ಸಕ್ಕರೆ ಕಾಯಿಲೆ ಬಗ್ಗೆ ಆರಂಭಿಕ ಎಚ್ಚರ ವಹಿಸಿದರೆ ದೀರ್ಘ ಕಾಲದ ಜೀವನ

37ನೇ ವಿಶ್ವ ಮಧುಮೇಹ ಮೇಳದಲ್ಲಿ ಡಾ. ಮಂಜುನಾಥ ಆಲೂರು

ದಾವಣಗೆರೆ, ನ.14- ಸಕ್ಕರೆ ಕಾಯಿಲೆ ಬಗ್ಗೆ ಸೂಕ್ತ ಮಾಹಿತಿ ಪಡೆದು ಜೀವನ ಶೈಲಿ ಬದಲಿಸಿಕೊಂಡರೆ ದೀರ್ಘ ಕಾಲ ಬದುಕಬಹುದು. ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಕ್ಕರೆ ಕಾಯಿಲೆ ತಜ್ಞ ವೈದ್ಯ ಡಾ. ಮಂಜುನಾಥ್‌ ಆಲೂರು ತಿಳಿಸಿದರು.

ಅವರು, ಇಂದು ನಗರದ ಆಲೂರು ಚಂದ್ರಶೇಖರಪ್ಪ ಮೆಮೋರಿಯಲ್ ಟ್ರಸ್ಟ್ ಮತ್ತು ಆಸ್ಪತ್ರೆ ವತಿಯಿಂದ ದಿ. ಆಲೂರು ಚಂದ್ರಶೇಖರಪ್ಪನವರ ಜ್ಞಾಪಕಾರ್ಥವಾಗಿ ಹಾಗೂ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಆಸ್ಪತ್ರೆಯಲ್ಲಿ 37ನೇ ವಿಶ್ವ ಮಧುಮೇಹ ಮೇಳ ನಡೆಯಿತು.

ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರಂಭಿಕ ದಿನಗಳಲ್ಲಿಯೇ ಎಚ್ಚರಿಕೆ ವಹಿಸುವುದು ಅಗತ್ಯ. ಇನ್ಸುಲಿನ್ ಬಳಕೆ ಆರಂಭಿಸಿ ನೂರು ವರ್ಷಗಳು ತುಂಬಿದರೂ, ಇನ್ನೂ ಅದರ ಉಪಯೋಗ ಎಲ್ಲರಿಗೂ ತಲುಪುತ್ತಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವ ಮಧುಮೇಹ ಮೇಳವನ್ನು ನಡೆಸುತ್ತಿರುವುದಾಗಿ  ಹೇಳಿದರು.

ಕಳೆದ 40 ವರ್ಷಗಳಿಂದ ಆಲೂರು ಆಸ್ಪತ್ರೆಯು ಸಕ್ಕರೆ ಕಾಯಿಲೆ ರೋಗಿಗಳಿಗೆ ಚಿಕಿತ್ಸೆ, ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದು, ಹೊರ ರೋಗಿ ವಿಭಾಗದಿಂದ 1 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಶುಶ್ರೂಷೆ ನೀಡಲಾಗಿದೆ ಎಂದರು.

ಶ್ರೀಮತಿ ಸುನಂದಮ್ಮ ಚಂದ್ರಶೇಖರಪ್ಪ ಆಲೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಇಎನ್‍ಟಿ ಸರ್ಜನ್ ಕೆ.ಪಿ. ಬಸವರಾಜಪ್ಪ, ಚರ್ಮ ರೋಗ ತಜ್ಞ ಡಾ. ರವೀಂದ್ರ, ಡಾ. ವರುಣಚಂದ್ರ ಆಲೂರು, ಡಾ. ವರ್ಷಿತಾ ವರುಣಚಂದ್ರ, ನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರುಗಳು ಮಾತನಾಡಿದರು.

error: Content is protected !!