ಆನಗೋಡು ಗ್ರಾಮದ ಬರೋಡ ಬ್ಯಾಂಕ್ ಶಾಖೆಗೆ ಮುತ್ತಿಗೆ
ದಾವಣಗೆರೆ, ನ.23- ಕೃಷಿ ಸಾಲ ತೆಗೆದುಕೊಂಡಿದ್ದ ರೈತರಿಗೆ ಬರೋಡ ಬ್ಯಾಂಕ್ ಕಿರುಕುಳ ನೀಡುತ್ತಿರುವು ದಾಗಿ ಆರೋಪಿಸಿ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಆನಗೋಡು ಹೋಬಳಿ ಸಮಿತಿಯಿಂದ ತಾಲ್ಲೂಕಿನ ಆನಗೋಡು ಗ್ರಾಮದ ಬರೋಡಾ ಬ್ಯಾಂಕ್ ಶಾಖೆಗೆ ಇಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಕಷ್ಟವೋ, ಸುಖವೋ ರೈತರು ಸಾಲವನ್ನು ಅಲ್ಪ ಸ್ವಲ್ಪವಾದರೂ ಕಟ್ಟುತ್ತಿದ್ದರು. ಆದರೆ, ಓಟಿಗಾಗಿ ಮುಖ್ಯಮಂತ್ರಿಯಾಗಿದ್ದವರು ಸುಳ್ಳು ಆಶ್ವಾಸನೆ ನೀಡಿ, ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿರು ವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ಷೇಪಿಸಿದರು.
ರೈತರು 4 ಲಕ್ಷ ರೂ. ಸಾಲ ಮಾಡಿದ್ದು, ಈಗ ಮಂತ್ರಿಗಳು ಅರ್ಧದಷ್ಟು ಸಾಲ ಮನ್ನಾ ಮಾಡಿ, ಉಳಿದ ಸಾಲವನ್ನು ಹಾಗೆ ಬಿಟ್ಟಿದ್ದರಿಂದ ಈಗ ಬ್ಯಾಂಕ್ನವರು ಜಪ್ತಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ನೀಡಿದ 6 ಸಾವಿರ ರೂ.ಗಳನ್ನೂ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರೈತರಿಗೆ ಹಣ ಸಿಗುತ್ತಿಲ್ಲ. ಈ ಪರಿಸ್ಥಿತಿಯಿಂದಾಗಿ ರೈತರು ದಿಕ್ಕೇ ತೋಚದಂತಾಗಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳು ವಿಧವಾ ವೇತನವನ್ನು, ಸರ್ಕಾರದ ಸಹಾಯಧನವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳದಂತೆ ಆದೇಶಿಸಿವೆ. ಆದರೂ, ಬ್ಯಾಂಕ್ಗಳು ಸರ್ಕಾರದ ಆದೇಶವನ್ನೇ ಧಿಕ್ಕರಿಸುತ್ತಿವೆ ಎಂದು ದೂರಿದರು.
ಮುಖಂಡರಾದ ಕೆಂಚನಹಳ್ಳಿ ಹನುಮಂತಪ್ಪ, ಶಿವಪುರ ಕೃಷ್ಣಮೂರ್ತಿ, ನೀರ್ಥಡಿ ಭೀಮಪ್ಪ, ಆಲೂರು ಪುಟ್ಟಾನಾಯ್ಕ, ತುಂಬಿಗೆರೆ ವಿಜಯಕುಮಾರ್, ಹೆಬ್ಬಾಳ್ ವಿಜಯಕುಮಾರ್, ಹುಚ್ಚವ್ವನಹಳ್ಳಿ ಸಿದ್ದಣ್ಣ, ನೀರ್ಥಡಿ ಅಜ್ಜಯ್ಯ ಮತ್ತಿತರರು ಪ್ರತಿಭಟನೆಯಲ್ಲಿದ್ದರು.