ಶಾಲಾ ಮಕ್ಕಳಿಗೆ ಸಂಚಾರ ನಿಯಮಗಳ ಪಾಠ ಮಾಡಿದ ಪಿಎಸ್‌ಐ ಜಯಶೀಲಾ

ದಾವಣಗೆರೆ, ನ.16- ನಗರದ ರೈತರ ಭವನದ ಸಮೀಪದಲ್ಲಿರುವ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಸೋಮವಾರ ಠಾಣೆಯ ಮಹಿಳಾ ಪಿಎಸ್ಐ ಜಯಶೀಲಾ ಅವರು ಜಗಳೂರು ತಾಲ್ಲೂಕಿನ ಹೊಸಕೆರೆಯಲ್ಲಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಂಚಾರ ನಿಯಮಗಳ ಬಗ್ಗೆ ಪಾಠ ಮಾಡಿ, ಅವರಲ್ಲಿ ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದರು.

ಸಂಚಾರ ನಿಯಮಗಳೇನೇನು, ಅವುಗಳ ಪಾಲನೆ ಹೇಗೆ, ನಿಯಮ ಉಲ್ಲಂಘನೆಯಿಂದಾಗುವ ಅಪಾಯ, ಅನಾಹುತ ಹಾಗೂ ಉಲ್ಲಂಘನೆಗೆ ಕ್ರಮವೇನು ಎಂಬಿತ್ಯಾದಿಗಳ ಬಗ್ಗೆ ಮನಮುಟ್ಟುವಂತೆ ವಿವರಣೆ ನೀಡುತ್ತಾ, ತಿಳುವಳಿಕೆ ಮೂಡಿಸಿದರು. 

ಕೇರಳ ಸರ್ಕಾರದ ಮಾದರಿಯಲ್ಲಿ ನಮ್ಮ ರಾಜ್ಯ ದಲ್ಲೂ ವಿದ್ಯಾರ್ಥಿಗಳಲ್ಲಿ ಶಿಸ್ತು, ಅರಿವು, ನಾಯಕತ್ವದ ಗುಣ, ನಾಗರಿಕ ಜ್ಞಾನ ಮೂಡಿಸುವ ಉದ್ದೇಶದಿಂದ ಸ್ಟೂಡೆಂಟ್‌ ಪೊಲೀಸ್‌ ಕೆಡೆಟ್‌(ಎಸ್‌ಪಿಸಿ) ಯೋಜನೆಯಡಿ ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ವಾರಕ್ಕೊಮ್ಮೆ ಶಾಲಾ ಅವಧಿ ಮುಗಿದ ಬಳಿಕ ಪೊಲೀಸ್ ಠಾಣೆ ಮತ್ತು ಕಾರ್ಯ ಹಾಗೂ ಠಾಣೆಗಳಿಂದ ಸಾರ್ವಜನಿಕ ಸೇವೆಗಳು ಸೇರಿದಂತೆ ಅಪರಾಧ ಅರಿವಿನ ಬಗ್ಗೆ ಅಗತ್ಯ ಬೋಧನೆ ನೀಡಲಾಗುತ್ತದೆ ಎಂದು ಶಿವಮೊಗ್ಗದ 8ನೇ ಕೆಎಸ್‌ಆರ್‌ಪಿ ಠಾಣೆಯ ತರಬೇತುದಾರ ಕೆ.ಜೆ. ವೆಂಕಟೇಶ್ ಮಾಹಿತಿ ನೀಡಿದರು.

ದಕ್ಷಿಣ ಸಂಚಾರ ಪೊಲೀಸ್ ಠಾಣೆಯ ಎಎಸ್ಐ ಸುಭಾಷ್ ಅವರು ಸಂಚಾರ ನಿಯಮ ಉಲ್ಲಂಘನೆಯಿಂದ ಸಂಭವಿಸುವ ಅಪಘಾತ, ಜೀವ ಹಾನಿ ಬಗ್ಗೆ ಮಕ್ಕಳಿಗೆ ವಿವರಿಸಿದರು.

error: Content is protected !!