ದಾವಣಗೆರೆ, ನ.24- ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರ ಧರ್ಮಪತ್ನಿ ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ನವರ ಸವಿನೆನಪಿನ ಅಂಗವಾಗಿ ನಗರದಲ್ಲಿ ನಾಲ್ಕು ದಿನಗಳ ಕ್ರಿಕೆಟ್ ಹಬ್ಬವು ಇಂದು ಸಂಜೆಯಿಂದ ಶುಭಾರಂಭಗೊಂಡಿತು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಹಾಗೂ ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ನಿಂದ ನಾಳೆ ದಿನಾಂಕ 25 ರಿಂದ 28ರವರೆಗೆ ಹಮ್ಮಿಕೊಂಡಿರುವ ಕಳೆದ 14 ವರ್ಷದ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ 2020 ರಾಷ್ಟ್ರಮಟ್ಟದ ಹೊನಲು ಬೆಳಕಿನ ಟೆನ್ನಿಸ್ಬಾಲ್ (ಲೀಗ್ ಕಂ ನಾಟೌಟ್) ಕ್ರಿಕೆಟ್ ಟೂರ್ನಿಗೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಆ ಮುಖೇನ ಕ್ರೀಡಾಪಟುಗಳಿಗೆ ಚೈತನ್ಯವುಂಟು ಮಾಡಿದರಲ್ಲದೇ, ಶುಭ ಹಾರೈಸಿದರು.
ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿವೆ. ಗುರುವಾರದಿಂದ ಹೊನಲು ಬೆಳಕಿನಲ್ಲಿ ಪಂದ್ಯಾವಳಿಗಳು ನಡೆಯಲಿವೆ.
ಹರಿಹರ ಯಂಗ್ ಇಲಾಹಿ ಕ್ರಿಕೆಟರ್ಸ್ ಹಾಗೂ ಕರೂರು ಫ್ರೆಂಡ್ಸ್ ನಡುವೆ ಆರಂಭಿಕ ಪಂದ್ಯಾಟ ನಡೆಯಿತು. ಟಾಸ್ ಗೆದ್ದ ಹರಿಹರ ಯಂಗ್ ಇಲಾಹಿ ಕ್ರಿಕೆಟರ್ಸ್ ಬ್ಯಾಟಿಂಗ್ ಅವಕಾಶವನ್ನು ಕರೂರು ಫ್ರೆಂಡ್ಸ್ ಗೆ ನೀಡಿ, ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಅಥಣಿ ವೀರಣ್ಣ, ಮಹಾದೇವ್, ಸಂಘದ ಉಪಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕುರುಡಿ ಗಿರೀಶ್ (ಸ್ವಾಮಿ), ಸಹ ಕಾರ್ಯದರ್ಶಿ ಜಯಪ್ರಕಾಶ್ ಗೌಡ, ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್, ಲಕ್ಷ್ಮಿ ವೆಂಕಟೇಶ್ವರ ಗ್ರಾನೈಟ್ನ ಮಾಲೀಕ ಮಹಾದೇವ್, ರಮೇಶ್ ಬಾಬು, ವಿಜಯಕುಮಾರ್, ದುಗ್ಗಪ್ಪ, ರಾಜು ರೆಡ್ಡಿ, ಚಾಮುಂಡಿ ಕುಮಾರ್, ಸುರೇಶ್, ಶೌಕತ್, ರಂಗಸ್ವಾಮಿ ಸೇರಿದಂತೆ ಇತರರು ಇದ್ದರು. ಇದೇ ವೇಳೆ ಕ್ರೀಡಾ ಪ್ರೋತ್ಸಾಹಕರನ್ನು ಸನ್ಮಾನಿಸಲಾಯಿತು.