ಜಗಳೂರು : ಕಣ್ವಕುಪ್ಪೆ ಗವಿಮಠದಲ್ಲಿನ ಕಾರ್ಯಕ್ರಮದಲ್ಲಿ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ
ಜಗಳೂರು, ನ.28- ಜೀವನದಲ್ಲಿ ಎಲ್ಲವೂ ಕ್ಷಣಿಕ, ದೈವ ಕೃಪೆ ಒಂದೇ ಸತ್ಯ ಎಂದು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಜೀವನದಲ್ಲಿ ಪರೀಕ್ಷೆಗಳು ಎಲ್ಲರಿಗೂ ಇದ್ದೇ ಇರುತ್ತವೆ, ದೈವ ಕೃಪೆ ಇದ್ದವರಿಗೆ ಅಪಾಯಗಳು ದೂರ ಸರಿಯುತ್ತವೆ. ಸನ್ಮಾರ್ಗದ ಜೀವನದಲ್ಲಿ ಶೀಘ್ರ ಯಶಸ್ಸು ಸಿಗಲಿಲ್ಲ ಎಂದು ಧರ್ಮಪಾಲನೆಯಿಂದ ಹಿಂದೆ ಸರಿಯುವುದು ಸಲ್ಲದು. ಸತ್ಕಾರ್ಯಕ್ಕೆ ತಕ್ಕ ಫಲ ದೊರೆಯುತ್ತದೆ ತಾಳ್ಮೆ ಮುಖ್ಯ.
ಸಾತ್ವಿಕ ವ್ಯಕ್ತಿಗಳಿಗೆ ನೋವು, ಅವಮಾನ, ಆರೋಪ ಸಹಜವಾಗಿರುತ್ತದೆ. ಧರ್ಮಪಾಲನೆ, ಗುರು ಸೇವೆ, ಅನ್ನದಾನದಂತಹ ಸತ್ಕಾರ್ಯ ಮಾಡಿದರೂ ಸಹ ಶಾರೀರಿಕ, ಕೌಟುಂಬಿಕ, ಇತರೆ ದುಃಖಗಳು ಕಾಡಲು ಪೂರ್ವ ಜನ್ಮದ ಕರ್ಮದ ಫಲ ಕಾರಣ. ಮಾನವ ಜಿಜ್ಞಾಸೆಗೆ ಒಳಗಾಗದೆ ಸಂಕುಚಿತ ವಿಚಾರಗಳಿಂದ ಹೊರಬಂದಾಗ ಬದುಕು ಸಾರ್ಥಕವಾಗುತ್ತದೆ ಎಂದರು.
ಪುಣ್ಯಕ್ಷೇತ್ರಗಳಲ್ಲಿ ಅಲ್ಲಿನ ನಿಯಮಗಳನ್ನು ಮೀರಬಾರದು, ಅನ್ಯರನ್ನು ನಿಂದಿಸದೆ, ಧಾರ್ಮಿಕ ಕಾರ್ಯದಲ್ಲಿ ತೊಡಗಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಿ ಎಂದರು.
ಪ್ರಧಾನಿ ಮೋದಿ ದೈವ ಭಕ್ತರು : ಇತ್ತೀಚೆಗೆ ಕೇದಾರನಾಥ ಬಾಗಿಲು ಮುಚ್ಚುವ ಮುನ್ನ ದರ್ಶನಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿಯವರ ದೈವತ್ವದ ನಡವಳಿಕೆ ಬಗ್ಗೆ ಪ್ರಸ್ತಾಪಿಸಿದ ಶ್ರೀಗಳು, ಪ್ರಧಾನಿಗಳು ಅಪಾರ ದೈವ ಭಕ್ತರಾಗಿದ್ದಾರೆ. ಶ್ರದ್ದೆ, ಭಕ್ತಿಯಿಂದ ದೈವಿಕ ಕಾರ್ಯಗಳಲ್ಲಿ ಭಾಗವಹಿಸಿ ಮಂತ್ರ, ರುದ್ರಗಳನ್ನು ತಾವೇ ಸ್ವತಃ ಉಚ್ಚರಿಸುತ್ತಿದ್ದರು ಎಂದ ಶ್ರೀಗಳು, ಅವರ ಧಾರ್ಮಿಕ ನಡೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಕಂಬಾಳಿಮಠ್, ಕೆಚ್ಚೇನಹಳ್ಳಿ ಮುರಿಗೆಣ್ಣ, ಕೊಡದಗುಡ್ಡ ರುದ್ರಸ್ವಾಮಿ, ವಿಎಸ್ಎಸ್ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ ಮತ್ತಿತರರು ಹಾಜರಿದ್ದರು.
ಗಣ್ಯರ ಭೇಟಿ : ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಮಾಜಿ ಶಾಸಕ ಹೆಚ್.ಪಿ.ರಾಜೇಶ್, ಚಿತ್ರದುರ್ಗ ಎಸ್ಪಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಹೆಚ್. ನಾಗರಾಜ್ ಮುಂತಾದವರು ಭಾಗವಹಿಸಿದ್ದರು.