ಗದಗ, ನ.11- ವೀರಶೈವ ಲಿಂಗಾಯತ ಎರಡು ಒಂದೇ. ಇನ್ನು ಮುಂದೆ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.
ಗದಗ ಜಿಲ್ಲೆಯ ಹಾಲಕೆರೆಯಲ್ಲಿ ನಿನ್ನೆ ನಡೆದ ಹಾಲಕೆರೆ ಶ್ರೀ ಅನ್ನದಾನೀಶ್ವರ ಸಂಸ್ಥಾನದಿಂದ ಏರ್ಪಾಡಾಗಿದ್ದ ಗುರುವಂದನೆ ಹಾಗೂ ನೂತನ ಜಗದ್ಗುರುಗಳಿಗೆ ಚರಪಟ್ಟಾಧಿಕಾರ ಮಹೋತ್ಸವದಲ್ಲಿ ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳವರ ಸಾಧನೆ ಕುರಿತ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ವೀರಶೈವ – ಲಿಂಗಾಯತವನ್ನು ಬೇರ್ಪಡಿಸಲು ಕೆಲವರು ಹವಣಿಸುತ್ತಿದ್ದಾಗ, ಎರಡು ಒಂದೇ ಎಂದು ಸಮರ್ಥವಾಗಿ ಪ್ರತಿಪಾದಿಸಿ, ಮಾರ್ಗದರ್ಶನ ನೀಡಿದ ಶ್ರೀ ಅಭಿನವ ಅನ್ನದಾನ ಮಹಾಸ್ವಾಮಿಗಳವರ ಸೇವೆ ಅನನ್ಯ ಅಮೋಘ ಎಂದು ಅವರು ಶ್ಲ್ಯಾಘಿಸಿದರು.
ಸಮಾಜಕ್ಕೆ ಧಕ್ಕೆ ಬಂ ದಾಗ ಶ್ರೀ ಅಭಿನವ ಅನ್ನದಾನ ಮಹಾಸ್ವಾಮಿಗಳವರು ಅಖಿಲ ಭಾರತ ವೀರಶೈವ ಮಹಾ ಸಭಾಕ್ಕೆ ಮಾರ್ಗ ದರ್ಶನ ನೀಡಿದ್ದರಿಂದ ಸಮಾಜ ಇನ್ನೂ ಗಟ್ಟಿಯಾಗಿದೆ. ಇದರಲ್ಲಿ ಕೆಲವು ಹಿತಾಸಕ್ತಿಗಳು ಸಮಾಜವನ್ನು ಛಿದ್ರ ಮಾಡಲು ಶ್ರಮಿಸುತ್ತಿದ್ದಾರೆ. ಅಂತಹ ವರದಿಗಳಿಗೆ ಕಿವಿಗೊಡಬೇಡಿ. ಇಂತಹ ಸಂದರ್ಭದಲ್ಲಿ ವೀರಶೈವ ಪಂಚಮಸಾಲಿ ಸಮಾಜದವರು ಮೂರನೇ ಪೀಠ ಮಾಡುವುದು ಸರಿಯಲ್ಲವೆಂದು ಆಕ್ಷೇಪಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ರಕ್ತದಾನ ಶಿಬಿರ ನಡೆಸಿ, ರಕ್ತ ಸಂಗ್ರಹಿಸಿ ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ. ಅಲ್ಲದೇ ರೈತರ ಸಮಾವೇಶ ಮಾಡಿ, ಸಾವಯವ ಗೊಬ್ಬರದ ಮಹತ್ವ ತಿಳಿಸಿಕೊಟ್ಟ ಶ್ರೀಗಳವರ ಸೇವೆ ಶಾಶ್ವತವಾದದ್ದು ಎಂದು ನುಡಿದರು.
ಕಿರಿಯ ಶ್ರೀಗಳಿಗೆ ಪೀಠಾಧಿಕಾರ ವಹಿಸಿಕೊಡುವುದು ತಂದೆ – ಮಕ್ಕಳ ಸಂಬಂಧವಿದ್ದಂತೆ. ಆದ್ದರಿಂದ ಹಿರಿಯ ಜಗದ್ಗುರುಗಳ ಯೋಗಕ್ಷೇಮ ವಿಚಾರ ಮಾಡುವುದು ಕಿರಿಯರ ಕರ್ತವ್ಯ, ಅವರಿಗೆ ಕಿಂಚಿತ್ತು ಅಪವಾದ ಬರದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಮೈಸೂರಿನ ಶ್ರೀ ಶಿವರಾತ್ರೀಶ್ವರ ಜಗದ್ಗುರುಗಳು, ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರುಗಳು, ಬಳ್ಳಾರಿಯ ಶ್ರೀಗಳು, ನಾಡಿನ ಹರ ಗುರು ಚರಮೂರ್ತಿಗಳು ಹಾಲಕೆರೆ ಜಗದ್ಗುರು ಡಾ. ಅಭಿನವ ಅನ್ನದಾನ ಮಹಾಸ್ವಾಮಿಗಳು, ಶ್ರೀ ಮುಪ್ಪಿನ ಬಸವಲಿಂಗ ದೇವರು ಸೇರಿದಂತೆ ಹರ ಗುರು ಚರಮೂರ್ತಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ದಾವಣಗೆರೆಯ ಶ್ರೀ ಅನ್ನದಾನೇಶ್ವರ ಶಾಖಾ ಮಠದ ಅಧ್ಯಕ್ಷರೂ ಆಗಿರುವ ಕೈಗಾರಿಕೋದ್ಯಮಿ ಅಥಣಿ ಎಸ್.ವೀರಣ್ಣ, ಮಾಜಿ ಸಂಸದ ಜಿ.ಎಸ್.ಪಾಟೀಲ್, ಶಾಸಕ ಕಳಕಪ್ಪ ಬಂಡಿ ಮತ್ತಿತರರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ದಾವಣಗೆರೆ ಭಕ್ತರ ತಂಡ : ನೂತನ ಜಗದ್ಗುರುಗಳ ಪಟ್ಟಾಧಿಕಾರ ಮಹೋತ್ಸವದಲ್ಲಿ ದಾವಣಗೆರೆಯ ಶ್ರೀ ಅನ್ನದಾನೀಶ್ವರ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಎಂ ಅಡಿವೆಪ್ಪ, ಟ್ರಸ್ಟಿಗಳಾದ ದಾವಣಗೆರೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಬಾವಿ ಸೇರಿದಂತೆ ಅನೇಕ ಭಕ್ತರು, ಅಕ್ಕನ ಬಳಗದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.