ಹರಿಹರ, ನ.25- ನಗರದಲ್ಲಿ ಮೊನ್ನೆ ಸುರಿದ ಮಳೆಯಿಂದಾಗಿ ಎ.ಕೆ. ಕಾಲೋನಿಯಲ್ಲಿರುವ ದಲಿತ ಹೋರಾಟಗಾರ ಪ್ರೊ. ಬಿ. ಕೃಷ್ಣಪ್ಪ ಅವರ ಮನೆ ಸಂಪೂರ್ಣ ವಾಗಿ ಹಾನಿಯಾಗಿದ್ದರಿಂದ, ಸ್ಥಳಕ್ಕೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭೇಟಿ ಮಾಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಮನೆಯನ್ನು ದುರಸ್ತಿ ಮಾಡಲು ಮತ್ತು ಈ ಸ್ಥಳದಲ್ಲಿ ಪ್ರೊಫೆಸರ್ ಬಿ. ಕೃಷ್ಣಪ್ಪ ಅವರ ಸ್ಮಾರಕ ಭವನ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇದಕ್ಕಾಗಿ ಸ್ಥಳದ ದಾಖಲೆಗಳನ್ನು ತಮ್ಮ ಬಳಿ ನೀಡುವಂತೆ ತಿಳಿಸಿದರು.
ಈ ವೇಳೆ ಪ್ರೊ. ಬಿ. ಕೃಷ್ಣಪ್ಪ ಕುಟುಂಬದ ಸದಸ್ಯ ಬಸವರಾಜ್ ಹಾಗೂ ಸದಾನಂದ ಮಾತನಾಡಿ, ಪ್ರೊಫೆಸರ್ ಬಿ. ಕೃಷ್ಣಪ್ಪ ನವರ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಮುಂದಾಗಿರುವುದು ಸಂತಸ ತರಿಸಿದೆ. ಆದರೆ, ನಮ್ಮ ಕುಟುಂಬದ ಲಕ್ಮಮ್ಮ ಮತ್ತು ನಾವು ಹಲವಾರು ವರ್ಷಗಳಿಂದ ಇದೇ ಮನೆಯಲ್ಲಿದ್ದೇವೆ. ನಮಗೆ ಬೇರೆ ಯಾವುದೇ ಮನೆ, ಆಸ್ತಿ ಇಲ್ಲದ ಕಾರಣ, ನಮ್ಮ ಕುಟುಂಬದ ಸದಸ್ಯರು ವಾಸ ಮಾಡುವುದಕ್ಕೆ ಅನುಕೂಲ ಮಾಡಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ದಲಿತ ಸಮಾಜದ ಮುಖಂಡ ಹೆಚ್. ನಿಜಗುಣ, ಪಿ.ಜೆ. ಮಹಾಂತೇಶ್ ಹಾಗೂ ಸಂತೋಷ್ ನೋಟದರ್, ಮಲ್ಲೇಶ್ ಮಾತ ನಾಡಿ, ಕೃಷ್ಣಪ್ಪ ಅವರ ಹಳೆಯ ಕಾಲದ ಮನೆಯನ್ನು ಸ್ಮಾರಕ ಮಾಡುವಂತೆ ಹಿಂದೆಯೂ ಮನವಿ ಸಲ್ಲಿಸ ಲಾಗಿತ್ತು. ಈಗ ಕೃಷ್ಣಪ್ಪ ಅವರ ಮನೆ ಸಂಪೂರ್ಣವಾಗಿ ಹಾನಿಯಾಗಿದ್ದರಿಂದ ಅವರ ಕುಟುಂಬದ ಸದಸ್ಯರು ಬೀದಿಯಲ್ಲಿ ವಾಸ ಮಾಡುವಂತಹ ಪರಿಸ್ಥಿತಿಯಾಗಿದೆ. ಕೂಡಲೇ ಮನೆ ಹಾಗೂ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪ್ರೊಬೇಷನರಿ ಡಿವೈಎಸ್ಪಿ ಭೂತೆಗೌಡ್ರು, ನಗರಸಭೆ ಸದಸ್ಯ ರಜನಿಕಾಂತ್, ಹನುಮಂತಪ್ಪ, ನಾಮಿನಿ ಸದಸ್ಯ ಸುರೇಶ್ ತೆರದಾಳ, ಬಸವರಾಜ್, ಸದಾನಂದ, ಜಿ.ಪಂ. ಮಾಜಿ ಸದಸ್ಯ ವಾಗೀಶ ಸ್ವಾಮಿ, ಚಂದ್ರಶೇಖರ್ ಉಪಸ್ಥಿತರಿದ್ದರು.