ಭಾಷಾ ನಗರದಲ್ಲೊಂದು ಸ್ಮಾರ್ಟ್ ಹೆರಿಗೆ ಆಸ್ಪತ್ರೆ

ದಾವಣಗೆರೆ, ಮಾ.23-  ಬಡತನ ರೇಖೆಗಿಂತ ಕಡಿಮೆ ಇರುವ ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿರುವ ದಾವಣಗೆರೆಯ ಭಾಷಾ ನಗರದಲ್ಲಿ 1.30 ಕೋಟಿ ರೂ. ವೆಚ್ಚದಲ್ಲಿ ಸ್ಮಾರ್ಟ್ ಹೆರಿಗೆ ಆಸ್ಪತ್ರೆ ನಿರ್ಮಾಣಗೊಂಡಿದ್ದು, ಶೀಘ್ರವೇ ಉದ್ಘಾಟನೆಗೊಳ್ಳಲು ಸಿದ್ಧತೆ ನಡೆಯುತ್ತಿದೆ.

ನಗರದ ಹಳೇ ಭಾಗದಲ್ಲಿ ಅತಿ ಹೆಚ್ಚಿನ ಜನಸಂದಣಿ ಪ್ರದೇಶ ಎಂದು ಗುರುತಿಸಲ್ಪಡುವ  ಭಾಷಾ ನಗರದಲ್ಲಿ ಪ್ರಸ್ತುತ ಇದ್ದ ಹೆರಿಗೆ ಆಸ್ಪತ್ರೆಯ ಕಟ್ಟಡದ ಗಾತ್ರ ಚಿಕ್ಕದಾಗಿತ್ತು.  ಅಲ್ಲದೆ, ಕಟ್ಟಡ ಹಳೆಯದಾಗಿದ್ದರಿಂದ ಇಲ್ಲಿಗೆ ಬರುವ ಗರ್ಭಿಣಿಯರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು.

ಇದೀಗ ಇಲ್ಲಿನ ಜನಾನುಕೂಲ ಪರಿಗಣಿಸಿ, ಚಿಕಿತ್ಸೆಗೆ ಅನುಕೂಲವಾಗುವಂತೆ ಪ್ರಸ್ತುತ ಇರುವ ಹೆರಿಗೆ ಆಸ್ಪತ್ರೆ ಆವರಣದ ಜಾಗದಲ್ಲಿಯೇ ಮತ್ತೊಂದು ಸುಸಜ್ಜಿತವಾದ ಪ್ರಸೂತಿ ಆರೋಗ್ಯ ಕೇಂದ್ರವನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಿರ್ಮಿಸಲಾಗಿದ್ದು, ಶೀಘ್ರವೇ ಲೋಕಾರ್ಪಣೆಗೆ ಸಜ್ಜಾಗಿದೆ.

ಸುಮಾರು 486 ಚದರ ಮೀಟರ್ ವಿಸ್ತೀರ್ಣದಲ್ಲಿ ಈ ಆಸ್ಪತ್ರೆಯನ್ನು ಕಟ್ಟಲಾಗಿದ್ದು, ಜಿ+1 ಮಾದರಿಯಲ್ಲಿ 2 ಮಹಡಿಯಲ್ಲಿ ನಿರ್ಮಾಣವಾಗಿದೆ.

ಮೊದಲ ಮಹಡಿಯಲ್ಲಿ 18 ಬೆಡ್‌ಗಳ ಸಾಮರ್ಥ್ಯವುಳ್ಳ ವಾರ್ಡ್ ವ್ಯವಸ್ಥೆ ಕಲ್ಪಿಸಲಾಗಿದೆ.  ವೈದ್ಯರ ಕೊಠಡಿ, ಆಪರೇಷನ್ ಥಿಯೇಟರ್, ನಿರೀಕ್ಷಣಾ ಕೊಠಡಿ, ಲೇಬರ್ ರೂಂ, ವಿಶ್ರಾಂತಿ ಕೊಠಡಿ ಸೇರಿದಂತೆ 2 ಪ್ರತ್ಯೇಕ ವಾರ್ಡ್‌ಗಳಿವೆ.

ಮೊದಲ ಮಹಡಿಗೆ ಸುಸಜ್ಜಿತ ರಾಂಪ್ ಮತ್ತು ಮೆಟ್ಟಿಲುಗಳ ವ್ಯವಸ್ಥೆ ಕಲ್ಪಿಸಿರುವುದು ಇಲ್ಲಿನ ವಿಶೇಷತೆ.


ಭಾಷಾ ನಗರದಲ್ಲೊಂದು ಸ್ಮಾರ್ಟ್ ಹೆರಿಗೆ ಆಸ್ಪತ್ರೆ - Janathavani– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ,
[email protected]

error: Content is protected !!