ಪ್ರೊ. ಡಾ. ಎಸ್. ಚಂದ್ರಶೇಖರ ಶೆಟ್ಟಿ
ದಾವಣಗೆರೆ, ನ.11- ದಾವಣಗೆರೆ – ಚಿತ್ರದುರ್ಗ ಜಿಲ್ಲಾ ಬಂಟರ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ನಗರದ ಕುಂದುವಾಡ ರಸ್ತೆಯಲ್ಲಿರುವ ಸಂಘದ ಸ್ವಂತ ಕಟ್ಟಡ ಡಾ. ಶಾಮಸುಂದರ ಶೆಟ್ಟಿ ಬಂಟರ ಭವನದಲ್ಲಿ ಸಂಘದ ಅಧ್ಯಕ್ಷ ಡಾ. ಎಂ. ಪ್ರಭಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಮೊನ್ನೆ ನಡೆಯಿತು.
ಸಂಘದ ಕಾರ್ಯದರ್ಶಿಯೂ ಆಗಿರುವ ಹಿರಿಯ ಲೆಕ್ಕ ಪರಿಶೋಧಕ ಸಿ.ಎ. ಉಮೇಶ ಶೆಟ್ಟಿ ಸ್ವಾಗತಿಸಿದರಲ್ಲದೇ, ಹಿಂದಿನ ಸಭೆಯ ನಡವಳಿಕೆಗಳನ್ನು ಓದಿ ಹೇಳಿದರು. 2021-24ರ ಅವಧಿಗೆ ಹಾಲಿ ಕಾರ್ಯಕಾರಿ ಸಮಿತಿಯನ್ನು ಮುಂದುವರೆಸಲು ತೀರ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ. ಡಾ. ಎಸ್. ಚಂದ್ರಶೇಖರ ಶೆಟ್ಟಿ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಬೇಕಾದರೆ ಗುರಿ ಸಾಧಿಸುವ ಛಲವಿರಬೇಕು ಎಂದು ತಿಳಿಸಿ ಯುವಕ, ಯುವತಿಯರಿಗೆ ಸ್ಫೂರ್ತಿ ತುಂಬಿದರು. ಈ ಸಂಘವು ಕಡಿಮೆ ಸದಸ್ಯರನ್ನು ಹೊಂದಿದ್ದು, ಉತ್ತಮ ಸಾಧನೆ ಮಾಡಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹುಬ್ಬಳ್ಳಿಯ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಮಾಲೀಕ ರಾಜೇಂದ್ರ ವಿ. ಶೆಟ್ಟಿ ಮಾತನಾಡಿ, ಬಂಟ ಸಮಾಜದವರು ಸಾಹಸಿ ಮನೋಭಾವದವರು. ಇಂದು ಪ್ರಪಂಚದಾದ್ಯಂತ ಎಲ್ಲಾ ರಂಗಗಳಲ್ಲಿ ಸಾಧನೆ ಮಾಡಿ ಮುಂಚೂಣಿಯಲ್ಲಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ ಹಾಗೂ ಇಂತಹ ಸುಂದರ ಕಲ್ಯಾಣ ಮಂಟಪ ಕಟ್ಟಿರುವುದು ನಿಜಕ್ಕೂ ಸಾಧನೆ ಎಂದರು.
ಸಭೆಯ ಆರಂಭದಲ್ಲಿ, ಕಟ್ಟಡ ಸಮಿತಿಯ ಅಧ್ಯಕ್ಷರಾಗಿದ್ದ ದಿ. ಡಾ. ಶಾರದಾ ಎಸ್. ಶೆಟ್ಟಿ ಅವರ ಅಗಲಿಕೆಗೆ ಸಂತಾಪಾ ವ್ಯಕ್ತಪಡಿಸಲಾಯಿತು. ನಗರಸಭೆಯ ಮಾಜಿ ಅಧ್ಯಕ್ಷರೂ ಆದ ಸಂಘದ ನಿರ್ದೇಶಕ ದಿನೇಶ್ ಕೆ. ಶೆಟ್ಟಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸಿಎ ಉಮೇಶ್ ಶೆಟ್ಟಿ ವಂದಿಸಿದರು. ನಿರ್ದೇಶಕ ಕೆ.ಮೋಹನದಾಸ್ ಶೆಟ್ಟಿ ವಂದಿಸಿದರು.