ಜಂಡೆ ಕಟ್ಟೆ ತೆರವಿಗೆ ಖಂಡನೆ, ಮರು ನಿರ್ಮಾಣಕ್ಕೆ ಪಟ್ಟು

ಸೌಹಾರ್ದ ಪರಿಹಾರಕ್ಕೆ ಮುಖಂಡರ ಮನವಿ

ದಾವಣಗೆರೆ, ನ.16- ನಗರದ ಎಂ.ಬಿ. ಕೇರಿಯಲ್ಲಿ ಜಂಡೆ ಕಟ್ಟೆಯನ್ನು ನಗರ ಪಾಲಿಕೆ ಯಿಂದ ತೆರವುಗೊಳಿಸಿದ್ದನ್ನು ಖಂಡಿಸಿ, ಜಾತ್ಯ ತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ನೇತೃತ್ವದಲ್ಲಿ ಎಂ.ಬಿ. ಕೇರಿಯ ಸ್ಥಳೀಯರು ನಗರ ಪಾಲಿಕೆ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಿ, ಮರು ನಿರ್ಮಾಣಕ್ಕೆ ಆಗ್ರಹಿಸಿದರು.

ಕಾನೂನು ನೆಪವೊಡ್ಡಿ ದಶಕಗಳ ಹಳೆಯದಾದ ಸೂಫಿಗಳ ವಿಚಾರ ಧಾರೆಯ ಸೌಹಾರ್ದ ಕೇಂದ್ರವಾಗಿದ್ದ ಜಂಡೆ ಕಟ್ಟೆಯನ್ನು ಧ್ವಂಸ ಮಾಡಲಾಗಿದೆ. ಪಾಲಿಕೆಯ ಈ ರೀತಿಯ ನಡವಳಿಕೆಯಿಂದ ಸೌಹಾರ್ದದ ನಂಬಿಕೆಗೆ ಧಕ್ಕೆ ಉಂಟಾಗಿದೆ ಎಂದು ಪಕ್ಷದ ಮುಖಂಡ ಜೆ. ಅಮಾನುಲ್ಲಾ ಖಾನ್ ಆಕ್ಷೇಪಿಸಿದರು.

ಹಿಂದೂ – ಮುಸ್ಲಿಮರು ಬಾಂಧವ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಅಧಿಕಾರಿಗಳು ತಮ್ಮ ಇಚ್ಛೆಯಂತೆ ಇಂತಹ ಕೆಲಸ ಮಾಡುತ್ತಿರುವುದು ಅಶಾಂತಿಗೆ ಕಾರಣ. ಹೀಗಾಗಿ, ಈಗ ತೆರವು ಮಾಡಲಾದ ಜಂಡೆ ಕಟ್ಟೆ ಮರು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಘಟಕದ ಜಿಲ್ಲಾಧ್ಯಕ್ಷ ಯು.ಎಂ. ಮನ್ಸೂರ್ ಅಲಿ, ಮುಖಂಡರಾದ ಟಿ. ಅಸ್ಗರ್, ಜಮೀರ್ ಅಹಮ್ಮದ್ ಖಾನ್, ಕೆ. ದಾದಾಪೀರ್, ಷನವಾಜ್ ಖಾನ್, ಜಬೀವುಲ್ಲಾ ಸೇರಿದಂತೆ ಇತರರು ಭಾಗವಹಿಸಿದ್ದರು.

ಅನಧಿಕೃತ ಕಟ್ಟಡ : ರಸ್ತೆಯಲ್ಲಿ ಅನಧಿಕೃತ ಕಟ್ಟಡ ಕಟ್ಟಿದ್ದರೆ ಅದನ್ನು ತೆರವುಗೊಳಿಸಲು ತಮಗೆ ಅಧಿಕಾರ ಇದೆ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅವರು ತಿಳಿಸಿದರು.

ಪ್ರತಿಭಟನೆ ಸಂದರ್ಭದಲ್ಲಿ ಪಾಲಿಕೆಯ ಆಯುಕ್ತರ ಕಚೇರಿಗೆ ಆಗಮಿಸಿದ ಮುಖಂಡರೊಬ್ಬರು ಜಂಡೆ ಕಟ್ಟೆಯ ತೆರವುಗೊಳಿಸಲು ನಿಮಗೆ ಅಧಿಕಾರ ಇದೆಯೇ, ಕೌನ್ಸಿಲ್ ಸಭೆಯ ಗಮನಕ್ಕೆ ತರದೇ ಈ ರೀತಿ ಮಾಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಆಯುಕ್ತರು ಈ ಸ್ಪಷ್ಟನೆ ನೀಡಿದರು.

ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತ ಕಟ್ಟಡ ಕಟ್ಟಿದ್ದರೆ ಅದಕ್ಕೆ ಆಕ್ಷೇಪ ವ್ಯಕ್ತವಾದಲ್ಲಿ ತೆರವುಗೊಳಿಸಲು ತಮಗೆ ಅಧಿಕಾರ ಇದೆ. ಇದು ಕೌನ್ಸಿಲ್ ಸಭೆಗೆ ತರುವ ಅವಕಶ್ಯಕತೆ ಇಲ್ಲ ಎಂದು ಆಯುಕ್ತರು ಹೇಳಿದರು.

ಎಂ.ಬಿ. ಕೇರಿಯಲ್ಲಿ ಜಂಡೆ ಕಟ್ಟೆ ವಿಸ್ತಾರ ಮಾಡಲಾಗುತ್ತಿದೆ ಎಂದು ಪೊಲೀಸರಿಗೆ ಮೂಖರ್ಜಿ ಹಾಕಲಾಗಿತ್ತು. ಪೊಲೀಸರು ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿತ್ತು. ಮೊದಲಿನ ಮೂಲ ಸ್ವರೂಪ ಬಿಟ್ಟು ಏನು ಕಟ್ಟಬೇಡಿ ಎಂದು  2 – 3 ಬಾರಿ ಹೇಳಿದ್ದೆವು. ಅದನ್ನು ಮೀರಿ ರಾತೋರಾತ್ರಿ ಅಲ್ಲಿ ಹೆಚ್ಚಿಗೆ ಕಟ್ಟಡ ಕಟ್ಟಲು ಮುಂದಾಗಿದ್ದರು. ಹೀಗಾಗಿ, ತಾವು ತೆರವುಗೊಳಿಸಿದೆವು. ಮೂಲ ಸ್ವರೂಪದಲ್ಲಿ ಬಿಟ್ಟಿದ್ದರೆ ನಾವೇನೂ ಮಾಡುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಸೌಹಾರ್ದ ಪರಿಹಾರಕ್ಕೆ ಮುಖಂಡರ ಮನವೊಲಿಕೆ: ಆಯುಕ್ತರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಜೆ. ಅಮಾನುಲ್ಲಾ ಖಾನ್, ಜಮೀರ್ ಅಹಮ್ಮದ್ ಖಾನ್ ಜಂಡೆ ಕಟ್ಟೆ ತೆರವಿಗೆ ಆಕ್ಷೇಪಿಸಿದರು. ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್,  ಅಲ್ಲಿ ಹಿಂದೆ ಮತ್ತು ವಾಸ್ತವದ ಪರಿಸ್ಥಿತಿಗಳ ಬಗ್ಗೆ ತಾವೂ ಅವಲೋಕಿಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿರುವುದಾಗಿ ತಿಳಿಸಿದರು.

ಈ ವೇಳೆ ಮಾತನಾಡಿದ ಪಾಲಿಕೆ ಸದಸ್ಯ ಚಮನ್ ಸಾಬ್, ನಗರದಲ್ಲಿ ಸಾಮರಸ್ಯ ಕಾಪಾ ಡುವುದು ಮುಖ್ಯ. ಹಾಗಾಗಿ ಜಂಡೆ ಕಟ್ಟೆ ವಿಚಾರ ವಾಗಿ ಈಗಾಗಲೇ ಆಯುಕ್ತರೊಂದಿಗೆ ಮಾತನಾ ಡಿದ್ದೇವೆ. ಮುಂದೆ ಮೇಯರ್ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಇದ್ದೇವೆ. ಸೌಹಾರ್ದತೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿದರು.

ಅಂತಿಮವಾಗಿ ಪಾಲಿಕೆ ಆಯುಕ್ತರ ಸಹಿತ ಪ್ರತಿಭಟನಾಕಾರರ ಬಳಿ ಬಂದು ಜಂಡೆ ಕಟ್ಟೆಯ ಸಮಸ್ಯೆಗೆ ಸೌಹಾರ್ದವಾಗಿಯೇ ಪರಿಹಾರ ಕಂಡುಕೊಳ್ಳಬೇಕು ಎಂದು ಜೆ. ಅಮಾನುಲ್ಲಾ ಖಾನ್, ಪಾಲಿಕೆ ಸದಸ್ಯ ಚಮನ್ ಸಾಬ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಪ್ರತಿಭಟನಾಕಾರರ ಮನವೊಲಿಸಿದರು.

error: Content is protected !!