ದಾವಣಗೆರೆ, ನ.25- ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಹಣವನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ವಾಲ್ಮೀಕಿ ಜಾತ್ರೆ ಹೆಸರಿನಲ್ಲಿ ದುರ್ಬಳಕೆ ಮಾಡಿದ್ದಾರೆ.
ಮಠದ ಸ್ವತ್ತನ್ನು ಕಾನೂನು ಬಾಹಿರವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ನಾಯಕ ಸಮಾಜದ ಮಾಜಿ ಅಧ್ಯಕ್ಷ, ಹಿರಿಯ ವಕೀಲ ಗುಮ್ಮನೂರು ಕೆ.ಎಂ. ಮಲ್ಲಿಕಾರ್ಜುನ್, ಶ್ರೀಗಳು ಕೂಡಲೇ ಪೀಠ ತ್ಯಾಗ ಮಾಡಬೇಕೆಂದು ಆಗ್ರಹಿಸಿದ್ದಾರೆ.
ವಾಲ್ಮೀಕಿ ಜಾತ್ರೆಗೆ ಎಸ್ಟಿ ಸಮುದಾಯದ ಶಿಕ್ಷಣ, ಕೃಷಿ, ಸ್ವಯಂ ಉದ್ಯೋಗ ಹೀಗೆ ಸಮಾಜದ ಅಭಿವೃದ್ಧಿಗೆ ಕಾನೂನು ವ್ಯಾಪ್ತಿಯಲ್ಲಿ ಮೀಸಲಿಟ್ಟಿರುವ 14.47 ಕೋಟಿ ರೂ. ಗಳಲ್ಲಿ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದಿಂದ ಏಳು ಕೋಟಿ ಹಣ ಬಿಡುಗಡೆಯಾಗಿದ್ದು, ಅದನ್ನು ಈ ಹಿಂದೆ ವಾಲ್ಮೀಕಿ ಜಾತ್ರೆಗೆಂದು ದುರುಪಯೋಗಪಡಿಸಿಕೊಂಡಿರುವುದು ನಿಯಮ ಬಾಹಿರವಾಗಿದೆ. ಈ ಕುರಿತು ಟ್ರಸ್ಟ್ನವರು ಕ್ರಮ ಕೈಗೊಳ್ಳದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.