ದಾವಣಗೆರೆ, ನ.17- ರೋಗಿಗಳ ಸೇವೆಗೆ ಸಿಗದ ಹಿನ್ನೆಲೆಯಲ್ಲಿ ಹೆಬ್ಬಾಳ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರು ಬೀಗ ಜಡಿದಿದ್ದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಸಮಸ್ಯೆಗೆ ಪರಿಹಾರ ನೀಡಿದ್ದಾರೆ.
ತಾಲ್ಲೂಕಿನ ಹೆಬ್ಬಾಳ್ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ನಿರ್ವಹಣೆ ಕಾಣದೇ ಲಕ್ಷಾಂತರ ಮೌಲ್ಯದ ಶಸ್ತ್ರಚಿಕಿತ್ಸಾ ಕೊಠಡಿ, ಯಂತ್ರಗಳು ಧೂಳು ಹಿಡಿದಿದ್ದವು. ಆಸ್ಪತ್ರೆ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ಹಾಜರಾತಿಗೆ ಸಹಿ ಮಾಡಿ, ಕರ್ತವ್ಯದ ಅವಧಿಯಲ್ಲೂ ಆಸ್ಪತ್ರೆಯಲ್ಲಿರದೇ ರೋಗಿಗಳು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು ಮಂಗಳವಾರ ಆಸ್ಪತ್ರೆಗೆ ಬೀಗ ಜಡಿದಿದ್ದರು.
ಇಂದೂ ಸಹ ಆಸ್ಪತ್ರೆ ಮುಂದೆ ಜಮಾಯಿಸಿದ್ದ ಗ್ರಾಮದ ಮುಖಂಡರು ಬೇಜವಾಬ್ಧಾರಿ ತೋರುವ ವೈದ್ಯರು, ಶುಶ್ರೂಷಕರು, ಸಿಬ್ಬಂದಿ ನಮಗೆ ಬೇಡ. ರೋಗಿಗಳಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂದು ಪಟ್ಟು ಹಿಡಿದರು.
ಆರೋಗ್ಯ ಕೇಂದ್ರದತ್ತ ಆಗಮಿಸಿದ ಗ್ರಾಮಾಂತರ ಠಾಣೆಯ ಎಎಸ್ಐ ರಮೇಶ್ಕುಮಾರ್, ಕಾನ್ಸ್ಟೇಬಲ್ ಅಣ್ಣಪ್ಪ, ಗ್ರಾಮಸ್ಥರ ಅಹವಾಲು ಆಲಿಸಿ ದರು. ಅಲ್ಲದೇ, ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದರೆ ಇಷ್ಟೆಲ್ಲಾ ಸಮಸ್ಯೆ ಆಗುವುದಿಲ್ಲ ಎಂದು ಆಸ್ಪತ್ರೆ ವೈದ್ಯರು, ಶುಶ್ರೂಷಕರು, ಸಿಬ್ಬಂದಿಗೆ ತಿಳಿ ಹೇಳಿದರು.
ಮುಂದೆ ಸರಿಯಾಗಿ ಕೆಲಸ ಮಾಡಿಕೊಂಡು ಹೋಗು ತ್ತೇವೆ. ಗ್ರಾಮಸ್ಥರಿಂದ ಯಾವುದೇ ದೂರು ಬರದಂತೆ ರೋಗಿಗಳ ಆರೈಕೆ ಮಾಡುವುದಾಗಿ ವೈದ್ಯಾಧಿಕಾರಿ ಡಾ. ರಮೇಶ್ ಇತರೆ ಸಿಬ್ಬಂದಿ ಹೇಳಿದ ನಂತರವಷ್ಟೇ ಗ್ರಾಮಸ್ಥರು ಆಸ್ಪತ್ರೆಯ ಬೀಗ ತೆರೆಯಲು ಸಮ್ಮತಿಸಿದರು.
ಗ್ರಾ.ಪಂ ಸದಸ್ಯರಾದ ಬಸವರಾಜಪ್ಪ, ಮಹಾರುದ್ರಯ್ಯ, ಮಹಾಂತೇಶ, ಗ್ರಾಮಸ್ಥರಾದ ಯಲ್ಲೇಶ, ವಾಗೀಶ, ರುದ್ರೇಶ, ಪ್ರಕಾಶ, ವಿಜಯಕುಮಾರ ಸೇರಿದಂತೆ ಇತರರು ಇದ್ದರು.