ದಾವಣಗೆರೆ, ಅ.4- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ 2020-21ನೇ ಸಾಲಿನ ದತ್ತಿ ಕಾರ್ಯಕ್ರಮಗಳನ್ನು ಬರುವ ನವೆಂಬರ್ ಮಾಹೆಯ ಮೂವತ್ತೂ ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಕನ್ನಡ ನುಡಿ ಜಾತ್ರೆಗೆ ಸಿದ್ಧತೆ ನಡೆಸಲಾಗಿದೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರ ಅಧ್ಯಕ್ಷತೆಯಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ನಿನ್ನೆ ನಡೆದ ತಾಲ್ಲೂಕು ಕಸಾಪ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ತಾಲ್ಲೂಕು ಮಟ್ಟದ ದತ್ತಿ ಕಾರ್ಯಕ್ರಮಗಳನ್ನು ಅತೀ ಶೀಘ್ರವಾಗಿ ನಡೆಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ ಕುರ್ಕಿ ಅವರು ಸೂಚಿಸಿ ರುವ ಹಿನ್ನೆಲೆಯಲ್ಲಿ ದತ್ತಿ ಕಾರ್ಯಕ್ರಮಗಳಡಿಯಲ್ಲಿ ನಾಡು-ನುಡಿಗೆ ಸಂಬಂಧಿಸಿದ ಉಪನ್ಯಾಸ ಗಳು, ಸಂಗೀತ, ನೃತ್ಯ, ಜಾನಪದ ಕಲೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಪೂರಕವಾಗುವ ವೈವಿಧ್ಯಮಯ, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಕನ್ನಡ ನುಡಿ ಜಾತ್ರೆಯ ಹೆಸರಿನಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರು, ನುಡಿ ಜಾತ್ರೆಯ ರೂಪುರೇಷೆಗಳ ಕುರಿತಂತೆ ವಿವರಿಸಿದರು.
ಈ ಬೃಹತ್ ಕಾರ್ಯಕ್ರಮದ ಸಂಯೋಜ ನಾಧಿಕಾರಿಯನ್ನಾಗಿ ತಾಲ್ಲೂಕು ಕಸಾಪ ನಿರ್ದೇಶಕ ಕೆ. ರಾಘವೇಂದ್ರ ನಾಯರಿ ಅವರನ್ನು ಸಭೆಯಲ್ಲಿ ನೇಮಕ ಮಾಡಲಾಯಿತು. ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ಸಾಲಿಗ್ರಾಮ ಗಣೇಶ್ ಶೆಣೈ ಮತ್ತು ಇ.ಎಂ. ಮಂಜುನಾಥ ಅವರುಗಳು ಕನ್ನಡ ನುಡಿ ಜಾತ್ರೆಯ ಬಗ್ಗೆ ಸಲಹೆ-ಸೂಚನೆ ನೀಡಿದರು.
ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಕೆ.ಎನ್. ಸ್ವಾಮಿ ಮಾರ್ಗದರ್ಶನ ನೀಡಿದರು. ಕಚೇರಿ ಕಾರ್ಯದರ್ಶಿ ಬಿ.ಎಂ. ಮುರಿಗೆಯ್ಯ ಕುರ್ಕಿ, ನಿರ್ದೇಶಕರುಗಳಾದ ಬಿ.ಎಸ್.ಜಗದೀಶ್, ಬೇತೂರು ಎಂ. ಷಡಾಕ್ಷರಪ್ಪ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಕಸಾಪ ನಿರ್ದೇಶಕರುಗಳನ್ನಾಗಿ ಶ್ರೀಮತಿ ಟಿ.ಆರ್. ಇಂದಿರಾ ಲಿಂಗಪ್ಪ ಮತ್ತು ಶ್ರೀಮತಿ ರುದ್ರಾಕ್ಷಿ ಬಾಯಿ ಸಿ. ಪುಟ್ಟಾನಾಯ್ಕ ಅವರುಗಳನ್ನು ಸಭೆಯಲ್ಲಿ ನೇಮಕ ಮಾಡಲಾಯಿತು.
ಶ್ರೀಮತಿ ರುದ್ರಾಕ್ಷಿಬಾಯಿ ಮತ್ತು ಕು|| ಐಸಿರಿ ಪ್ರಾರ್ಥಿಸಿದ ನಂತರ ತಾಲ್ಲೂಕು ಕಸಾಪ ಕೋಶಾಧ್ಯಕ್ಷ ಹೆಚ್.ಕೆ. ಪಾಲಾಕ್ಷಪ್ಪ ಗೋಪನಾಳ್ ಸ್ವಾಗತಿಸಿದರು. ಕಸಾಪ ಹಿರಿಯ ನಿರ್ದೇಶಕ ರಾಜಶೇಖರ್ ಸಂಡೂರು ವಂದಿಸಿದರು.
ಸಭೆಯ ಆರಂಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಂಗೀತ ದಿಗ್ಗಜ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ, ಬಸವ ಕಲ್ಯಾಣದ ಶಾಸಕ ನಾರಾಯಣ ರಾವ್, 22 ಕೆರೆ ಏತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಡಾ|| ಮಂಜುನಾಥ ಗೌಡ, ಹಿರಿಯ ವೈದ್ಯ ಡಾ|| ಹೆಚ್. ಗುರುಪಾದಪ್ಪ, ಹಿರಿಯ ಸಾಹಿತಿ ಪ್ರೊ. ಎಸ್. ಉಮಾಪತಿ ಅವರುಗಳಲ್ಲದೇ, ನಾಡಿನಾದ್ಯಂತ ಸಾಹಿತ್ಯ, ಕಲೆ, ಸಂಗೀತ, ಸಾಮಾಜಿಕ ಸೇವೆ, ಕೋವಿಡ್ ಹಾಗೂ ಸೈನ್ಯದಲ್ಲಿ ನಿಧನರಾದ ಎಲ್ಲಾ ಜೀವಾತ್ಮಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ನಿರ್ಣಯವನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ನಿರ್ದೇಶಕ ಕೆ. ರಾಘವೇಂದ್ರ ನಾಯರಿ ಮಂಡಿಸಿ, ಸಭೆಯ ಅನುಮೋದನೆ ಪಡೆದರು.