ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಯಡಿಯೂರಪ್ಪ ಋಣ ತೀರಿಸಿ

ವಿಜಯನಗರ ಜಿಲ್ಲೆಯ ಮತದಾರರಿಗೆ ಸಚಿವ ಆನಂದ್ ಸಿಂಗ್ ಕರೆ

ಹರಪನಹಳ್ಳಿ, ನ.28- ಕಾಂಗ್ರೆಸ್ ನಾಯಕರು ದೇಶದ ಅಭಿವೃದ್ಧಿಗಿಂತ ವೈಯಕ್ತಿಕ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದಾರೆ ಎಂದು ಸಚಿವ ಆನಂದ್ ಸಿಂಗ್  ದೂರಿದರು.

ಹರಪನಹಳ್ಳಿ ತಾಲ್ಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ಕಂಭತ್ತಹಳ್ಳಿಯಲ್ಲಿ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‍ಗೆ ಜರುಗುವ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಇರುವುದರಿಂದ ಬೇರೆ ಪಕ್ಷಗಳತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್ ಮುಳುಗುವ ಹಡಗು ಎಂದು ಹೇಳುತ್ತಾರೆ. ಆದರೆ ಕಾಂಗ್ರೆಸ್ ಮುಳಗುವ ಹಡಗಲ್ಲ, ಬರೀ ಕಾಗದದ ಹಡಗು ಎಂದು ಜರಿದರು.  

ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರಲು ಯಡಿಯೂರಪ್ಪನವರು ಮುಖ್ಯ ಕಾರಣರಾಗಿದ್ದು ಅವರನ್ನು ಯಾವತ್ತೂ ಮರೆಯುವಂತಿಲ್ಲ. ಅವರ  ಋಣ ತೀರಿಸಬೇಕಾದರೆ ಬಳ್ಳಾರಿ ವಿಧಾನ ಪರಿಷತ್‍ನ ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್  ಅವರನ್ನು ವಿಜಯನಗರ ಜಿಲ್ಲೆಯಿಂದ ಹೆಚ್ಚು ಮತಗಳಿಂದ ಗೆಲ್ಲಿಸಿ ಕೊಡಬೇಕು ಎಂದು ಅವರು ಕೇಳಿಕೊಂಡರು.

ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ  ಎಸ್.ವಿ.ರಾಮಚಂದ್ರಪ್ಪ ಮಾತನಾಡಿ,   ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬರಲು ಆನಂದ್ ಸಿಂಗ್ ಅವರ ಕೊಡುಗೆ ಅಪಾರವಾಗಿದ್ದು, ಈ ಭಾಗದ ಜನರಿಗೆ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ಓಡಾಡಲು ಆಗುತ್ತಿದ್ದ ತೊಂದರೆ, ನೂತನ ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಬಂದ ಮೇಲೆ ದೂರವಾಯಿತು ಎಂದರು.

ಬಳ್ಳಾರಿ ವಿಧಾನ ಪರಿಷತ್‍ನ ಬಿಜೆಪಿ ಅಭ್ಯರ್ಥಿ ವೈ.ಎಂ. ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮುಖಂಡರಾದ ಜಿ.ನಂಜನಗೌಡ, ಆರುಂಡಿ ನಾಗರಾಜ್, ಮಹಾಬಲೇಶ್ವರ ಗೌಡ ಮಾತನಾಡಿದರು.

ಈ ಸಂದರ್ಭದಲ್ಲಿ ಜಗಳೂರು ಬಿಜೆಪಿ ಅಧ್ಯಕ್ಷ ಪಲ್ಲಾಗಟ್ಟಿ ಮಹೇಶಪ್ಪ, ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷ ಕರೂರು ಹನುಮಂತಪ್ಪ, ಮುಖಂಡರಾದ ಡಿ.ಸಿದ್ದಪ್ಪ, ಚಟ್ನಿ ಹಳ್ಳಿ ರಾಜಪ್ಪ, ಹನುಮಂತಪ್ಪ, ಸಿದ್ದೇಶ್ ಯಾದವ್, ಅನಿಲ್ ಯಾದವ್, ಮುಲಾಲಿಗೌಡ, ತಾ.ಪಂ. ಮಾಜಿ ಉಪಾಧ್ಯಕ್ಷ ಕೆಂಚನಗೌಡ,  ಮಾಧ್ಯಮ ಸಂಚಾಲಕ ಪಣಿಯಾಪುರ ಲಿಂಗರಾಜ್, ಗ್ರಾ.ಪಂ ಮಾಜಿ ಸದಸ್ಯ ಬಾಲೇನಹಳ್ಳಿ ಜಿ.ಕೆಂಚನಗೌಡ, ದ್ಯಾಮನಗೌಡ, ವಿಶ್ವನಾಥ, ಮಂಜುನಾಥಯ್ಯ, ವೈ.ಡಿ. ಅಣ್ಣಪ್ಪ, ಬಾಗಳಿ ಕೊಟ್ರೇಶಪ್ಪ, ಎಸ್.ಬಿ.ಲಿಂಬ್ಯಾನಾಯ್ಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!