ರಾಣೇಬೆನ್ನೂರು, ನ.10- ತಾಲ್ಲೂಕಿನ ಮೇಡ್ಲೇರಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಎನ್‌ಆರ್‌ಇಜಿ ಯೋಜನೆಯಡಿ ಕುದರಿಹಾಳ ರಸ್ತೆಯ ಮುಸ್ಲಿಂ ಸಮುದಾಯದ ಸ್ಮಶಾನ, ಅರೆಮಲ್ಲಾಪುರಕ್ಕೆ ಹೋಗುವ 3 ಕಿಮೀ ರಸ್ತೆ ಹಾಗೂ ಬೀರೇಶ್ವರ ಪ್ರೌಢಶಾಲೆಯಲ್ಲಿ ಗಿಡ ಮರಗಳನ್ನು ಹಚ್ಚಿದ್ದೇವೆ ಎಂದು ಬಿಲ್ ಪಾವತಿ ಮಾಡಿದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಡಾ. ಚಂದ್ರಶೇಖರ ಅವರು ಶ್ರೀ ಬೀರೇಶ್ವರ ಪ್ರೌಢ ಶಾಲೆಗೆ ಭೇಟಿ ನೀಡಿ ಶಾಲಾ ಆವರಣದಲ್ಲಿ ಪರಿಶೀಲನೆ ನಡೆಸಿದರು. ನಂತರ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು. ಶಾಲಾ ಮೈದಾನದ ಆವರಣದಲ್ಲಿ ಶಿಕ್ಷಕರು ಹಾಗೂ ಮಕ್ಕಳು ಶ್ರಮದಾನದಿಂದ ಸಾವಿರಾರು ಗಿಡ ಮರಗಳನ್ನು ಹಚ್ಚಿದ್ದನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು.
ಲೋಕಾಯುಕ್ತರು, ಶಾಲೆಯ ಮುಖ್ಯ ಶಿಕ್ಷಕ ಬಿ.ಜಿ. ತಾಯಮ್ಮನವರ ಅವರನ್ನು ಶಾಲಾ ಆವರಣದಲ್ಲಿ ಗಿಡಮರಗಳನ್ನು ಹಚ್ಚಿದ್ದು ಯಾವಾಗ ಎಂದು ವಿಚಾರಿಸಲಾಗಿ, ಇದಕ್ಕೆ ಉತ್ತರಿಸಿದ ತಾಯಮ್ಮನವರ 2008-09 ರಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ತಂದು ವಿದ್ಯಾದಾನ ಸಮಿತಿ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಮಕ್ಕಳ ಶ್ರಮದಿಂದ ಗುಂಡಿ ತೋಡಿ ಮರಗಳನ್ನು ಹಚ್ಚಿದ್ದೇವೆ ಎಂದು ಸ್ಪಷ್ಟ ಪಡಿಸಿದರು.
ಗಿಡಮರಗಳನ್ನು ಹಚ್ಚದೇ ಗ್ರಾಮ ಪಂಚಾಯ್ತಿಯಿಂದ ಹೇಗೆ ಬಿಲ್ ಪಾಸ್ ಮಾಡಿದ್ದೀರಿ ಎಂದು ಗ್ರಾ.ಪಂ. ಪಿಡಿಓ ಎಂ.ಕೆ. ಪ್ರಕಾಶ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರು. ಆಗ ಪಿಡಿಓ ಎಂ.ಕೆ. ಪ್ರಕಾಶ್, ನಾನು ಹೊಸದಾಗಿ ಬಂದಿದ್ದೇನೆ. ಚಾರ್ಜ್ ತೆಗೆದುಕೊಂಡು 3 ತಿಂಗಳಾಗಿದೆ ಎಂದಾಗ ಲೋಕಾಯುಕ್ತರು ನಿಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಗ್ರಾ.ಪಂ. ಉತ್ತರದಾಯಿತ್ವ ನಿಮ್ಮ ಮೇಲಿದೆ. ಎಂ.ಬಿ. ಪುಸ್ತಕ ಇಟ್ಟಿಲ್ಲ. ಎಷ್ಟು ಬಿಲ್ ಪಾಸು ಮಾಡಿಕೊಂಡಿದ್ದಾರೆ ಎಂಬುದನ್ನು ಪರಿಶೀಲಿಸಿ, ಆ ಹಣದಲ್ಲಿ ಶಾಲೆಗೆ ಶೌಚಾಲಯ, ಆಟದ ಮೈದಾನ ಸಮತಟ್ಟು ಮಾಡುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಗ್ರಾ.ಪಂ. ಅಧಿಕಾರಿಗೆ ಬುದ್ಧಿ ಹೇಳಿದರು.
ಗ್ರಾ.ಪಂ.ನಿಂದ ಇದುವರೆಗೂ ನಮ್ಮ ಶಾಲೆಗೆ ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಅನೇಕ ಬಾರಿ ಮನವಿ ಮಾಡಿದ್ದೇವೆ, ಏನೂ ಪ್ರಯೋಜನವಾಗಿಲ್ಲ. ನಮ್ಮದು ಅನುದಾನಿತ ಪ್ರೌಢಶಾಲೆ. ಹೀಗಾಗಿ ಯಾವುದೇ ಅನುದಾನ ಬರುವುದಿಲ್ಲ. ಗ್ರಾಮ ಪಂಚಾಯಿತಿಯ ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೆ ನಮ್ಮ ಶಾಲೆಯಿಂದ ಸಹಕಾರ ನೀಡುತ್ತಾ ಬಂದಿದ್ದೇವೆ ಎಂದು ಶಿಕ್ಷಕರು ತಿಳಿಸಿದರು.
ನಮ್ಮ ಶಾಲಾ ಆವರಣದ ಸುತ್ತ ಬಯಲು ಇದ್ದು, ಸುತ್ತಮುತ್ತಲಿನ ಜನತೆ ಬಯಲು ಬಹಿರ್ದೆಸೆಗೆ ಹೋಗುತ್ತಾರೆ. ಎಲ್ಲ ಕಡೆ ಗಲೀಜು ಮಾಡುತ್ತಾರೆ. ಇದರಿಂದ ಮಕ್ಕಳಿಗೆ ತೀವ್ರ ತೊಂದರೆಯಾಗಿದೆ. ರಾತ್ರಿ ಹೊತ್ತು ಕುಡುಕರ ಹಾವಳಿ ಹೆಚ್ಚಾಗಿದೆ. ಎಲ್ಲಿ ಬೇಕೆಂದರಲ್ಲಿ ಕುಡಿದು ಬಾಟಲಿ ಎಸೆಯುತ್ತಾರೆ. ಕುರಿ, ಜಾನುವಾರು ಗಳನ್ನು ಮೇಯಿಸುತ್ತಾರೆ ಎಂದಾಗ, ಗ್ರಾಮೀಣ ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸುತ್ತೇನೆ. ಬೀರೇಶ್ವರ ಶಾಲೆಗೆ ಶೌಚಾಲಯ ವನ್ನು ನಿರ್ಮಿಸಿ ಕೊಡಲು ಜಿಲ್ಲಾ ಪಂಚಾಯ್ತಿ ಸಿಇಓ ಅವರ ಜೊತೆ ಚರ್ಚಿಸುತ್ತೇನೆ ಎಂದರು.
ಗ್ರಾಮ ಪಂಚಾಯಿತಿಯಿಂದ ಕಟ್ಟಿಸಿಕೊಡ ದಿದ್ದರೆ ಇನ್ನೊಂದು ಸಲ ಈ ಶಾಲೆಗೆ ಭೇಟಿ ನೀಡಿ, ನನ್ನ ಸ್ವಂತ ಹಣದಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಡುತ್ತೇನೆ ಎಂದು ಲೋಕಾ ಯುಕ್ತ ಡಿವೈಎಸ್‌ಪಿ ಡಾ. ಚಂದ್ರಶೇಖರ್ ಭರವಸೆ ನೀಡಿದರು. ವಾಗೀಶ್ ಹುಲ್ಲತ್ತಿ, ಸಣ್ಣ ಲಕುಮಪ್ಪ ಕೋರಿ, ಶಾಲಾ ಶಿಕ್ಷಕರು ಹಾಗೂ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.