ದಾವಣಗೆರೆ, ಜ.27- ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಹಮ್ಮಿಕೊಂಡಿರುವ ಕನ್ನಡ ಕಾಯಕ ವರ್ಷ ಕಾರ್ಯಕ್ರಮದಡಿ ಶುದ್ಧ ಕನ್ನಡ ನಾಮಫಲಕ ಅಭಿಯಾನವನ್ನು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಹಾಗೂ ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಜಂಟಿ ಆಶ್ರಯದಲ್ಲಿ ಇಂದು ನಗರದಲ್ಲಿ ನಡೆಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿ/ಸಂಸ್ಥೆಗಳು, ಅಂಗಡಿ, ವಾಣಿಜ್ಯ ಸಂಸ್ಥೆಗಳು ಹಾಗೂ ಮಾಲ್ಗಳಿಗೆ ತೆರಳಿ ಸ್ಥಳೀಯ ಭಾಷೆಯಾದ ಕನ್ನಡವನ್ನು ನಾಮಫಲಕ ಹಾಗೂ ಆಡಳಿತದಲ್ಲಿ ಪ್ರಧಾನವಾಗಿ ಬಳಸುವಂತೆ ಸಮಿತಿಯವರು ಹಕ್ಕೊತ್ತಾಯ ಸಲ್ಲಿಸಿದರಲ್ಲದೆ, ಘೋಷವಾಕ್ಯದ ಫಲಕಗಳನ್ನು ಪ್ರದರ್ಶಿಸಿದರು.
ಪ್ರಧಾನ ಅಂಚೆ ಕಚೇರಿಗೆ ತೆರಳಿ ಅಲ್ಲಿನ ಪ್ರಭಾರ ಮುಖ್ಯ ಅಂಚೆ ಅಧೀಕ್ಷಕರಾದ ನಂದಾ ಮತ್ತು ತಹಶೀಲ್ದಾರ್ ಕೇಶವ್ ಅವರುಗಳಿಗೆ ಹಕ್ಕೊತ್ತಾಯ ಸಲ್ಲಿಸಲಾಯಿತು. ರೈಲ್ವೇ ನಿಲ್ದಾಣದ ನಿಲ್ದಾಣ ಅಧೀಕ್ಷಕ ಶ್ರೀಧರ್ ಅವರಿಗೆ ಹಕ್ಕೊತ್ತಾಯವನ್ನು ನೀಡಿ ರೈಲ್ವೇ ಟಿಕೇಟ್, ಅರ್ಜಿ ಹಾಗೂ ಆಡಳಿತದಲ್ಲಿ ಕನ್ನಡ ಭಾಷಾ ಬಳಕೆಗೆ ಮನವಿ ಮಾಡಲಾಯಿತು.
ಇಬ್ಬರು ಮಾತ್ರ ಕನ್ನಡಿಗರು : ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿರುವ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದಲ್ಲಿ ಕೇವಲ ಇಬ್ಬರು ಅಧಿಕಾರಿಗಳು ಹಾಗೂ ಇಬ್ಬರು §ಡಿ¬ ದರ್ಜೆ ನೌಕರರು ಕನ್ನಡಿಗರಿದ್ದಾರೆ. ಉಳಿದವರೆಲ್ಲರೂ ಅನ್ಯ ಭಾಷಿಕರು ಎಂಬುದು ಕನ್ನಡಿಗರ ಪ್ರಸ್ತುತ ಪಾಡಿಗೆ ಸಾಕ್ಷಿಯಾಗಿದೆ. ಈ ಹಿಂದೆ ರೈಲ್ವೇ ಟಿಕೇಟ್ನಲ್ಲಿ ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಯನ್ನು ಸಹ ಬಳಸಲಾಗುತ್ತಿತ್ತು. ಆದರೆ ಲಾಲೂ ಪ್ರಸಾದ್ ಯಾದವ್ ರೈಲ್ವೇ ಮಂತ್ರಿಯಾಗಿದ್ದ ಅವಧಿಯಲ್ಲಿ ಕನ್ನಡ ಭಾಷೆಗೆ ಗೇಟ್ಪಾಸ್ ನೀಡಿದ್ದು, ಇದುವರೆವಿಗೂ ಸೇರ್ಪಡೆಯಾಗದಿರುವ ಬಗ್ಗೆ ಜಾಗೃತಿ ಸಮಿತಿ ಸದಸ್ಯರು ಕಿಡಿ ಕಾರಿದ್ದಾರೆ.
ಜಾಗೃತಿ ಸಮಿತಿ ಸದಸ್ಯರಾದ ಬಂಕಾಪುರದ ಚನ್ನಬಸಪ್ಪ, ಎನ್.ಟಿ. ಯರ್ರಿಸ್ವಾಮಿ, ಪ್ರೊ. ಹೆಚ್.ಎ. ಭಿಕ್ಷಾವರ್ತಿ ಮಠ, ಬಾ.ಮ. ಬಸವರಾಜಯ್ಯ, ಎ. ಮಹಲಿಂಗಪ್ಪ, ಬಿ. ದಿಳ್ಳೆಪ್ಪ, ಎಸ್.ಎಸ್. ಸಿದ್ಧರಾಜು, ದೇವಿಕ ಸುನೀಲ್, ಹೆಚ್.ಕೆ. ಸತ್ಯಭಾಮ ಅವರುಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.