ದಾವಣಗೆರೆ, ನ.22- ಚಿತ್ರದುರ್ಗ – ದಾವಣಗೆರೆ ಜಿಲ್ಲೆಗಳನ್ನೊಳಗೊಂಡ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವು ಸಾಧಿಸುವಂತೆ ಮಾಡಲು ಜಿಲ್ಲಾ ಕಾಂಗ್ರೆಸ್ ತಯಾರಿ ನಡೆಸುತ್ತಿದ್ದು, ಇದಕ್ಕೆ ನಗರದಲ್ಲಿ ಇಂದು ನಡೆದ ಪಕ್ಷದ ಜನಪ್ರತಿನಿಧಿ ಗಳು, ಮುಖಂಡರು, ಕಾರ್ಯಕರ್ತರ ಸಭೆಯಲ್ಲಿನ ಒಗ್ಗಟ್ಟೇ ಸಾಕ್ಷಿಯಾಯಿತು.
ವಿಧಾನ ಪರಿಷತ್ ಸ್ಥಾನಕ್ಕೆ ಡಿಸೆಂಬರ್‍ನಲ್ಲಿ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ. ಸೋಮಶೇಖರ್ ಅವರು ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿ, ಪಕ್ಷದ ಅಭ್ಯರ್ಥಿ ಪರ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಲಾಯಿತು.
ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಅಭ್ಯರ್ಥಿಯ ಗೆಲುವು ಸಾಧಿಸಲು ಒಗ್ಗಟ್ಟಿನಿಂದ ಶ್ರಮಿಸೋಣ ಎಂಬುದಾಗಿ ಪಕ್ಷದ ಜನಪ್ರತಿನಿಧಿಗಳು, ಮುಖಂಡರ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ವೇಳೆ ಮಾತನಾಡಿದ ಬಿ. ಸೋಮಶೇಖರ್, ನಾನು ಗ್ರಾಮ ಪಂಚಾಯಿತಿಯಿಂದ ಸದಸ್ಯನಾಗಿ ಆಯ್ಕೆಯಾಗಿ ಸಕ್ರಿಯ ರಾಜಕಾರಣದಲ್ಲಿದ್ದು, ಒಬ್ಬ ಕಾರ್ಯಕರ್ತನಾಗಿದ್ದ ನನ್ನನ್ನು ಗುರುತಿಸಿದ ಕಾಂಗ್ರೆಸ್ ಪಕ್ಷವು ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ನಿಮ್ಮೆಲ್ಲರ ಸಹಕಾರ ಅವಶ್ಯ. ನನ್ನನ್ನು ಗೆಲ್ಲಿಸಿದರೆ ನಿಮ್ಮ ಸೇವೆಗಾಗಿ ಸದಾ ದುಡಿಯುತ್ತೇನೆ ಎಂದು ಭರವಸೆ ನೀಡಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಮಾತನಾಡಿ, ಈ ಹಿಂದೆ ಚಿತ್ರದುರ್ಗ- ದಾವಣಗೆರೆ ಜಿಲ್ಲೆಗಳನ್ನೊಳಗೊಂಡ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರುಗಳ ಮಾರ್ಗದರ್ಶನದಲ್ಲಿ ಎರಡು ಬಾರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಘು ಆಚಾರ್ ಅವರು ಗೆಲುವು ಸಾಧಿಸಿದ್ದರು. ಈ ಬಾರಿಯೂ ಎಸ್ಸೆಸ್, ಎಸ್ಸೆಸ್ಸೆಂ ಅವರುಗಳ ಮಾರ್ಗದರ್ಶನದಲ್ಲಿ ಸೋಮಶೇಖರ್ ಅವರ ಪರ ಮತ ಯಾಚಿಸಿ ದರೆ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಎಸ್. ರಾಮಪ್ಪ, ರಾಜ್ಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶಿವಕುಮಾರ್ ಮಾತನಾಡಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಡಾ. ವೈ. ರಾಮಪ್ಪ, ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್, ಶಿವಮೂರ್ತಿ ನಾಯ್ಕ, ಕೆ.ಎಸ್. ಬಸವಂತಪ್ಪ, ಜೆ.ಕೆ. ಕೊಟ್ರಬಸಪ್ಪ, ಪಿ. ರಾಜ್ ಕುಮಾರ್, ಎಸ್. ಮಲ್ಲಿಕಾರ್ಜುನ್, ಎಂ. ನಾಗೇಂದ್ರಪ್ಪ ಮತ್ತು ಇತರರು ಸಭೆಯಲ್ಲಿ ಭಾಗವಹಿಸಿದ್ದರು.