ದಾವಿವಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಪ್ರೊ. ಶೀಲಾ ರಾಯ್ ಅಭಿಮತ
ದಾವಣಗೆರೆ, ಫೆ. 27- ದೇಶಿ ಸಂಸ್ಕೃತಿ, ಸಂಪ್ರದಾಯಗಳನ್ನು ಒಳಗೊಂಡ ಸಂಶೋಧ ನೆಗಳು ಪ್ರಸ್ತುತತೆಯನ್ನು ಪ್ರತಿನಿಧಿಸಿ, ಸಮಾಜದ ಪರಿವ ರ್ತನೆಯ ಮೂಲಕ ದೇಶವನ್ನು ಉನ್ನತಿಗೆ ಒಯ್ಯು ವಂತಾಗಬೇಕು ಎಂದು ನವದೆಹಲಿಯ ರಾಷ್ಟ್ರೀಯ ಸಮಾಜ ವಿಜ್ಞಾನ ಪರಿಷತ್ ಪ್ರಧಾನ ಕಾರ್ಯದರ್ಶಿ ಪ್ರೊ.ಶೀಲಾ ರಾಯ್ ಅಭಿಪ್ರಾಯಪಟ್ಟರು.
ದಾವಣಗೆರೆ ವಿಶ್ವವಿದ್ಯಾನಿಲಯ, ನವದೆಹಲಿಯ ಐಸಿಎಸ್‌ಎಸ್‌ಆರ್, ರಾಷ್ಟ್ರೀಯ ಸಮಾಜ ವಿಜ್ಞಾನ ಪರಿಷತ್ ವತಿಯಿಂದ ಬುಧವಾರ ಆರಂಭವಾದ ಭಾರತದ ಸಮಾಜ ವಿಜ್ಞಾನ ಅಧ್ಯಯನದಲ್ಲಿ ದೇಶೀಯತೆ ಕುರಿತ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಶಿಕ್ಷಣದಲ್ಲಿ ಹಿಂದೆ ಋಷಿ ಸಂಸ್ಕೃತಿ, ಆರಾಧನೆ ಸಂಸ್ಕೃತಿ, ಅನುಭವ ಸಂಸ್ಕೃತಿಗಳು ಇದ್ದವು. ಅವು ವಿದ್ಯಾರ್ಥಿಯ ಆಸಕ್ತಿಯ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದವು. ಜನಾಂಗೀಯ ಭಿನ್ನಾಭಿಪ್ರಾಯ ಗಳಿದ್ದರೂ ಸೌಹಾರ್ದಯುತ ವಾತಾವರಣ ಇತ್ತು. ಆದರೆ ಈಗಿನ ಪಾಶ್ಚಿಮಾತ್ಯ ಸಂಸ್ಕೃತಿಯ ಒತ್ತಾಯದ ಹೇರಿಕೆಯ ಶಿಕ್ಷಣ ವ್ಯವಸ್ಥೆಯನ್ನು ಭಾರತೀಯರಲ್ಲಿ ದೇಶೀಯತೆಯ ಪರಿಕಲ್ಪನೆಯನ್ನೇ ಹಾಳು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಶೋಧನಾರ್ಥಿಗಳು ವಿದೇಶಿ ಪರಿಕಲ್ಪನೆಯ ಸಂಶೋಧನಾ ಕ್ರಮಗಳನ್ನು ಬಿಟ್ಟು ದೇಶೀಯ ಪದ್ಧತಿಯಲ್ಲಿ ದತ್ತಾಂಶ ಸಂಗ್ರಹಿಸಬೇಕು. ಪಾಶ್ಚಿಮಾತ್ಯ ಸಂಶೋಧಕರು, ವಿಜ್ಞಾನಿಗಳಿಂದ ಮಾಹಿತಿ ಪಡೆದರೂ ಅನುಕರಣೆ ಮಾಡದೇ ವಾಸ್ತವ ವಿಚಾರಗಳನ್ನು ಅವಲೋಕಿಸುವ ಸಂಶೋಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರತಿಯೊಂದು ಸಂಶೋಧನೆಯಲ್ಲಿಯೂ ಭಾರತದ ಸುಪ್ರಸಿದ್ಧ ತತ್ವಜ್ಞಾನಿಗಳು, ಆರ್ಥಿಕ ತಜ್ಞರು, ವಿಜ್ಞಾನಿಗಳನ್ನು ವಿದೇಶಿಯರ ಜೊತೆ ಹೋಲಿಕೆ ಮಾಡುವ ಹೊಸ ಸಂಪ್ರದಾಯ ಶುರುವಾಗಿದೆ. ಇದು ಅತ್ಯಂತ ಹೀನಾಯವಾದುದು. ಜಾತ್ಯತೀತತೆಯ ಹೆಸರಿ ನಲ್ಲಿ ಭಾರತೀಯ ಮೂಲ ಪರಂಪರೆ, ಸಂಪ್ರ ದಾಯವನ್ನು ವಿರೋಧಿಸುವುದು, ದ್ವೇಷಿಸು ವುದು ಸರಿಯಲ್ಲ. ಅವುಗಳಲ್ಲಿರುವ ಸಾರ ಸತ್ವ, ಮೌಲ್ಯಗಳಿಗೆ ಗೌರವ ನೀಡಬೇಕು. ಯಾವುದೇ ಜಾತಿ, ಧರ್ಮ, ಸಂಸ್ಕೃತಿ, ಸಮುದಾಯ ಇದ್ದರೂ ಭಾರತೀಯತೆಯ ಭಾವನೆಯನ್ನು ಪ್ರತಿನಿಧಿಸುವಂತಾಗಬೇಕು ಎಂದರು.
ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಮಾತನಾಡಿ, ಶಾಲಾ ಪಠ್ಯಕ್ರಮದಲ್ಲಿಯೇ ದೇಶೀಯತೆಯ ತತ್ವಗಳು, ಸಂಸ್ಕಾರ, ಮೌಲ್ಯಗಳನ್ನು ಅಳವಡಿಸಿ ಮಕ್ಕಳಿಗೆ ಬೋಧನೆ ಮಾಡುವಂತಾಗಬೇಕು. ಸ್ಥಳೀಯ ಸಂಪನ್ಮೂಲ, ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ, ಮನ್ನಣೆ ನೀಡುವ ಸಂಪ್ರದಾಯಕ್ಕೆ ಒತ್ತು ನೀಡಬೇಕು ಎಂದು ತಿಳಿಸಿದರು.
ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ ಅವರು ದೇಶಿಯತೆ, ಸ್ವಾಭಿಮಾನಗಳು ಪ್ರತಿಯೊಬ್ಬರ ಜೀವನ ಕ್ರಮ ಆಗಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ವಿಶಾಲ ದೃಷ್ಟಿಕೋನದಿಂದ ವಿಷಯಗಳನ್ನು ತಿಳಿಯಲು ಮನಸ್ಸು ಮಾಡಿದಾಗ ಅದು ಸಾಧ್ಯವಾಗುತ್ತದೆ ಎಂದರು.
ಕುಲಸಚಿವೆ ಪ್ರೊ.ಗಾಯತ್ರಿ ದೇವರಾಜ್ ಮಾತನಾಡಿದರು. ಕಲಾ ನಿಕಾಯದ ಡೀನ್ ಪ್ರೊ.ಕೆ.ಬಿ.ರಂಗಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ.ಅನಿತಾ ಎಚ್.ಎಸ್., ಹಣಕಾಸು ಅಧಿಕಾರಿ ಡಿ.ಪ್ರಿಯಾಂಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕ ಡಾ. ಹುಚ್ಚೇಗೌಡ ವಂದಿಸಿದರು. ಕೃಪಾ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ವಿಚಾರಗೋಷ್ಠಿಯಲ್ಲಿ ಶಿವಮೊಗ್ಗದ ಪ್ರೊ.ಡಿ.ಎನ್.ಕುಮಾರಸ್ವಾಮಿ ಮಾತನಾಡಿದರು. ಸಂಶೋಧನಾ ಪ್ರಬಂಧ ಮಂಡನೆ ಗೋಷ್ಠಿಯಲ್ಲಿ ಡಾ. ಸೆಲ್ವಿ, ಡಾ. ಷಣ್ಮುಖಪ್ಪ, ಡಾ. ಶಿವಕುಮಾರ ಕಣಸೋಗಿ ಅಧ್ಯಕ್ಷತೆ ವಹಿಸಿದ್ದರು.