ಮನೆಗಳಿಗೆ ನುಗ್ಗಿದ ನೀರು ಜನಜೀವನ ಅಸ್ತವ್ಯಸ್ತ

ಹರಿಹರ, ನ.17- ನಗರದಲ್ಲಿಂದು ಧಾರಾ ಕಾರವಾಗಿ ಸುರಿದ ಮಳೆಯಿಂದಾಗಿ ಅನೇಕ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.

ಸುಮಾರು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪ್ರಾರಂಭವಾದ ಮಳೆ ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಸುರಿದಿದ್ದು, ಹರಪನಹಳ್ಳಿ ರಸ್ತೆಯಲ್ಲಿ ನೀರು ಅಧಿಕವಾಗಿ ಹರಿದು ಬಂದಿದ್ದರಿಂದ ಅಂಡರ್ ಬ್ರಿಡ್ಜ್‌ನಲ್ಲಿ  ವಾಹನ ಸವಾರರು  ಮತ್ತು ಪಾದಚಾರಿಗಳು ಓಡಾಡಲು ಹರ ಸಾಹಸ ಪಟ್ಟರು. 

ಗಾಂಧಿ ನಗರದಲ್ಲಿ ಕೆಲವು ಮನೆಗಳಿಗೆ ಮತ್ತು ಗುಜರಿ ಅಂಗಡಿಗೆ ನೀರು ನುಗ್ಗಿದ್ದರಿಂದ ನೀರನ್ನು ಹೊರಗಡೆ ಸಾಗಿಸಲು ಸ್ಥಳೀಯ ಜನರು ಪರದಾಡಿದರು. ಕಾಳಿದಾಸ ನಗರ, ಬೆಂಕಿನಗರ, ಇಂದ್ರಾನಗರ, ಹಳೆ ಹರ್ಲಾಪುರ ಸೇರಿದಂತೆ ನಗರದ ಹಲವಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿಯೂ ಮಳೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದರಿಂದ ಕಟಾವು ಮಾಡಿದ್ದ ಭತ್ತವು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈಗಾಗಲೇ ಕಟಾವು ಹಂತದಲ್ಲಿ ಇದ್ದ ಭತ್ತದ ಬೆಳೆಗೂ ಹಾನಿಯಾಗಿದೆ. ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ, ಕೃಷಿ ಇಲಾಖೆ ಅಧಿಕಾರಿ ನಾರದಪ್ಪ ಮತ್ತು ತೋಟಗಾರಿಕೆ ಇಲಾಖೆಯ ರೇಖಾ ನೇತೃತ್ವದಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗುತ್ತಿದೆ.

error: Content is protected !!