ಕನ್ನಡ ಬಳಕೆ ಹೆಚ್ಚಾದರೆ ಭಾಷೆ ಉಳಿಸಲು ಸಾಧ್ಯ

ಹರಿಹರ : ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರೊಬೇಷನರಿ ಡಿವೈಎಸ್ಪಿ ಭೂತೇಗೌಡ್ರು

ಹರಿಹರ, ನ.15-  ಜನರಲ್ಲಿ ಕನ್ನಡ ಬಳಕೆ ಹೆಚ್ಚಾದರೆ ಮಾತ್ರ ಕನ್ನಡ ಭಾಷೆ ಉಳಿಸಲು ಮತ್ತು ಬೆಳೆಸಲು ದಾರಿಯಾಗುತ್ತದೆ ಎಂದು ಪ್ರೊಬೇಷನರಿ ಡಿವೈಎಸ್ಪಿ ಭೂತೇಗೌಡ್ರು ಅಭಿಪ್ರಾಯ ಪಟ್ಟರು.

ನಗರದ ಹೊಸಭರಂಪುರ ಬಡಾವಣೆಯ ಭಗತ್ ಸಿಂಗ್ ಯುವಕ ಸಂಘದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರು ಮಾತನಾಡಿದರು.

ಕನ್ನಡ ನಾಡಿನ ಸಾಹಿತ್ಯ, ಸಂಸ್ಕೃತಿಗೆ ಅಪಾರ ಶಕ್ತಿಯಿದೆ. ಇದನ್ನು ಉಳಿಸಿ, ಬೆಳೆಸಬೇಕಾದರೆ ಸಣ್ಣವರಿದ್ದಾಗಲೇ ಮಕ್ಕಳಿಗೆ ಶಿಕ್ಷಕರು ಮತ್ತು ಪೋಷಕರು ನಾಡಿನ ಒಳಿತಿಗಾಗಿ ಶ್ರಮಿಸಿದವರ ಕುರಿತು ತಿಳಿಸುವ  ಕಾರ್ಯವನ್ನು ಮಾಡುವುದರಿಂದ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಲಿದೆ ಎಂದರು. 

ಜೆಡಿಎಸ್ ಮುಖಂಡ ಸುರೇಶ್ ಚಂದಾಪೂರ್ ಮಾತನಾಡಿ, ಮೊಬೈಲ್ ಬಳಕೆ ಹೆಚ್ಚಾಗಿ ಮಕ್ಕಳು ಕನ್ನಡ ಬಳಕೆ ಮಾಡುವುದು ಕಡಿಮೆಯಾಗಿದೆ. ಇದನ್ನು ಹಾಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಕ್ರಮೇಣ ಕ್ಷೀಣವಾಗಲಿದೆ.  ಮೊಬೈಲ್‌ನಲ್ಲಿ  ಕನ್ನಡ ಭಾಷೆಯನ್ನು ಬಳಸಲು ಮುಂದಾಗಬೇಕು. ಯುವಕರಲ್ಲಿ ನಮ್ಮ ಭಾಷೆ ಎಂಬ ಕಿಚ್ಚು ಇರಬೇಕು ಎಂದರು.

ಪತ್ರಕರ್ತ ಚಿದಾನಂದ ಕಂಚಿಕೇರಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಆಚರಣೆ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಿ ರುವುದು ದುರ್ದೈವದ ಸಂಗತಿ. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ  ಕನ್ನಡ ಭಾಷಾ ಬಳಕೆ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಮುಂದಾಗಬೇಕು. ನೂತನ ಭಗತ್ ಸಿಂಗ್ ಯುವಕರ ಸಂಘವು ಮುಂದಿನ ದಿನಗಳಲ್ಲಿ ಬಡವರ ಒಳಿತಿಗಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂದು ಆಶಿಸಿದರು.

ನಿವೃತ್ತ ಸೈನಿಕರಾದ ಚಂದ್ರಪ್ಪ ಭಾನುವಳ್ಳಿ, ಶೇಖರಪ್ಪ, ಕೊಟ್ರೇಶ್ ದೀಟೂರು ಮಾತನಾಡಿ, ಪ್ರತಿಯೊಂದು ಮನೆಯಿಂದಲೂ ಒಬ್ಬರು ದೇಶ ಸೇವೆಗೆ ಸಿದ್ಧರಾಗಬೇಕು ಎಂದು ಹೇಳಿದರು. ಕೇಂದ್ರದಿಂದ ಬರುತ್ತಿರುವ ನಿವೃತ್ತಿ ವೇತನದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀನಿವಾಸ್ ಚಂದಾಪೂರ್, ಉಜ್ಜನಿಪುರ ಈಶ್ವರಪ್ಪ, ಕೆ.ಬಿ. ಚಂದ್ರು, ಕರಿಬಸಪ್ಪ ಕಂಚಿಕೇರಿ, ರಾಘು ಚೌಗಲೆ, ಸಿಂಗಾಡಿ ಮಂಜುನಾಥ್, ಎಂ.ವಿ. ವಿರುಪಾಕ್ಷಪ್ಪ, ಬೆಣ್ಣೆ ಸಿದ್ದಪ್ಪ, ಪ್ರಕಾಶ್ ಕಂಚಿಕೇರಿ, ಹನುಮಂತ ಸಿಂಗಾಡಿ, ವರುಣ, ಮುರುಳಿ, ಮಲ್ಲಿಕಾರ್ಜುನ್, ಸಂಜೀವ್ ನೀಲಗುಂದ, ಕೇಶವ, ನಾಗರಾಜ್, ಕುಮಾರ್ ನೀಲಗುಂದ, ಪ್ರವೀಣ್ , ಭಾಸ್ಕರ್, ಮುತ್ತು, ಮಹಾಂತೇಶ್, ಗುರು, ಉಲ್ಲಾಸ್ ನೀಲಗುಂದ, ಓಂ ಪ್ರಕಾಶ್ ಕಂಚಿಕೇರಿ, ಗಣೇಶ, ಗಿರೀಶ್, ರಾಜ್, ಆದರ್ಶ್, ಸುನೀಲ್, ವಿಕ್ಕಿ, ದೀಪು, ಮಾರುತಿ ಇತರರು ಹಾಜರಿದ್ದರು. 

error: Content is protected !!