ದಾವಣಗೆರೆ, ನ.16- ನಗರದಲ್ಲಿ ತುಳಸಿ ಹಬ್ಬವನ್ನು ಮಂಗಳವಾರ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸ ಲಾಯಿತು. ಕೆಲವು ಮನೆಗಳಲ್ಲಿ ಸೋಮವಾರವೂ ಹಬ್ಬ ಆಚರಿಸಲಾಗಿತ್ತು.
ಮಹಿಳೆಯರು ರಂಗೋಲಿ, ಹೂವು, ಮಾವಿನ ಎಲೆಗಳಿಂದ ಹಾಗೂ ದೀಪಗಳಿಂದ ತುಳಸಿ ಕಟ್ಟೆಯನ್ನು ಅಲಂಕರಿಸಿ ಭಕ್ತಿಯಿಂದ ಪೂಜಿಸಿದರು. ದೀಪಾವಳಿ ನಂತರ ಆಗಮಿಸುವ ತುಳಸಿ ಲಗ್ನದಂದು ಪ್ರತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.
ತುಳಸಿ ಪೂಜೆ ಮಾಡುವು ದರಿಂದ ಎಲ್ಲಾ ಕಷ್ಟಗಳು ಪರಿಹಾರವಾ ಗುತ್ತವೆ. ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ಭಾವನೆ ಭಕ್ತರಲ್ಲಿದೆ.
ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡವನ್ನು ನೆಟ್ಟು, ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನು ಇಟ್ಟು ಪೂಜಿಸುವ ರೂಢಿಯೂ ಸಹ ಇದೆ. ತುಳಸಿ ಗಿಡದ ಸುತ್ತಲೂ ಮದುವೆ ಮಂಟಪ ನಿರ್ಮಿಸುತ್ತಾರೆ. ಇದಕ್ಕೆ ತುಳಸಿ ಬೃಂದಾವನವೆಂದು ಹೇಳಲಾಗುತ್ತದೆ.
ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ.
ಮಂಗಳವಾರ ತುಳಸಿ ವಿವಾಹದ ಹಿನ್ನೆಲೆಯಲ್ಲಿ ಪೂಜಾ ಸಾಮಗ್ರಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮಾರುಕಟ್ಟೆಗೆ ಆಗಮಿಸಿದ್ದರು. ಬಾಳೆಗಿಡ, ನೆಲ್ಲಿ,-ಹುಣಸೆ ಟೊಂಗೆಗಳು, ಕಬ್ಬು, ಸೇವಂತಿ, ಚೆಂಡು ಹೂ ಹಾಗೂ ಸೇರಿದಂತೆ ವಿವಿಧ ತುಳಸಿ ಪೂಜಾ ಸಾಮಗ್ರಿಗಳನ್ನು ಖರೀದಿಸಿದರು.