ಪೊಲೀಸ್ ಇಲಾಖೆ, ಅಗ್ನಿಶಾಮಕ ಹಾಗೂ ಆರೋಗ್ಯ ಇಲಾಖೆ ಸಹಾಯ ವಾಣಿಗಳ ವಿಲೀನ
ದಾವಣಗೆರೆ, 6 – ಪೊಲೀಸ್ ನೆರವು, ಬೆಂಕಿ ಅವಘಡ ಹಾಗೂ ಆರೋಗ್ಯ ಇಲಾಖೆಯ ನೆರವಿನ ಸಹಾಯವಾಣಿಗಳನ್ನು §112’ರಲ್ಲಿ ವಿಲೀನಗೊಳಿಸಲಾಗಿದೆ. ಇದೊಂದೇ ಸಹಾಯ ವಾಣಿ ಮೂಲಕ ಸಾರ್ವಜನಿಕರು ತುರ್ತು ಸ್ಪಂದನೆ ಪಡೆದು ಕೊಳ್ಳಬಹುದು ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ದಾವಣಗೆರೆ ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬಂದಿದೆ. ಜಿಲ್ಲೆಯಲ್ಲಿ ಎರಡು ದಿನಗಳಿಂದ ಸಹಾಯವಾಣಿ ಆರಂಭವಾಗಿದೆ ಎಂದಿದ್ದಾರೆ.
ಮೇಲ್ – ಆಪ್ : ಪೊಲೀಸ್, ಅಗ್ನಿಶಾಮಕ ಹಾಗೂ ಆಂಬ್ಯುಲೆನ್ಸ್‌ಗಾಗಿ 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಈ ಸಂಖ್ಯೆಯು ಇ.ಆರ್.ಎಸ್.ಎಸ್. (ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆ) ಸಂಪರ್ಕಿಸುತ್ತದೆ. ಅಲ್ಲಿಂದ ಅಗತ್ಯ ನೆರವು ತಲುಪಿಸಲಾಗುತ್ತದೆ ಎಂದವರು ಹೇಳಿದ್ದಾರೆ.
ದೂರವಾಣಿ ಕರೆಯಷ್ಟೇ ಅಲ್ಲದೇ ಇ-ಮೇಲ್ ಆದ [email protected] ಮೂಲಕ ನೆರವು ಕೇಳಬಹುದು. ಇಲ್ಲವೇ 112 India ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
112ರ ಪ್ರಮುಖ ಅಂಶಗಳು
- ದೇಶಾದ್ಯಂತ ತುರ್ತು ಸ್ಪಂದನೆಗಾಗಿ ಒಂದೇ ಸಂಖ್ಯೆ
- ಕರೆ, ಇ-ಮೇಲ್, ಆಪ್, ವೆಬ್ ಮೂಲಕ ನೆರವು.
- ಕರೆ ಮಾಡಿದ ವ್ಯಕ್ತಿಯ ಗುರುತು ಸ್ವಯಂ ಚಾಲಿತವಾಗಿ ಪತ್ತೆ
- ವಾಹನಗಳ ಮೂಲಕ ತುರ್ತು ಸೇವೆಗೆ ವ್ಯವಸ್ಥೆ
- ಪೊಲೀಸ್, ಅಗ್ನಿಶಾಮಕ, ವೈದ್ಯಕೀಯ ನೆರವಿಗೆ ವ್ಯವಸ್ಥೆ
- ಕೇಂದ್ರೀಕೃತ ವ್ಯವಸ್ಥೆ ಮೂಲಕ ಸೇವೆಗಳ ಸಮನ್ವಯತೆ
- ಅತಿ ಕಡಿಮೆ ಸಮಯದಲ್ಲಿ ತುರ್ತು ಸ್ಥಿತಿಯ ನಿರ್ವಹಣೆ
- ತುರ್ತು ಸ್ಪಂದನಾ ವಾಹನದ ಮೇಲೆ ನಿರಂತರ ನಿಗಾ.
ತುರ್ತು ನೆರವಿಗೆ 13 ‘ಹೊಯ್ಸಳ’
ಜಿಲ್ಲೆಯಲ್ಲಿ ತುರ್ತು ನೆರವಿಗಾಗಿ 13 ವಾಹನಗಳನ್ನು ಜಿಲ್ಲಾ ಪೊಲೀಸರು ಸಜ್ಜುಗೊಳಿಸಿದ್ದು, ಇದಕ್ಕೆ ‘ಹೊಯ್ಸಳ’ ಎಂಬ ಹೆಸರಿಡಲಾಗಿದೆ.
ಆರು ಸ್ಕಾರ್ಪಿಯೋ ಹಾಗೂ 7 ಇನ್ನೋವಾ ವಾಹನಗಳನ್ನು ಸಜ್ಜುಗೊಳಿಸಲಾಗಿದೆ. ಈಗಾಗಲೇ 65 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ 26 ಚಾಲಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇದರ ನಿಯಂತ್ರಣ ಕೇಂದ್ರ ಬೆಂಗಳೂರು ಹಾಗೂ ತಮ್ಮ ಕಚೇರಿಯಲ್ಲಿರಲಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
‘ಒಂದು ದೇಶ, ಒಂದು ತುರ್ತು ಸಂಖ್ಯೆ – 112’
ಕೇಂದ್ರ ಗೃಹ ಸಚಿವಾಲಯ ವರ್ಷದ ಹಿಂದೆ ಇಡೀ ದೇಶಕ್ಕೆ ಒಂದೇ ತುರ್ತು ಸಂಖ್ಯೆಯಾಗಿ 112 ಆಯ್ಕೆ ಮಾಡಿತ್ತು. ಹಲವಾರು ರಾಜ್ಯಗಳಲ್ಲಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಅದರ ಅಂಗ ವಾಗಿ ಕರ್ನಾಟಕದಲ್ಲಿ ಪ್ರಾಯೋ ಗಿಕವಾಗಿ ದಾವಣಗೆರೆ, ಹಾವೇರಿ ಹಾಗೂ ಬಾಗಲಕೋಟೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್, ಮಹಿಳಾ ಸುರಕ್ಷತೆ, ಮಕ್ಕಳ ನೆರವು ಹೀಗೆ ಹಲವು ಬೇರೆ ಬೇರೆ ಸೇವೆಗಳಿಗೆ ಬೇರೆ ಸಂಖ್ಯೆ ನೆನಪಿಟ್ಟುಕೊಳ್ಳುವ ಗೊಡವೆ ತಪ್ಪಲಿದೆ.
15 ನಿಮಿಷಗಳಲ್ಲಿ ನೆರವು : 112 ಕರೆಯು ಬೆಂಗಳೂರಿನ ಏಕೀಕೃತ ತುರ್ತು ಸ್ಪಂದನಾ ಕೇಂದ್ರ ಹಾಗೂ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ತಲುಪುತ್ತದೆ. ಕರೆ ಬಂದ 15 ನಿಮಿಷಗಳಲ್ಲೇ ಇ.ಆರ್.ಎಸ್.ಎಸ್. ವಾಹನ ಸ್ಥಳಕ್ಕೆ ತಲುಪಿ ನೆರವು ಕಲ್ಪಿಸಲಿದೆ ಎಂದು ಹನುಮಂತರಾಯ ವಿವರಿಸಿದ್ದಾರೆ.
ಪಾರದರ್ಶಕ ವ್ಯವಸ್ಥೆ : ಹೊಯ್ಸಳ ಇ.ಆರ್.ಎಸ್.ಎಸ್. ವಾಹನಗಳ ಮೂಲಕ ನೀಡಲಾಗುವ ಸ್ಪಂದನೆ ಮೇಲೆ ನಿರಂತರ ನಿಗಾ ಇರುತ್ತದೆ. ದೂರು ನೀಡಿದವರಿಗೆ ಎಸ್.ಎಂ.ಎಸ್. ಮೂಲಕ ಮಾಹಿತಿ ನೀಡಿ, ಪಾರದರ್ಶಕ ವ್ಯವಸ್ಥೆ ತರಲಿದೆ ಎಂದು ಎಸ್ಪಿ ಹೇಳಿದ್ದಾರೆ.
ಆಂಬ್ಯುಲೆನ್ಸ್ ಸೇರ್ಪಡೆ : ಪ್ರಸಕ್ತ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸೇವೆ ಮಾತ್ರ 112 ಮೂಲಕ ಲಭ್ಯವಿರಲಿದೆ. ಮುಂದಿನ ದಿನಗಳಲ್ಲಿ ಆಂಬ್ಯುಲೆನ್ಸ್ ಸೇವೆಯೂ ಇದೇ ಸಂಖ್ಯೆಯ ಮೂಲಕ ಲಭ್ಯವಾಗಲಿದೆ ಎಂದು ಹನುಮಂತರಾಯ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಬಸವಪ್ರಭು ಶರ್ಮ, ಡಿವೈಎಸ್‌ಪಿ ಬಸವರಾಜ ಮತ್ತು ಇನ್ಸ್‌ಪೆಕ್ಟರ್ ಎಸ್. ತೇಜಾವತಿ ಉಪಸ್ಥಿತರಿದ್ದರು.