂದ ಈ ಬಾರಿ ಅಂತಿಮ ವರ್ಷದ ವಿದ್ಯಾರ್ಥಿಗಳ ಜೊತೆ ಹಿಂಬಾಕಿ ಉಳಿಸಿಕೊಂಡಿದ್ದ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಲಾಗಿದೆ. ಹಿಂಬಾಕಿ ಉಳಿಸಿಕೊಂಡಿದ್ದ ಒಟ್ಟು 34,206 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಿಂದಾಗಿ 33845 ಸ್ನಾತಕ ಪದವಿಯ ವಿದ್ಯಾರ್ಥಿಗಳು ಹಾಗೂ 361 ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ ಎಂದವರು ವಿವರಿಸಿದ್ದಾರೆ.

ಪರೀಕ್ಷೆ ನಡೆದ ತಕ್ಷಣ ಪತ್ರಿಕೆಗಳನ್ನು ಗಂಟು ಕಟ್ಟಿ ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸಲಾಗಿತ್ತು. ಪತ್ರಿಕೆಗಳು ಕಚೇರಿ ಸೇರಿದ ತಕ್ಷಣ ಡಿಕೋಡಿಂಗ್ ಮಾಡಿ ಮೌಲ್ಯಮಾಪನಕ್ಕೆ ಒದಗಿಸಲಾಗುತ್ತಿತ್ತು. ಪರೀಕ್ಷೆಯ ಸಂದರ್ಭದಲ್ಲಿಯೇ ಪ್ರಾಯೋಗಿಕ ಪರೀಕ್ಷೆಯನ್ನೂ ಮಾಡಲಾಗಿದೆ. ಮೌಲ್ಯಮಾಪನ ಮುಗಿಸಿದ ನಂತರ ಉತ್ತರ ಪತ್ರಿಕೆಗಳನ್ನು ಡಿಕೋಡಿಂಗ್ ಮಾಡಿ, ದಾಖಲೆಗಳನ್ನು ಪರಿಶೀಲಿಸಿ, ಮತ್ತೊಮ್ಮೆ ಅವಲೋಕನ ಮಾಡಿ ಕೇವಲ ಎರಡು ಗಂಟೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗಿದೆ. 

ಎಂ.ಎಸ್ಸಿ. ಜೀವ ರಸಾಯನಶಾಸ್ತ್ರ ವಿಭಾಗದ ಪರೀಕ್ಷೆ ಸೆ.26ರಂದು ಮುಗಿದಿದ್ದು, ಮರುದಿನ ಪ್ರಾಧ್ಯಾಪಕರು ಮೌಲ್ಯಮಾಪನ ಮುಗಿಸಿದರು. ಅದೇ ದಿನ ಫಲಿತಾಂಶವನ್ನೂ ಪ್ರಕಟಿಸಲಾಗಿದೆ ಎಂದು ಪ್ರೊ. ಅನಿತಾ ಹೇಳಿದ್ದಾರೆ.

ಯುಜಿಸಿ ಮತ್ತು ರಾಜ್ಯ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿರೀಕ್ಷೆಗೂ ಮೀರಿ ನಿಗದಿತ ಸಮಯಕ್ಕೆ ಮುಂಚಿತವಾಗಿಯೇ ಫಲಿತಾಂಶ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಫಲಿತಾಂಶದ ಜೊತೆಗೆ ಡಿಜಿಟಲ್ ಅಂಕಪಟ್ಟಿಯನ್ನೂ ಒದಗಿಸಿದ್ದು ವಿಶೇಷವಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿ. ಪ್ರೊ. ಶರಣಪ್ಪ ಹಲಸೆ ತಿಳಿಸಿದ್ದಾರೆ.

error: Content is protected !!