ಬೈಕ್ ರಾಲಿ, ವಸ್ತು ಪ್ರದರ್ಶನ, ರಂಗೋಲಿ, ಚಿತ್ರ ಪ್ರದರ್ಶನ
ದಾವಣಗೆರೆ, ನ. 12 – ಗ್ರಾಮೀಣರು ಹಾಗೂ ಬಡವರಿಗೆ ಕಾನೂನು ಅರಿವು ಮೂಡಿಸಲು ಕಾನೂನು ಸೇವಾ ಪ್ರಾಧಿಕಾರ ಮನೆ ಮನೆಗೆ ತೆರಳಿ ಅಭಿಯಾನ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ರಾಜೇಶ್ವರಿ ಎನ್. ಹೆಗಡೆ ತಿಳಿಸಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಅಭಿಯೋಜನೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪ್ಯಾನ್ ಇಂಡಿಯಾ ಅವೇರ್‌ನೆಸ್ ಅಂಡ್ ಔಟ್‌ರೀಚ್ ಅಂಗವಾಗಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಸೌಲಭ್ಯ ವಿತರಣೆ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಕ್ಟೋಬರ್ 2ರಿಂದ ನವೆಂಬರ್ 14ರವರೆಗೆ ಕಾನೂನು ಸೇವಾ ಪ್ರಾಧಿಕಾರದಿಂದ ಜನರಲ್ಲಿ ಕಾನೂನಿನ ಕುರಿತು ಅರಿವು ಮೂಡಿಸಲು ನಿರಂತರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಶಾಲಾ ಮಕ್ಕಳಿಂದ ಚಿತ್ರಕಲೆ,
ಪ್ರಬಂಧ ಸ್ಪರ್ಧೆ, ಚಿತ್ರ ನಿರ್ಮಾಣ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಮಕ್ಕಳು ರಚಿಸಿದ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಜೆ.ವಿ. ವಿಜಯಾನಂದ, ಕಾನೂನು ಸೇವಾ ಪ್ರಾಧಿಕಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಮಗುವೊಂದು ಆಟವಾಡುವ ಹಕ್ಕು ನಮಗಿದೆ ಎಂದು ತಿಳಿಸಿದೆ. ಇದು ಮಗುವಿನ ಸಾಮಾನ್ಯ ಜ್ಞಾನ ತೋರಿಸುತ್ತದೆ. ಆದರೆ, 18 ವರ್ಷದೊಳಗಿನವರಿಗೆ ವಾಹನ ಓಡಿಸಲು ಕೊಡುವ ಪೋಷಕರಿಗೆ ಇಂತಹ ಸಾಮಾನ್ಯ ಜ್ಞಾನ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ಮಾತನಾಡಿ, ಅಕ್ಷರ ಕಲಿತಂತೆಯೇ ಕಾನೂನು ತಿಳಿಯಬೇಕು. ಕಾನೂನು ಅರಿತರೆ ಜಯ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಎನ್. ಶ್ರೀಪಾದ್, ನ್ಯಾಯಮೂರ್ತಿಗಳಾದ ಬಿ. ದಶರಥ, ಪ್ರೀತಿ ಸದರ ಜೋಷಿ, ಹಿರಿಯ ಸಿವಿಲ್ ನ್ಯಾಯಮೂರ್ತಿಯೂ ಆಗಿರುವ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಸಕ ಕೆ.ಹೆಚ್. ವಿಜಯ ಕುಮಾರ್, ಡಿಡಿಪಿಐ ಜಿ.ಆರ್. ತಿಪ್ಪೇಶಪ್ಪ, ದಾವಣಗೆರೆ ದಕ್ಷಿಣ ವಲಯದ ಬಿಇಒ ನಿರಂಜನ, ಉತ್ತರ ವಲಯದ ಬಿಇಒ ಟಿ. ಅಂಬಣ್ಣ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ. ಬಸವರಾಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರದರ್ಶನ – ರಾಲಿ : ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಐ.ಸಿ.ಡಿ.ಎಸ್. ಕಾರ್ಯಕ್ರಮದ ಅರಿವು ಮೂಡಿಸುವ ರಂಗೋಲಿಗಳನ್ನು ವಿವಿಧ ಕಾಳುಗಳಲ್ಲಿ ರಚಿಸಿದ್ದರು. ಭಾಗ್ಯಲಕ್ಷ್ಮಿ, ಸಖಿ, ಮಾತೃವಂದನ, ಪೋಷಣ ಅಭಿಯಾನ ಸೇರಿದಂತೆ, ಹಲವಾರು ಯೋಜನೆಗಳ ಭಿತ್ತಿಪತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಇದಕ್ಕೂ ಮುಂಚೆ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷಣ ತರಬೇತಿ ಸಂಸ್ಥೆಯವರೆಗೆ ನಡೆದ ಬೈಕ್
ರಾಲಿಯಲ್ಲಿ ನ್ಯಾಯಮೂರ್ತಿಗಳು, ವಕೀಲರು, ಪೊಲೀಸರು ಮತ್ತಿತರರು ಭಾಗವಹಿಸಿದ್ದರು.