ಕೈ ಸೇರುವ ಮುನ್ನವೇ ನೆಲಕಚ್ಚಿದ ಟೊಮ್ಯಾಟೋ

ರೋಗಕ್ಕೆ ಸಿಂಪಡಿಸುವ ಔಷಧಿ ತಂದ ಎಡವಟ್ಟು

ದಾವಣಗೆರೆ, ಅ. 27- ಇತ್ತೀಚಿಗೆ ಸುರಿದ ಮಳೆಯಿಂದಾಗಿ ರೈತನ ಬದುಕು ಹಸನಾಗುವ ಬದಲು ಫಲವತ್ತಾಗಿ ಬೆಳೆದ ಬೆಳೆ ಕೈ ಸೇರುವ ಮುನ್ನವೇ ನೆಲಕಚ್ಚಿ ಕಣ್ಣೀರು ತರಿಸಿದೆ.

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮೋಡ ಮುಚ್ವಿದ ವಾತಾವರಣದ ಜೊತೆಗೆ ಮಳೆ ಕೂಡ ಬಂತು. ಇದರಿಂದ ರೈತರ ಬೆಳೆಗಳು ಕೂಡ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದ ರಲ್ಲೂ ಮಾಯಕೊಂಡ ಹೋಬಳಿಯ ಕೊಡಗನೂರು ಗ್ರಾಮದಲ್ಲಿ ಕೊಡಗನೂರು ಗ್ರಾಮದ ರೈತರಾದ ಕೆ.ಎಸ್. ಮಂಜುನಾಥ್ ಹಾಗೂ ಶಿವಮೂರ್ತಿ ಇಬ್ಬರೂ ಸಹ ತಲಾ 2 ಎಕರೆಯಲ್ಲಿ ಟೊಮ್ಯಾಟೋ ಬೆಳೆದಿದ್ದರು. ಪ್ರತಿ ಎಕರೆಗೆ ಸುಮಾರು ಒಂದೂವರೆ ಲಕ್ಷ ರೂ. ವೆಚ್ಚ ಮಾಡಿದ್ದರು.

ಈಗಿನ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಹೆಚ್ವಿನ ಬೆಲೆ‌ ಇದ್ದು, ಹೆಚ್ವಿನ ಲಾಭ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಳೆದ ಕೆಲ ದಿನಗಳಿಂದ‌ ಸುರಿಯುತ್ತಿರುವ ಮಳೆಯಿಂದಾಗಿ ಟೊಮ್ಯಾಟೋ ಬೆಳೆಗೆ ಬೆಂಕಿ ರೋಗ ಹಾಗೂ ಚಿಕ್ಕಿ ರೋಗ ಬಾಧಿಸಿದ್ದು, ಇದರಿಂದ ರೈತರು ಗ್ರಾಮದ ಪಕ್ಕದಲ್ಲೇ ಇರುವ ಔಷಧಿ ಅಂಗಡಿಗೆ ಹೋಗಿ ಔಷಧಿ ಕೇಳಿದ್ದು, ಅಂಗಡಿಯವರು ಈ ರೋಗಕ್ಕೆ ಗೆಜೇಕೋ, ಜಿಲಿಟ್ರಾ, ಹಾಗೂ ಡಯೋಪಿಲ್ ಎನ್ನುವ ಔಷಧಿಯನ್ನು ಸಿಂಪಡಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ರೈತರು ಔಷಧಿ ಸಿಂಪಡಣೆ ಮಾಡಿದ್ದೇ ತಡ ಗಿಡಗಳೆಲ್ಲಾ ಕೊಳೆಯಲಾರಂಭಿಸಿ ಮೊಗ್ಗು-ಕಾಯಿ-ಹಣ್ಣುಗಳೆಲ್ಲಾ ನೆಲಕ್ಕೆ‌ ಬಿದ್ದಿವೆ. ಇದರಿಂದ ರೈತರು ಕಂಗಾಲಾಗಿದ್ದು, ಈ ಬಾರಿ ಟೊಮ್ಯಾಟೋಗೆ ಒಳ್ಳೆಯ ಬೆಲೆ‌ ಸಿಗುತ್ತದೆ ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಹಾಕಿ ಲಾಭ ಗಳಿಸಬಹುದು ಎನ್ನುವ ಕನಸನ್ನು ಇಟ್ಟುಕೊಂಡಿದ್ದು, ಈಗ ಕನಸಿನ ಗೋಪುರವೇ ಕಳಚಿ ಬಿದ್ದಿದೆ.

ಇಂದಿನ ಟೊಮ್ಯಾಟೋ ಬೆಂಬಲ ಬೆಲೆಗೆ 2 ಎಕರೆಯಿಂದ ಸುಮಾರು 10 ಲಕ್ಷ ಲಾಭ ಗಳಿಸಬಹುದಾಗಿತ್ತು. ಆದರೆ ಔಷಧಿ ಕಂಪನಿಯ ಏಜೆಂಟ್‌ಗಳು ಹಾಗೂ ಔಷಧಿ ಅಂಗಡಿ ಮಾಲೀಕ ತಿಳಿಸಿದಂತೆ ಔಷಧಿ ಸಿಂಪಡಿಸಿದ ಪರಿಣಾಮ ಟೊಮ್ಯಾಟೋ ಬೆಳೆಯಲ್ಲಾ ಹಾಳಾಗಿ ನಷ್ಟ ಸಂಭವಿಸಿದೆ. ಇದೇ ರೀತಿ ಗ್ರಾಮದ ರಾಜು ಎಂಬುವರೂ ಸಹ ಈ ಔಷಧಿ ಸಿಂಪಡಿಸಿದ ಪರಿಣಾಮ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೋ ಬೆಳೆಯೂ ನಾಶವಾಗಿದೆ. ಇದೇ ರೀತಿ ಔಷಧಿ ಸಿಂಪಡಿಸಿದ ಗ್ರಾಮದ ರೈತರ ಟೊಮ್ಯಾಟೋ ಬೆಳೆಯೂ ನಾಶವಾಗಿವೆ ಎಂದು  ಮಂಜುನಾಥ್, ಶಿವಮೂರ್ತಿ ಅಳಲಿಟ್ಟಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸುವಂತೆ ರೈತರು ಮನವಿ ಮಾಡಿದ್ದಾರೆ.

error: Content is protected !!