ಮಲೇಬೆನ್ನೂರು, ಜ. 12- ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆ.ಜಿ. ತೂಕದ ಫೈ ಬ್ರಾಯ್ಡ್ ಮಾಂಸದ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಮಲೇಬೆನ್ನೂರಿನ ಅಪೂರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಸೀಮಾ ಬಾನು (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಒಂದು ವರ್ಷದ ನಂತರ ಗರ್ಭಧಾರಣೆಯಾಗದಿದ್ದಾಗ ದಾವಣಗೆರೆಯಲ್ಲಿ ವೈದ್ಯರ ಬಳಿ ಚಿಕಿತ್ಸೆ ಕೊಡಿಸಲಾಗಿತ್ತು. ಅದು ಫಲಪ್ರದವಾಗಿಲ್ಲ. ನಂತರ ಮಲೇಬೆನ್ನೂರಿನಲ್ಲಿ ಹೆರಿಗೆ ಮತ್ತು ಸ್ತ್ರೀ ರೋಗ ತಜ್ಞರಾದ ಡಾ. ಅಪೂರ್ವ ಅವರ ಬಳಿ ತಪಾಸಣೆಗೊಳಪಡಿಸಿದಾಗ ಸ್ಕ್ಯಾನಿಂಗ್ನಲ್ಲಿ ಗಡ್ಡೆ ಇರುವುದು ಗೊತ್ತಾಗಿದೆ.
ಈ ಗಡ್ಡೆ ಬೆಳೆಯುತ್ತಿರುವುದರಿಂದ ಮಹಿಳೆಗೆ ಗರ್ಭಧಾರಣೆಗೆ ತೊಂದರೆ ಹಾಗೂ ಮೂತ್ರ ವಿಸರ್ಜನೆ ಹಾಗೂ ಹೊರಗಡೆ ಹೋಗಲೂ (ಬೇಧಿ) ತೊಂದರೆಯಾಗುತ್ತಿತ್ತು.
ಜೊತೆಗೆ ಮಹಿಳೆಯಲ್ಲಿ ರಕ್ತದ ಪ್ರಮಾಣ 5ಕ್ಕೆ ತಲುಪಿತ್ತು. 8 ಬಾಟಲ್ ರಕ್ತವನ್ನು ಮಹಿಳೆಗೆ ಹಾಕಿದ ನಂತರ ಶಸ್ತ್ರ ಚಿಕಿತ್ಸೆ ಮಾಡಿ ಗರ್ಭಕೋಶದ ಗೋಡೆಯಲ್ಲಿ ಬೆಳೆದಿದ್ದ 7 ಕೆ.ಜಿ. ತೂಕದ ಫೈ ಬ್ರಾಯ್ಡ್ ಗಡ್ಡೆಯನ್ನು ಹೊರ ತೆಗೆದಿದ್ದೇವೆ. ಗಡ್ಡೆ ಗರ್ಭಕೋಶದ ಒಳಪದರು ತಲುಪಿದ್ದರಿಂದ ಗರ್ಭಕೋಶವನ್ನು ತೆಗೆಯಬೇಕಾದ ಅನಿವಾರ್ಯತೆ ಇದ್ದುದರಿಂದ ಮಹಿಳೆಯ ಹಿತದೃಷ್ಟಿಯಿಂದ ಇದೇ ವೇಳೆ ಗರ್ಭಕೋಶವನ್ನು ತೆಗೆದಿದ್ದೇವೆ ಎಂದು ಡಾ. ಅಪೂರ್ವ `ಜನತಾವಾಣಿ’ಗೆ ಮಾಹಿತಿ ನೀಡಿದರು.
ಈ ಗಡ್ಡೆ ಕ್ಯಾನ್ಸರ್ ಗಡ್ಡೆಯಾಗಿ ಪರಿವರ್ತನೆ ಆಗುವುದು ಬಹಳ ವಿರಳವಾಗಿದ್ದು, ಇಂತಹ ಸಮಸ್ಯೆಯಿರುವ ಮಹಿಳೆಯರು ಭಯ ಪಡದೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ಡಾ. ಅಪೂರ್ವ ಮನವಿ ಮಾಡಿದ್ದಾರೆ.
ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಪ್ರೀತಿ ಕೆ. ಅಪೂರ್ವ, ಜನರಲ್ ಸರ್ಜನ್ ಡಾ. ವಿಜಿ ಪಾಟೀಲ್, ಅರಿವಳಿಕೆ ತಜ್ಞ ಡಾ. ಅಬ್ದುಲ್, ಸಿಬ್ಬಂದಿಗಳಾದ ಮಂಜುನಾಥ್, ಮಂಜುಳಾ, ಸೀಮಾ ಮತ್ತಿತರರು ಶಸ್ತ್ರ ಚಿಕಿತ್ಸೆಯ ತಂಡದಲ್ಲಿದ್ದರು.
ಜ. 3 ರಂದು ನಡೆದ ಶಸ್ತ್ರ ಚಿಕಿತ್ಸೆ ನಂತರ ಮಹಿಳೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಡಾ. ಅಪೂರ್ವ ಸಂತಸ ವ್ಯಕ್ತಪಡಿಸಿದರು.
ಡಾ. ಅಪೂರ್ವ ಅವರು ಈ ಹಿಂದೆ 2011-12ನೇ ಸಾಲಿನಲ್ಲಿ ಮಲೇಬೆನ್ನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲೂ ಇಬ್ಬರ ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 5 ಕೆ.ಜಿ. 300 ಗ್ರಾಂ ಮತ್ತು 4 ಕೆ.ಜಿ. 400 ಗ್ರಾಂ ತೂಕದ ಗಡ್ಡೆಗಳನ್ನು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದರು.
ನಂತರ ಅಪೂರ್ವ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳ ಹೆರಿಗೆಯನ್ನು ಸಹಜವಾಗಿ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಡಾ. ಅಪೂರ್ವ ಅವರು ಹಿರಿಯ ವೈದ್ಯ ಡಾ. ಟಿ. ಬಸವರಾಜ್ ಮತ್ತು ಜಿ.ಪಂ. ಮಾಜಿ ಸದಸ್ಯೆ ಚಿದಾನಂದಮ್ಮ ದಂಪತಿ ಪುತ್ರ.