ಚುನಾವಣಾ ನೀತಿ ಸಂಹಿತೆಗಳಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತ

ಚುನಾವಣೆ ನೆಪದಲ್ಲಿ ಅಗತ್ಯವಿರುವ ಕಡೆ ಅಭಿವೃದ್ಧಿಗೆ ಕೈಗೊಳ್ಳುವ ಕಾಮಗಾರಿ ಗಳನ್ನು ಆಮಿಷದ ಕಾಮಗಾರಿ ಎಂದು ಪರಿಗಣಿಸುವುದು ಸೂಕ್ತವಲ್ಲ.

– ತರಳಬಾಳು ಜಗದ್ಗುರುಗಳು

ಹರಪನಹಳ್ಳಿ, ನ.12- ಚುನಾವಣಾ ನೀತಿ ಸಂಹಿ ತೆಗಳಿಂದಾಗಿ ದೇಶದಲ್ಲಾಗುವ ಅಭಿವೃದ್ಧಿ ಕಾರ್ಯ ಗಳು ಸ್ಥಗಿತಗೊಳ್ಳುತ್ತವೆ.  ನೀತಿ ಸಂಹಿತೆ ಜೀವನ ದುದ್ದಕ್ಕೂ ಬೇಕು. ಆದರೆ ಅದು  ಸಾಂವಿಧಾನಿಕವೋ, ಆಯೋಗದ ನೀತಿಯೋ ಎನ್ನುವ ಮಾಹಿತಿಯನುಸಾರ ಕ್ರಮ ಕೈಗೊಳ್ಳ ಬೇಕು ಎಂದು  ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ಶುಕ್ರವಾರ ನೂತನವಾಗಿ ನಿರ್ಮಿಸಿರುವ ಚೌಡೇಶ್ವರಿ ದೇವಸ್ಥಾನ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ನೀತಿ ಸಂಹಿತೆಯನ್ನು ಟೀಕೆ ಮಾಡುವ ಉದ್ದೇಶ ನಮ್ಮದಲ್ಲ ಎಂದು ಸ್ಪಷ್ಟಪಡಿಸಿದ ಶ್ರೀಗಳು,  ಸಾರ್ವಜನಿಕರಿಗೆ ಉಪಯೋಗಕ್ಕೆ ಬರುವ ಯೋಜನೆಯ ಮಂಜೂರಾತಿ, ಆಶ್ವಾಸನೆ ತಪ್ಪಾಗಲಾರದು. ಚುನಾವಣಾ ನೆಪದಲ್ಲಿ ಅಗತ್ಯವಿರುವ ಕಡೆ ಅಭಿವೃದ್ಧಿಗಾಗಿ ಕೈಗೊಳ್ಳುವ ಕಾಮಗಾರಿಗಳನ್ನು ಆಮಿಷದ ಕಾಮಗಾರಿ ಎಂದು ಪರಿಗಣಿಸುವುದು ಸಲ್ಲದು ಎಂದು ಹೇಳಿದರು.

ತಾಯಂದಿರು ತಮ್ಮ ಮಕ್ಕಳನ್ನು ರಾಜರಂತೆ  ಪೋಷಿಸುವ ಹಾಗೆ, ನಮ್ಮ ಮಠವು ಸರ್ವ ಜನಾಂಗದ ಕ್ಷೇಮಾಭಿವೃದ್ಧಿ ಬಯಸುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಮಾನವೀಯತೆ ಮರೆಯಾಗುತ್ತಿದ್ದು,  ಕೇವಲ ನಗ, ನಾಣ್ಯಕ್ಕೆ ಗೌರವ ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಗಳೂರಿನ 57 ಕೆರೆ ತುಂಬಿಸುವ ಯೋಜನೆಗೆ ಕೊರೊನಾ ಹಿನ್ನೆಲೆಯಲ್ಲಿ ಹಿನ್ನಡೆಯಾಗಿದೆ. ಈ ಯೋಜನೆಯಲ್ಲಿ ಮಠದ ಪಾತ್ರ ಎಷ್ಟಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.  ರಾಜಕೀಯ ನಾಯಕರು ಮಠದ ಮಕ್ಕಳೇ ಆಗಿದ್ದಾರೆ. ಎಚ್.ಪಿ ರಾಜೇಶ್, ಎಚ್. ಆಂಜನೇಯ, ಎಸ್.ಎಸ್ ಮಲ್ಲಿಕಾರ್ಜುನ್, ಜಿ.ಎಂ. ಸಿದ್ದೇಶ್ವರ, ಎಸ್.ವಿ ರಾಮಚಂದ್ರ, ಚಂದ್ರಪ್ಪ ಆದಿಯಾಗಿ ಯೋಜನೆಗೆ ಶ್ರಮಿಸಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವು ರೈತರ ಮೊಗದಲ್ಲಿ ಮಂದಹಾಸದ ಮೂಡಿಸಿದೆ.  1721ರಲ್ಲಿ ಭರಮಣ್ಣನಾಯಕ ಭರಮಸಾಗರ ಕೆರೆ ಕಟ್ಟಿಸಿದ್ದರು. ಆ ಕೆರೆಗೆ 2021 ರಲ್ಲಿ ಅಂದರೆ, 300 ವರ್ಷಗಳ ಬಳಿಕ ಕೆರೆಯ ಒಡಲಿಗೆ ನೀರು  ತುಂಬಿಸಿರುವುದು ಅತೀವ ಸಂತಸ ನೀಡಿದೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಜಗಳೂರು  ಶಾಸಕ ಎಸ್.ವಿ.ರಾಮಚಂದ್ರಪ್ಪ ಮಾತನಾಡಿ, ತರಳಬಾಳು ಜಗದ್ಗುರುಗಳು ಕಾಲಿಟ್ಟ ನಾಡು ಬಂಗಾರವಾಗಿದೆ ಎಂದರು.

ಸಂಸದ ಜಿ.ಎಂ ಸಿದ್ದೇಶ್ವರ ಮಾತನಾಡಿ, ಕರ್ನಾಟಕದಲ್ಲಿ ಅತಿ ಹೆಚ್ಚು ನೀರಾವರಿ ಯೋಜನೆಗಳಿಗೆ ಒತ್ತು ಕೊಟ್ಟುವರು ಸಿರಿಗೆರೆ ಶ್ರೀಗಳು ಎಂದರು.

ಮಾಜಿ ಶಾಸಕ ಎಚ್.ಪಿ ರಾಜೇಶ್, ತಾಲ್ಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಬಂದೋಳ್ ಮಂಜುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಬಲೇಶ್ವರ ಗೌಡ, ತಾಲ್ಲೂಕು ಪಂಚಾಯಿತಿ  ಮಾಜಿ ಸದಸ್ಯ ಪಾಟೀಲ್ ಕೆಂಚನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಣ್ಣ, ಕಾಂಗ್ರೆಸ್‌ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ,  ಮುಖಂಡರಾದ ಚಿಕ್ಕಮ್ಮನಟ್ಟಿ ದೇವೇಂದ್ರಪ್ಪ, ಎಂ.ಬಿ ಯಶವಂತ್ ಗೌಡ, ದ್ಯಾಮನಗೌಡ, ಅಣಜಿಗೇರಿ ಭರಮನಗೌಡ್ರು, ಮಲ್ಲಿಕಾರ್ಜುನ, ಉಚ್ಚಂಗಿ ದುರ್ಗದ ಜಯಣ್ಣ, ಫಣಿಯಾಪುರ ನಿಂಗರಾಜ, ತುಂಬಿಗೆರೆ ದ್ಯಾಮನಗೌಡ್ರು, ಚನ್ನಬಸಪ್ಪ ಸೇರಿದಂತೆ ಇತರರು ಇದ್ದರು.

error: Content is protected !!