ದಾವಣಗೆರೆ, ಏ.1- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಎರಡನೇ ಬಾರಿಗೆ ಆಯ್ಕೆ ಬಯಸಿ, ಪರಿಷತ್ತಿನ ಹಾಲಿ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಅವರು ಇಂದು ನಾಮಪತ್ರ ಸಲ್ಲಿಸಿದರು.
ನಗರದ ತಾಲ್ಲೂಕು ಕಚೇರಿಗೆ ತೆರಳಿದ ಅವರು, ಚುನಾವಣಾಧಿಕಾರಿಗಳೂ ಆದ ತಹಸೀಲ್ದಾರ್ ಗಿರೀಶ್ ಅವರಿಗೆ ತಮ್ಮ ಉಮೇದುವಾರಿಕೆ ಅರ್ಜಿಯನ್ನು ನೀಡಿದರು.
ಅಪೂರ್ವ ಹೋಟೆಲ್ ನಲ್ಲಿ ಅಭಿಮಾನಿ ಗಳಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಂಜುನಾಥ್ ಕುರ್ಕಿ ಅವರಿಗೆ ಕಸಾಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪುನಃ ಅಧ್ಯಕ್ಷರಾಗಿ ಆಯ್ಕೆ ಯಾಗಬೇಕೆಂಬ ಸದಾಶಯ ವ್ಯಕ್ತವಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಎನ್. ಟಿ ಎರ್ರಿಸ್ವಾಮಿ, ಕ್ರಿಯಾಶೀಲ ವ್ಯಕ್ತಿತ್ವದ ಮಂಜುನಾಥ್ ಕುರ್ಕಿ ಅವರಿಗೆ ಮತ್ತೊ ಮ್ಮೆ ಗೆಲುವಾಗಲಿ. ಅವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವುದು ಕೆಲವರಲ್ಲಿ ಅಸಮಾಧಾನ ಇರಬಹುದು. ಆದರೆ ಅವರನ್ನೇ ನಾವು ಮತ್ತೊಮ್ಮೆ ಏಕೆ ಆಯ್ಕೆ ಮಾಡಬೇಕಿದೆ ಎಂಬುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆ ಯಲ್ಲೇ ಆಯೋಜಿಸುವ ಕನಸು ಕಂಡಿರುವ ಕುರ್ಕಿ ಅವರು ಅದಕ್ಕಾಗಿ ಕಳಕಳಿಯಿಂದ ಶ್ರಮಿಸಿದ್ದಾರೆ. ಮತ್ತೆ ಕಲ್ಯಾಣವೆಂಬ ಅದ್ಭುತ ಪರಿಕಲ್ಪನೆಯ ಮೂಲಕ ಸರ್ವ ಜನಾಂಗದ ಶಾಂತಿಯ ತೋಟವಾದ ಸಹಮತ ವೇದಿಕೆಯ ಅಸ್ತಿತ್ವಕ್ಕೆ ಕಾರಣರಾಗಿದ್ದಾರೆ ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ದಾವಣಗೆರೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಹಿಂದೆಂದಿಗಿಂತಲೂ ಈಗ ವಿಶೇಷವಾದ ಬೆಳವಣಿಗೆ ಮತ್ತು ಅಭಿವೃದ್ಧಿ ಉಂಟಾಗಿದೆ. ನೈಜ ಮತ್ತು ಎಲೆಮರೆಯ ಕಾಯಿಯಂತಹ ಸಾಧಕರು, ಸಾಹಿತಿಗಳು, ಕನ್ನಡಾಭಿಮಾನಿಗಳು, ಕಲಾವಿದರು ಹಾಗೂ ಪ್ರತಿಭಾವಂತರನ್ನು ಗುರುತಿಸಿ, ಬೆಳಕಿಗೆ ತಂದು ಅವಕಾಶ ಕಲ್ಪಿಸಿದ ಮಂಜುನಾಥ್ ಅವರ ಸೇವೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮುಂದುವರೆಯಲು ಅವರನ್ನು ಗೆಲ್ಲಿಸಬೇಕಿದೆ ಎಂದರು.
ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಮತ್ತು ಸಾರ್ವಜನಿಕರ ಬಳಿಗೆ ಕೊಂಡೊಯ್ದು ಪರಿಚಯಿಸಿದ ಮಂಜುನಾಥ್ ಅವರನ್ನು ಕಸಾಪ ಮತದಾರರು ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಎ.ಆರ್. ಉಜ್ಜನಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಲಕ್ಷ್ಮಣ್, ಮಾಜಿ ಮೇಯರ್ ವಸಂತಕುಮಾರ್, ಪತ್ರಕರ್ತ ಬಿ.ಎನ್. ಮಲ್ಲೇಶ್, ವಿಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಸಾಹಿತಿಗಳಾದ ಪಾಪುಗುರು, ಭಾನುವಳ್ಳಿ ಅಣ್ಣಪ್ಪ, ಕುಂದೂರು ಮಂಜಪ್ಪ, ಓಂಕಾರಯ್ಯ ತವನಿಧಿ, ಕಡದಕಟ್ಟೆ ತಿಮ್ಮಪ್ಪ, ಬಸವರಾಜಪ್ಪ, ಜಿ.ಪಂ. ಮಾಜಿ ಸದಸ್ಯರಾದ ಸಹನಾ ರವಿ, ದಾಗಿನಕಟ್ಟೆ ಪರಮೇಶ್ವರಪ್ಪ, ಗಂಗಾಧರ ಬಿ.ಎಲ್. ನಿಟ್ಟೂರ್, ನ್ಯಾಮತಿ ತಾಲ್ಲೂಕು ಕಸಾಪ ಅಧ್ಯಕ್ಷ ನಿಜಲಿಂಗಪ್ಪ, ಜಗಳೂರು ಕಸಾಪ ಅಧ್ಯಕ್ಷ ಹಜರತ್ ಅಲಿ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಡಿ. ಹಾಲಪ್ಪ, ಮಂಜುನಾಥ್ ರೆಡ್ಡಿ, ರೈತ ಮುಖಂಡ ಶಾಮನೂರು ಲಿಂಗರಾಜ್, ಜಿ.ಆರ್. ಷಣ್ಮುಖಪ್ಪ, ವಿಜಯಲಕ್ಷ್ಮಿ ಅಕ್ಕಿ, ಎ.ಕೆ. ಭೂಮೇಶ್ ಹರಿಹರ, ಬಿ. ದಿಳ್ಳೆಪ್ಪ, ಎನ್.ಎಸ್. ರಾಜು, ಹರಿಹರ ಉಮ್ಮಣ್ಣ, ವಿಜಯ ಮಹಾಂತೇಶ್, ಎಂ. ವಿ. ಹೊರಕೆರೆ, ರಾಮಣ್ಣ ಎಸ್. ನಿಟ್ಟೂರು ಸಿದ್ದಪ್ಪ, ಶಿವಾಜಿ ಪಾಟೀಲ್, ಸಿರಿಗೆರೆ ಸಿದ್ದಣ್ಣ, ಮುಚ್ಚನೂರು ನಂಜಪ್ಪ, ಪರಮೇಶ್ವರಪ್ಪ, ನ್ಯಾಮತಿ ಹಾಲಾರಾಧ್ಯ, ವಿಜಯೇಂದ್ರ ಮಹೇಂದ್ರಕರ್, ಜಿ.ಎಂ. ಬಸವರಾಜಪ್ಪ, ತೀರ್ಥಪ್ಪ ಕುಂಬಾರ್, ಯೂನಸ್ ಬಾಷಾ, ಕೆ. ಬಸವರಾಜಪ್ಪ, ಮಂಜುನಾಥ್, ಕೆ. ಶಿವಶಂಕರ್, ಹೆಚ್.ಎನ್. ಶಿವಕುಮಾರ್, ಎಸ್. ಮಲ್ಲಿಕಾರ್ಜುನ್, ಜಿ.ಹೆಚ್. ಲಿಂಗರಾಜ್, ಕೆ. ಷಣ್ಮುಖ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.