ಅಹಿಂಸಾ ಮಾರ್ಗದಲ್ಲಿ ನಡೆದು, ಶಾಂತಿ ಸ್ಥಾಪಿಸಬೇಕಾಗುವುದು ಇಂದಿನ ಅಗತ್ಯ

ಅಹಿಂಸಾ ಮಾರ್ಗದಲ್ಲಿ ನಡೆದು, ಶಾಂತಿ ಸ್ಥಾಪಿಸಬೇಕಾಗುವುದು ಇಂದಿನ ಅಗತ್ಯ - Janathavaniರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಧಾರ್ಮಿಕ ನಾಯಕರುಗಳ ವೆಬಿನಾರ್ ವೇದಿಕೆಯಲ್ಲಿ ತರಳಬಾಳು ಜಗದ್ಗುರುಗಳು

ದಾವಣಗೆರೆ, ಅ.4- ಶಾಂತಿ ಎಂಬುದು ನಾವು ತಲುಪಬೇಕಾದ ಗುರಿ. ಅದನ್ನು ತಲುಪಲು ಅನುಸರಿಸಿ ನಡೆಯ ಬೇಕಾದ ದಾರಿಯೇ ಅಹಿಂಸೆ. ಅಹಿಂಸಾ ಮಾರ್ಗದಲ್ಲಿ ನಡೆದು ಶಾಂತಿಯನ್ನು ಸ್ಥಾಪಿಸಬೇಕಾಗಿರುವುದು ಇಂದಿನ ಅಗತ್ಯ ವಾಗಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದ್ದಾರೆ.

ಯುನಿವರ್ಸಲ್ ಪೀಸ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಅಂತರರಾಷ್ಟ್ರೀಯ ಶಾಂತಿ ದಿನವಾದ ಸೆ.21ರಿಂದ ಹಿಡಿದು ಅಂತರರಾಷ್ಟ್ರೀಯ ಅಹಿಂಸಾ ದಿನವಾದ ಅ.2ರವರೆಗೆ 12 ದಿನಗಳ ಕಾಲ ಆಯೋಜಿಸಲಾಗಿದ್ದ  ಆನ್‌ಲೈನ್ ಗೋಷ್ಠಿಯಲ್ಲಿ ಪಾಲ್ಗೊಂಡು ಶ್ರೀಗಳು ವಿಶ್ವಶಾಂತಿ ಸಂದೇಶ ತಿಳಿಸಿದರು.

ಅಹಿಂಸೆಯೇ ಶಾಂತಿಯ ಮೂಲವೆಂದರೆ ತಪ್ಪಲ್ಲ.  ಶಾಂತಿ ಎಂಬುದು ಗುರಿಯಾದರೆ ಅದನ್ನು ಸಾಧಿಸಲು ಅಗತ್ಯವಾದ ಹಾದಿಯೇ ಅಹಿಂಸೆ. ಅಹಿಂಸೆಯಿಲ್ಲದೆ ಶಾಂತಿಯ ಸ್ಥಾಪನೆ ಕೇವಲ ಮೃಗಜಲವೇ ಸರಿ. ಅಹಿಂಸೆಯನ್ನು ಆಚರಿಸಿದರೆ ಶಾಂತಿಯು ತಂತಾನೇ ನೆಲೆಗೊಳ್ಳುತ್ತದೆ. ಶಾಂತಿಯ ಕಾರಣದಿಂದ ಅಹಿಂಸೆಯು ಕೊನೆಗೊಳ್ಳು ವುದಿಲ್ಲ. ಬದಲಾಗಿ ಅಹಿಂಸೆಯೇ ಶಾಂತಿಯ ಗಂಗೋತ್ರಿ ಎನ್ನಬಹುದು.

ಭಾರತ ದೇಶದಲ್ಲಿ ತುಂಬಾ ಪುರಾತನ ಕಾಲದಿಂದಲೂ ಶಾಂತಿಗಾಗಿ ತುಡಿತ ಇದೆ. ನಮ್ಮ ಯಜುರ್ವೇದದ ಮಂತ್ರವೊಂದು ಹೀಗೆ ಹೇಳುತ್ತದೆ. ‘ಓಂ ಸಹನಾವವತು, ಸಹನೌಭುನಕ್ತು, ಸಹವೀರ್ಯಂ ಕರವಾವಹೈ, ತೇಜಸಿ ನಾವಧೀತಮಸ್ತು, ಮಾವಿದ್ವಿಷಾವಹೈ, ಓಂ ಶಾಂತಿಃ, ಶಾಂತಿಃ, ಶಾಂತಿಃ’ ಅಧ್ಯಾತ್ಮ ವಿದ್ಯೆಯನ್ನು ನಮಗೆ ಕೊಟ್ಟು ನಮ್ಮನ್ನು ಉದ್ಧರಿಸು. ನಾವು ಕಲಿತ ವಿದ್ಯೆಯನ್ನು ಲೋಕಕ್ಕೆ ಉಪಕಾರವಾಗುವ ರೀತಿಯಲ್ಲಿ ಉಪಯೋಗಿಸುವ ಸಾಮರ್ಥ್ಯವನ್ನು ಕರುಣಿಸು. ಶಾಸ್ತ್ರಾಧ್ಯಯನದಿಂದ ಶಾಸ್ತ್ರದ ವರ್ಚಸ್ಸುನ್ನು ನಮ್ಮಲ್ಲಿ ವ್ಯಕ್ತವಾಗಲಿ, ಅದನ್ನು ಮುಂದಿನ ತಲೆಮಾರಿಗೆ ನೀಡುವ ಶಕ್ತಿಯನ್ನು ಕರುಣಿಸು. ಕೊನೆಯತನಕ ನಾವು ಪ್ರೀತಿಯಿಂದ ಶಾಂತಿಯಿಂದ ಬಾಳುವಂತೆ ಮಾಡು, ಅನುಸಂಧಾನದ ಮೂಲಕ ನಮ್ಮ ಬದುಕಿನಲ್ಲಿ ಶಾಂತಿಯನ್ನು ನೀಡು ಎಂಬುದು ಇದರ ತಾತ್ಪರ್ಯವಾಗಿದೆ ಎಂದು ನುಡಿದರು.

ಈ ಶಾಂತಿ ವೇದಿಕೆಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಧಾರ್ಮಿಕ ನಾಯಕರುಗಳ ಮಾತುಗಳನ್ನು ಕೇಳಿ ನಮಗೆ ತುಂಬಾ ಸಂತೋಷವಾಗಿದೆ. ಪ್ರಾಚೀನ ಭಾರತದ ಯಜುರ್ವೇದ ಮಂತ್ರವೊಂದು ಹೀಗೆ ದೇವರಲ್ಲಿ ಮೊರೆಯಿಡುತ್ತದೆ. `ಶಾಂತಿಯು ಭೂಮಿ ಯಲ್ಲಿ ಅಂತರಿಕ್ಷದಲ್ಲಿ, ಆಕಾಶದಲ್ಲಿ, ಸೂರ್ಯ-ಚಂದ್ರ-ನಕ್ಷತ್ರಗಳಲ್ಲಿ, ನೀರಿನಲ್ಲಿ, ಸಕಲ ಪ್ರಾಣಿ ಪಕ್ಷಿಗಳಲ್ಲಿ, ಎಲ್ಲಾ ದಿಕ್ಕುಗಳಲ್ಲಿಯೂ ನೆಲೆಸಲಿ’ ಈ ಶಾಂತಿ ಮಂತ್ರದೊಂದಿಗೆ ನಮ್ಮ ಮಾತುಗಳಿಗೆ ಮಂಗಳ ಹಾಡ ಬಯಸುತ್ತೇನೆ. ಶಾಂತಿಯು ಕೇವಲ ನನ್ನಲ್ಲಿ ಇದ್ದರೆ ಮಾತ್ರ ಸಾಲದು, ಸಮಕಾಲೀನ ತಲ್ಲಣದ ಪರಿಸ್ಥಿತಿಯಲ್ಲಿ ಇಡೀ ವಿಶ್ವಕ್ಕೇ ಅದು ಬೇಕಾಗಿದೆ ಎಂದು ಶ್ರೀಗಳು ಹೇಳಿದರು.

ಗೋಷ್ಠಿಯಲ್ಲಿ ಐ.ಎ.ಪಿ.ಡಿ. ರಾಧಾರ ಮಣ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಶ್ರೀವತ್ಸ ಗೋಸ್ವಾಮಿ, ಅಂತರರಾಷ್ಟ್ರೀಯ ಶಾಂತಿ ಕಾರ್ಯಕರ್ತ ಪ್ರಶೀಲ್ ರತ್ನ್ ಗೌತಮ್, ದೆಹಲಿಯ  ಹ್ಯಾಪಿ ಸ್ಪಿರಿಚ್ಯುಯಲ್ ಅಸೆಂಬ್ಲಿ ಅಧ್ಯಕ್ಷ ಡಾ. ಎ.ಕೆ. ಮರ್ಚೆಂಟ್, ಪುಣೆಯ ಡಿವೈನ್ ಹೆಲ್ತ್ ಅಂಡ್ ಹೀಲಿಂಗ್ ನಿರ್ದೇಶಕ ಫಾದರ್ ರಾಬಿನ್ ಮಂತೋಡೆ, ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಡಾ. ಕಲ್ಬೆ ರುಶೇದ್ ರಿಜ್ವಿ ಮತ್ತಿತರರು ಭಾಗವಹಿಸಿದ್ದರು.

error: Content is protected !!