ದಾವಣಗೆರೆ, ಸೆ. 8- ಹೋರಾಟ, ಚಳವಳಿಗಳ ಶಕ್ತಿ ಕುಂದಿದೆಯೇ, ಹೋರಾಟ ಗಳಿಗೆ ಸರ್ಕಾರಗಳು ಏಕೆ ಮಣಿಯುತ್ತಿಲ್ಲ? ಸಂಘಟನೆಗಳಲ್ಲಿ ಇಚ್ಛಾಶಕ್ತಿ ಕೊರತೆಯೇ? ಹೋರಾಟಗಳು ಹೇಗಿರಬೇಕು? ಕೋಮುವಾದಿ, ಭ್ರಷ್ಟ ರಾಜಕಾರಣಿಗಳಿಗೆ ಚುನಾವಣೆಗಳಲ್ಲಿ ಪಾಠ ಕಲಿಸುವ ಬಗೆ ಹೇಗೆ? ಎಂಬಿತ್ಯಾದಿ ಅರ್ಥಪೂರ್ಣ ಚರ್ಚೆಗಳು ನಗರದಲ್ಲಿಂದು ನಡೆದ ಚಿಂತನ-ಮಂಥನ ಘೋಷ್ಠಿಯಲ್ಲಿ ನಡೆದವು.
ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರ, ಅಪ್ನ ಭಾರತ್ ಮೋರ್ಚಾ ಮತ್ತು ಪ್ರಗತಿ ಪರ ಒಕ್ಕೂಟ ಜಂಟಿಯಾಗಿ ಆಯೋಜಿಸಿದ್ದ `ಜನಪರ ಹೋರಾಟ, ಚಳವಳಿಗಳು ಮತ್ತು ಚುನಾ ವಣಾ ರಾಜಕಾರಣ’ ವಿಷಯ ಕುರಿತು ಚಿಂತನ ಮಂಥನ ಗೋಷ್ಠಿಯು ಸೋಮವಾರ ನಗರದ ರೋಟರಿ ಬಾಲಭವನದಲ್ಲಿ ನಡೆಯಿತು.
ರೈತ ಮುಖಂಡರು, ಕಾರ್ಮಿಕ ಮುಖಂಡರು, ಪ್ರಗತಿ ಪರ ಚಿಂತಕರು, ಲೇಖಕರು, ಕೃಷಿ ಆರ್ಥಿಕ ತಜ್ಞರು, ಸಾಮಾ ಜಿಕ ಹೋರಾಟಗಾರರು, ಪ್ರಾಧ್ಯಾಪಕರು ಇಂತಹದ್ದೊಂದು ಮಹತ್ವದ ಗೋಷ್ಠಿಯಲ್ಲಿ ಪಾಲ್ಗೊಂಡು ಭವಿಷ್ಯದಲ್ಲಿ ಬೆಳಕು ಕಾಣುವ ಪ್ರಯತ್ನಕ್ಕೆ ನಾಂದಿ ಹಾಡಿದರು.
ತುರ್ತು ಪರಿಸ್ಥಿತಿ ನಂತರ ನಡೆದ ಹೋರಾಟಗಳ ಫಲವಾಗಿ ಸರ್ಕಾರ ಬದಲಾಗಿತ್ತು. ಅಂತಹ ಪರಿಸ್ಥಿತಿ ಪ್ರಸ್ತುತ ದಿನಗಳಲ್ಲಿ ಇದೆಯೇ? ಚಳವಳಿಗಳು, ಹೋರಾಟಗಳು ಏಕೆ ಪರಿಣಾಮ ಬೀರು ತ್ತಿಲ್ಲ? ಇವು ಸಂಘಟನೆಯ ವೈಫಲ್ಯವೇ? ಪ್ರಸ್ತುತ ಮೋದಿ ಸರ್ಕಾರದ ವಿರುದ್ಧ ಜನಾಭಿಪ್ರಾಯವಿದ್ದರೂ ಅದೇ ಸರ್ಕಾರ ಮುಂದುವರೆಯುತ್ತಿರುವುದೇಕೆ? ಎಂಬಿತ್ಯಾದಿ ಪ್ರಶ್ನೆಗಳ ಮೂಲಕ ರೈತ ಮುಖಂಡರೂ, ಚಿಂತನಾಗೋಷ್ಠಿಯ ರೂವಾರಿಗಳೂ ಆದ ತೇಜಸ್ವಿ ಪಟೇಲ್, ಅತಿಥಿಗಳನ್ನು ಸ್ವಾಗತಿಸುತ್ತಲೇ ಚರ್ಚೆಗೆ ಮುನ್ನುಡಿ ಬರೆದರು.
ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹೋರಾಟಗಾರರು ತಮ್ಮ ವೈಯಕ್ತಿಕ ವಿಚಾರಗಳನ್ನು ಬದಿಗಿಟ್ಟು ದೇಶಕ್ಕೆ, ದೇಶದ ಜನತೆಗೆ ತೊಂದರೆ ಆಗಿದೆ ಎಂದು ತಿಳಿದು ಹೋರಾಟ ನಡೆಸಬೇಕು. ಆದರೆ ಈಗ ಹೋರಾಟಗಳ ದಿಕ್ಕು ತಪ್ಪುತ್ತಿವೆ. ಹೋರಾಟ ಗಳನ್ನು ಬದಿಗೊತ್ತುವ ಎಲ್ಲಾ ತಂತ್ರಗಾರಿಕೆ ಗಳನ್ನೂ ಆಳುವ ಪಕ್ಷಗಳು ಮಾಡುತ್ತಿವೆ ಎಂದು ಹೇಳಿದರು.
ರಾಜಕೀಯದ ಮಾಗಿ ಉಳುಮೆ ಆಗಬೇಕಿದೆ
ಮುಂದಿನ ಮಳೆ, ಬೆಳೆ ಉತ್ತಮವಾಗುತ್ತದೆಂಬ ಆಶಾಭಾವನೆಯಿಂದ ರೈತರು ಮಾಗಿ ಉಳುಮೆ ಮಾಡಿ ಭೂಮಿಯನ್ನು ಹದ ಮಾಡಿಕೊಂಡು ಸಿದ್ಧರಾಗುತ್ತಾರೆ. ಅಂತೆಯೇ ನಾವು ರಾಜಕೀಯ ಮಾಗಿ ಉಳುಮೆ ಮಾಡಿಕೊಳ್ಳಬೇಕಿದೆ ಎಂದು ಕೃಷಿ ಆರ್ಥಿಕ ತಜ್ಞ ಪ್ರಕಾಶ್ ಕಮ್ಮರಡಿ ಹೇಳಿದರು. ಹೊಸ ರಾಜಕೀಯ ಚಿಂತನೆ, ಪ್ರಕ್ರಿಯೆಗಳು ಆರಂಭವಾಗಬೇಕು. ಭರವಸೆಯೊಂದಿಗೆ ರಾಜಕೀಯ ಮಾಗಿ ಉಳುಮೆ ದಾವಣಗೆರೆ ಜಿಲ್ಲೆಯಿಂದಲೇ ಆರಂಭವಾಗಬೇಕಿದೆ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಸತ್ಯವನ್ನೇ ಸತ್ಯವೆಂದು ನಂಬಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. ಮಹಾತ್ಮ ಗಾಂಧೀಜಿ ಯವರು ಹೇಳಿದಂತೆ ಪರಿವರ್ತನೆ ನಮ್ಮಿಂದಲೇ ಆರಂಭವಾಗ ಬೇಕಿದೆ ಎಂದರು.
ರೈತರು, ಕಾರ್ಮಿಕರು, ಮಹಿಳೆಯರ ಮೇಲೆ ಅನ್ಯಾಯ ನಡೆಯುತ್ತಿದೆ. ಜಾತಿ-ಧರ್ಮದ ವಿಷ ಬೀಜ ಬಿತ್ತುತ್ತಿರುವ ಕರ್ನಾಟಕ ಸರ್ಕಾರದ ಮೇಲೆ ಮೇಲೆ ಯುದ್ಧ ಸಾರುವ ಮೂಲಕ ಸಮಗ್ರ ಶಕ್ತಿಯನ್ನು ತೋರಿಸಿ ಹೋರಾಟ ನಡೆಸಬೇಕಿದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಎ.ಬಿ. ರಾಮಚಂದ್ರಪ್ಪ ಮಾತನಾಡುತ್ತಾ, ಸರ್ಕಾರ ನಿಯಂತ್ರಿಸುವ ಶಕ್ತಿ ಚಳವಳಿಗಳಿಗಿತ್ತು. ಆದರೆ ಈಗ ಅಂತಹ ಶಕ್ತಿಗಳಿಂದ ಚಳವಳಿ ದೂರ ಉಳಿದಿರುವುದು ಆತಂಕದ ವಿಷಯ ಎಂದರು.
ಬಹುತ್ವದ ಹೋರಾಟ ನದಿಯಾಗಿ ಮುನ್ನಡೆಯಬೇಕು. ನಾವೇ ಒಂದು ನಿರ್ಣಾ ಯಕ ಶಕ್ತಿಯಾದಾಗ ಜಾತ್ಯತೀತ ಭಾರತ ಕಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಪ್ರಗತಿ ಪರ ಲೇಖಕಿ ಬಿ.ಟಿ. ಲಲಿತಾ ನಾಯ್ಕ ಮಾತನಾಡುತ್ತಾ, ಇಂದು ಬೂಟಾಟಿಕೆ ಮುಖವಾಡಗಳು ಹೆಚ್ಚುತ್ತಿವೆ. ಸಂವಿಧಾನದ ಪರ ಗೌರವ ಇಟ್ಟಕೊಂಡವರೇ ಇಂದು ಕೋಮುವಾದಿ ಪಕ್ಷದ ಪರವಾಗಿ ಅವರಂತೆಯೇ ಮಾತನಾಡುತ್ತಿದ್ದಾರೆ. ಮಠ-ಮಂದಿರಗಳು ವ್ಯಾಪಾರಿ ಕೇಂದ್ರಗಳಾಗಿದ್ದು, ಮಧ್ಯಮ ವರ್ಗದ ಜನರು ಅಂತಹ ಮಠಗಳನ್ನು ಬೆಳೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜನವಿರೋಧಿ ಅಲೆಗಳ ನಡುವೆಯೂ ಪಕ್ಷಗಳು ಆಡಳಿತಕ್ಕೆ ಬರುವುದರ ಹಿಂದೆ ತಾಂತ್ರಿಕವಾಗಿ ಮೋಸ ನಡೆಯುತ್ತಿದೆಯೇ? ಎಂಬ ಬಗ್ಗೆಯೂ ಚಿಂತಿಸಬೇಕು. ಹೆಣ್ಣು ಮಕ್ಕಳೂ ಸಹ ಕೇವಲ ಸೀರೆ, ಆಭರಣಗಳ ಬಗ್ಗೆ ಚಿಂತಿಸದೇ ದೇಶದ ಬಗ್ಗೆಯೂ ಚಿಂತಿಸಲು ಮುಂದಾಗಬೇಕು ಎಂದರು.
ಸಮಾಜ ಪರಿವರ್ತನೆ ವೇದಿಕೆಯ ಗೋಪಾಲ್ ಬಿ. ಮಾತನಾಡುತ್ತಾ, ಗುರಿ ಇಲ್ಲದ ಸಂಘಟನೆಗಳು ಅಜೆಂಡಾ ಇಲ್ಲದ ಹೋರಾಟಗಳು ವಿಫಲವಾಗುತ್ತಿವೆ ಎಂದರು.
ಡಾ.ಬಿ. ಆರ್. ಅಂಬೇಡ್ಕರ್ ಅವರು ಮತದಾನದ ಹಕ್ಕು ಕೊಡಿಸುವಲ್ಲಿ ಶ್ರಮಿಸಿದರು. ಮತ ತಾಯಿಯಂತೆ ಎಂದರು. ಆದರೆ ಆರಂಭದಲ್ಲಿ ಒಂದು ಪ್ಲೇಟ್ ಚಿತ್ರಾನ್ನಕ್ಕೆ ಮಾರಾಟವಾಗುತ್ತಿದ್ದ ಮತಗಳು ನಂತರ ಸಾರಾಯಿಗೆ ಮಾರಾಟವಾಗ ತೊಡಗಿದವು. ಈಗ 1-2 ಸಾವಿರ ರೂ.ಗಳಿಗೆ ಮಾರಾಟ ನಡೆಯುತ್ತಿದೆ. ಇದರಿಂದಾಗಿಯೇ ಪ್ರಾಮಾಣಿಕರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಸಂಘಟನೆಗಳು ತಮ್ಮ ಸ್ವಾಭಿಮಾನ, ಜಾತಿವಾದ ಕೈ ಬಿಟ್ಟಾಗ ದೇಶದಲ್ಲಿ ಕೋಮು ರಾಜಕೀಯ ತಡೆಯಬಹುದು. ಮತಗಳು ತಾಯಿಗೆ ಸಮಾನ. ಪ್ರಾಮಾಣಿಕರಿಗೆ ಮಾತ್ರ ಮತದಾನ ಮಾಡಿ ಎಂಬ ಅರಿವನ್ನು ಹಳ್ಳಿ ಹಳ್ಳಿಗಳಲ್ಲೂ ಮೂಡಿಸಬೇಕು. ಆಗ ಭ್ರಷ್ಟ ರಾಜಕಾರಣಿಗಳು ನೀರಲ್ಲಿ ಕೊಚ್ಚಿ ಹೋಗುತ್ತಾರೆ. ಆದರೆ ಇದು ಶೀಘ್ರ ಫಲ ನೀಡದ ಸುದೀರ್ಘ ಪ್ರಕ್ರಿಯೆಯಾಗಿದ್ದು, ನಮ್ಮ ಮುಂದಿನ ಜನಾಂಗಕ್ಕಾದರೂ ಇದರ ಫಲ ಸಿಗಲಿದೆ ಎಂದು ಹೇಳಿದರು.
ಹರಿಯಾಣದ ಅಪ್ನ ಭಾರತ ಮೋರ್ಚಾದ ರಾಷ್ಟ್ರೀಯ ಸಂಚಾಲಕ ಅಶೋಕ್ ತನ್ವಿರ್ ಕಾರ್ಯಕ್ರಮ ಉದ್ಘಾಟಿಸಿದರು. ನವದೆಹಲಿ ಜಾಮಿಯಾ ಮಿಲಿಯಾ ವಿವಿಯ ಪ್ರಾಧ್ಯಾಪಕ ಗಿರಿ ಡಿ.ಕೆ., ದಾದಾಪೀರ್ ನವಿಲೇಹಾಳ್, ಹುಚ್ಚವ್ವನಹಳ್ಳಿ ಮಂಜುನಾಥ್, ಬಲ್ಲೂರು ರವಿಕುಮಾರ್, ನುಲೇನೂರು ಎಂ.ಶಂಕ್ರಪ್ಪ, ಬಿ.ಕೊಟ್ರಪ್ಪ ಮುಗುದಮ್, ಈಚಘಟ್ಟದ ಸಿದ್ಧವೀರಪ್ಪ, ನರಸಿಂಹಮೂರ್ತಿ, ಪೂಜಾರ್ ಅಂಜಿನಪ್ಪ, ಅನಿಸ್ ಪಾಷಾ, ನಂದಿತಾವರೆ ಮುರುಗಯ್ಯ, ಮುಂತಾದವರು ಭಾಗವಹಿಸಿದ್ದರು. ರಘು ದೊಡ್ಡಮನಿ ಕಾರ್ಯಕ್ರಮ ನಿರ್ವಹಿಸಿದರು. ಇ. ಶ್ರೀನಿವಾಸ್ ವಂದಿಸಿದರು.