ಶಿಕ್ಷಣಕ್ಕೆ ಹಿಡಿದ ಕೊರೊನಾ ಗ್ರಹಣ ಮುಕ್ತಿ

ದಾವಣಗೆರೆ, ಅ. 8 – ಎಲ್‌ಕೆಜಿ, ಯುಕೆಜಿ ಹಾಗೂ ಅಂಗನವಾಡಿಗಳು ಸೋಮವಾರದಿಂದ ಆರಂಭವಾಗಿವೆ. ಇದರೊಂದಿಗೆ ಕೊರೊನಾ ಕಾರಣದಿಂದ ಶಾಲಾ – ಕಾಲೇಜುಗಳಿಗೆ ಹಿಡಿದಿದ್ದ ಗ್ರಹಣ ಸಂಪೂರ್ಣ ನಿವಾರಣೆಯಾದಂತಾಗಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಕೊರೊನಾ ಕಾರಣದಿಂದ ಬಂದ್ ಆದ ಪೂರ್ವ ಪ್ರಾಥಮಿಕ ಹಾಗೂ ಅಂಗನವಾಡಿಗಳು ನಂತರ ತೆರೆದೇ ಇರಲಿಲ್ಲ. ಅಂಗನವಾಡಿಗಳಲ್ಲಿ ಮಾತ್ರ ಮಕ್ಕಳ ಆಹಾರವನ್ನು ಮನೆಗಳಿಗೇ ತಲುಪಿಸಲಾಗುತ್ತಿತ್ತು.

ಒಂದೂವರೆ ವರ್ಷಗಳ ನಂತರ ಅಂಗನವಾಡಿ ಹಾಗೂ ಎಲ್‌ಕೆಜಿ – ಯುಕೆಜಿಗಳತ್ತ ಚಿಣ್ಣರನ್ನು ಪೋಷಕರು ಉತ್ಸಾಹದಿಂದ ಕರೆ ತಂದಿದ್ದು ಕಂಡು ಬಂತು. ಶಾಲೆಗಳು ಹಾಗೂ ಅಂಗನವಾಡಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ನಗರದಲ್ಲಿ ಹಲವಾರು ಅಂಗನವಾಡಿಗಳಲ್ಲಿ ಚಿಣ್ಣರನ್ನು ಸ್ವಾಗತಿಸಲು ಸರಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರೂ ಉಪಸ್ಥಿತರಿದ್ದರು. ಜಿಲ್ಲೆಯಲ್ಲಿ 1,730 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ 80 ಸಾವಿರದಷ್ಟು ಮಕ್ಕಳಿದ್ದಾರೆ.

ವಿನೋಬನಗರದ ಮೂರನೇ ಮುಖ್ಯ ರಸ್ತೆಯಲ್ಲಿರುವ ಅಂಗನವಾಡಿ – ಎ ಕೇಂದ್ರದಲ್ಲಿ ಚಿಣ್ಣರನ್ನು ಸ್ವಾಗತಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 

ಪಾಲಿಕೆ ಪ್ರತಿಪಕ್ಷದ ನಾಯಕ ಎ.ನಾಗರಾಜ್ ಪಾಲ್ಗೊಂಡಿದ್ದರು. ಅಂಗನವಾಡಿಗಳು ಕೊರೊನಾ ಹಾಗೂ ಡೆಂಗ್ಯೂ ಸಂದರ್ಭದಲ್ಲಿ ವಹಿಸಬೇಕಾದ ಎಚ್ಚರಿಕೆಯ ಬಗ್ಗೆ ಅವರು ಕಾರ್ಯಕರ್ತೆಯರಿಗೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಜಿ. ರೇಣುಕಮ್ಮ, ಸದ್ಯಕ್ಕೆ ಮಕ್ಕಳಿಗೆ ಉಪಹಾರ ನೀಡುತ್ತಿಲ್ಲ. ಮೊದಲ ದಿನದ ಕಾರಣದಿಂದ ಮಕ್ಕಳಿಗಾಗಿ ನಾವೇ ಮನೆಯಿಂದ ಸಿಹಿ ಮಾಡಿಕೊಂಡು ತಂದಿದ್ದೇವೆ ಎಂದರು. ವಿನೋಬನಗರದ ಇತರೆ ಎರಡು ಅಂಗನವಾಡಿಗಳ ಕಾರ್ಯಕರ್ತೆಯರಾದ ಜಲಜಾಕ್ಷಿ, ಕೆ. ಲತಾ, ಸ್ಥಳೀಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್. ಶೋಭ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಾಖಲಾತಿ ಏರಿಳಿತ : ಕೊರೊನಾ ಸಂದರ್ಭದಲ್ಲಿ ಅಂಗನವಾಡಿಗಳಿಗೆ ದಾಖಲಾಗುವ ಮಕ್ಕಳಲ್ಲಿ ಏರಿಳಿತ ಕಂಡು ಬಂದಿದೆ. ಖಾಸಗಿ ಎಲ್‌.ಕೆ.ಜಿ. ತರಗತಿಗಳು ನಿಂತಿದ್ದರಿಂದ ಹಲವಾರು ಮಕ್ಕಳನ್ನು ಅಂಗನವಾಡಿಗಳಿಗೆ ದಾಖಲಿಸಲಾಗಿದೆ. ಇವರ ಮನೆಗಳಿಗೇ ಆಹಾರ ತಲುಪಿಸಲಾಗುತ್ತಿತ್ತು. ಈಗ ಮತ್ತೆ ಖಾಸಗಿ ಶಾಲೆಗಳು ಆರಂಭವಾಗಿವೆ. ಅಂಗನವಾಡಿಗಳ ಮಕ್ಕಳ ಸಂಖ್ಯೆ ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ ಎಂದು ಕಾರ್ಯಕರ್ತೆಯರು ಹೇಳಿದ್ದಾರೆ.

ಪೂರ್ವ ಪ್ರಾಥಮಿಕ ದಾಖಲಾತಿ : ಎಲ್‌ಕೆಜಿ – ಯುಕೆಜಿ ತರಗತಿಗಳು ಆರಂಭವಾದ ಮೊದಲ ದಿನವೇ ಹಲವಾರು ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಲು ಬಂದಿದ್ದಾರೆ.

ನಗರದ ವೀರಭದ್ರಪ್ಪ ಎಂ. ಚಿಗಟೇರಿ ನರ್ಸರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ಎಂ. ಶೈಲಜಾ ಮಾತನಾಡಿದ್ದು, ಕೊರೊನಾಗೆ ಮುಂಚೆ 60 ಮಕ್ಕಳು ದಾಖಲಾಗಿದ್ದರು. ಇದುವರೆಗೂ 30 ಮಕ್ಕಳು ದಾಖಲಾಗಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಚಿಣ್ಣರನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಮುಂಬರುವ ಮಕ್ಕಳ ದಿನಾಚರಣೆಗೆ ಮಕ್ಕಳಿಂದ ಹಲವಾರು ಕಾರ್ಯಕ್ರಮಗಳನ್ನು ಮಾಡಿಸಲಾಗುವುದು ಎಂದರು.

ಪೋಷಕರಲ್ಲಿ ಗೊಂದಲ : ಈಗಾಗಲೇ ಅರ್ಧ ವರ್ಷ ಮುಗಿದಿರುವುದರಿಂದ ಎಲ್‌ಕೆಜಿ – ಯುಕೆಜಿ ಸೇರಿಸುವ ಬಗ್ಗೆ ಕೆಲ ಪೋಷಕರಲ್ಲಿ ಗೊಂದಲವೂ ಇದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ವರ್ಷ ಸೇರಿಸಿದರಾಯಿತು ಎಂಬ ಭಾವನೆಯೂ ಇದೆ.

ಆದರೆ, ಸಾಕಷ್ಟು ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿದರೆ ಸಾಕು ಎಂಬ ಮನೋಭಾವವನ್ನೂ ಹೊಂದಿದ್ದಾರೆ. ಅರ್ಧ ವರ್ಷ ಕಳೆದರೂ ಉತ್ಸಾಹದಿಂದ ಮಕ್ಕಳನ್ನು ಶಾಲೆಗೆ ಸೇರಿಸಲು ಬರುತ್ತಿರುವ ದೃಶ್ಯ ಶಾಲೆಗಳಲ್ಲಿ ಕಂಡು ಬಂತು.

error: Content is protected !!