ದಾವಣಗೆರೆ, ನ.9- ರಾಜ್ಯ ಯುವ ನೀತಿ ಸಮಿತಿಯ ಸದಸ್ಯರ ಆಯ್ಕೆ ರಾಜಕೀಯ ಪ್ರೇರಿತವಾಗಿದ್ದು, ಕೂಡಲೇ ಅದನ್ನು ರದ್ದುಗೊಳಿಸಿ, ಯುವ ಜನರ ಭವಿಷ್ಯದ ದೃಷ್ಟಿಯಿಂದ ಶಿಕ್ಷಣ, ಕ್ರೀಡೆ ಹಾಗೂ ಯುವ ಜನರ ಮೇಲೆ ಪ್ರಭಾವ ಬೀರುವ ಕ್ಷೇತ್ರಗಳಲ್ಲಿನ ತಜ್ಞರ ಸಮಿತಿಯನ್ನು ಆಯ್ಕೆ ಮಾಡುವಂತೆ ಒತ್ತಾಯಿಸಿ, ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಜಿಲ್ಲಾ ಸಮಿತಿಯಿಂದ ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು.
ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಹಾಗೂ ಜಿಲ್ಲಾಧ್ಯಕ್ಷ ಕೆರನಹಳ್ಳಿ ರಾಜು ನೇತೃತ್ವದಲ್ಲಿ ಜಮಾಯಿಸಿದ್ದ ಪದಾಧಿಕಾರಿಗಳು, ಉಪವಿಭಾಗಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ರಾಜ್ಯದಲ್ಲಿ ಯುವ ನೀತಿಯೊಂದನ್ನು ಜಾರಿಗೆ ತರಲು ಇಚ್ಚಿಸಿರುವುದು ಶ್ಲ್ಯಾಘನೀಯ.
ಆದರೆ, ಈ ನೀತಿಯ ರೂಪು-ರೇಷೆ ರಚಿಸಲು ಆಯ್ಕೆ ಮಾಡಿರುವ 13 ಜನ ಸಮಿತಿಯ ಸದಸ್ಯರಲ್ಲಿ ಸರ್ಕಾರಿ
ವಲಯದ ಅಧಿಕಾರಿಗಳನ್ನು ಬಿಟ್ಟು, ಉಳಿದವರ ಆಯ್ಕೆ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಯುವ ನೀತಿ ಸಮಿತಿಯು ಶಿಕ್ಷಣ, ಉದ್ಯೋಗ, ಕ್ರೀಡೆ ಹಾಗೂ ಮುಂತಾದ ಯುವಜನರ ಮೇಲೆ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ವಿಶೇಷ ಅನುಭವವುಳ್ಳ ತಜ್ಞರನ್ನು ಆಯ್ಕೆ ಮಾಡಬೇಕೇ ವಿನಃ ರಾಜ್ಯ ಸರ್ಕಾರ ತನ್ನ ಪಕ್ಷವನ್ನು ಮೆಚ್ಚಿಸಲು ಯಾವ ಅನುಭವವೂ ಇಲ್ಲದ ಹಾಗೂ ರಾಜ್ಯದ ಯುವಜನರಲ್ಲಿ ಕೋಮುವಾದದ ಮನೋಭಾವ ಬಿತ್ತಿ ರಾಜ್ಯದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗು ವಂತಹ ವ್ಯಕ್ತಿಗಳನ್ನು ಆಯ್ಕೆ ಮಾಡಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.
ಪ್ರತಿಭಟನೆಯಲ್ಲಿ ಎ. ತಿಪ್ಪೇಶಿ, ಜೀವನ್ ನಿಟುವಳ್ಳಿ, ದಾದಾಪೀರ್, ಇರ್ಫಾನ್, ಇಬ್ರಾಹಿಂ, ಹನುಮಂತಪ್ಪ, ಮಂಜುನಾಥ ಹರಳಯ್ಯ, ಸುದೇಶ್ ಮಳ ಲಕೆರೆ, ಅಂಜಿನಪ್ಪ ಮಳಲಕೆರೆ, ಮಂಜು ನಾಥ ಮಳಲಕೆರೆ, ಇರ್ಫಾನ್ ಅಹ್ಮದ್ ಸೇರಿದಂತೆ ಇತರರು ಭಾಗವಹಿಸಿದ್ದರು.