ಸಾಲ, ಆತ್ಮಹತ್ಯೆ : ರೈತನ ಶವವಿಟ್ಟು ಪ್ರತಿಭಟನೆ

ರಾಣೇಬೆನ್ನೂರು, ಜ.12- ತಾಲೂಕಿನ ಚಿಕ್ಕಕುರವತ್ತಿ ಗ್ರಾಮದ ರೈತ ಪರಮೇಶಪ್ಪ ಶೇಖರಪ್ಪ ಹಲಗೇರಿ, ಸಾಲ ತೀರಿಸಲಾಗದೆ ಮರ್ಯಾದೆಗೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು,  ಇಡೀ ರೈತ ಕುಲ ಆತಂಕದಲ್ಲಿ ಸಿಲುಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ ದೂರಿದ್ದಾರೆ.

ಮೃತ ಪರಮೇಶಪ್ಪನ ಶವವನ್ನು ನಗರದ ಬಸ್‍ಸ್ಟ್ಯಾಂಡ್ ಹತ್ತಿರ ಪಿ.ಬಿ. ರಸ್ತೆಯಲ್ಲಿ ಇಟ್ಟುಕೊಂಡು ಪ್ರತಿಭಟಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮೃತನ  ಕುಟುಂಬಕ್ಕೆ ಸರ್ಕಾರ ಕೂಡಲೇ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಬೇಕು  ಎಂದು ಒತ್ತಾಯಿಸಲಾಯಿತು.

ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬೇಕಾದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡ ಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

 ಈ ಸಂದರ್ಭದಲ್ಲಿ ಮೃತ ರೈತನ ಹಂಡತಿ ಗೀತವ್ವ ಹಲಗೇರಿ,  ರೈತ ಮುಖಂಡರಾದ ಇಕ್ಬಲಾಸಾಬ್ ಶೇಖ ಸಂದಿ, ಧರ್ಮಣ್ಣ ಕುಪ್ಪೇಲೂರ, ಚಂದ್ರಣ್ಣ ಬೇಡರ, ನ್ಯಾಯವಾದಿ ಎಸ್.ಡಿ. ಹಿರೇಮಠ, ನಿತ್ಯಾನಂದ ಕುಂದಾಪುರ, ಸಿದ್ದಪ್ಪ ಹಲಗೇರಿ, ಮಳ್ಳಪ್ಪ ಹಲಗೇರಿ, ಜಯ್ಯಪ್ಪ ಕಂಪ ಗೌಡ್ರ, ಹರಿಹರಗೌಡ ಪಾಟೀಲ, ದಿಳ್ಳೆಪ್ಪ ಸತ್ಯಪ್ಪನವರ,  ದಿನಗೂಲಿ ನೌಕರರ ಸಂಘದ ಅಧ್ಯಕ್ಷ ಬಸವ ರಾಜ ಕೊಂಗಿಯವರ, ಜಮಾಲ ಸಾಬ್ ಶೇಖಸಂದಿ, ಜಗದೀಶ ಕೆರೂಡಿ, ರಾಜು ಓಲೆಕಾರ ಮುಂತಾ ದವರು ಭಾಗವಹಿಸಿ 1 ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾ ಸ್ಥಳಕ್ಕೆ ಉಪತಹಶೀಲ್ದಾರ ಹಾದಿಮನಿ ಮತ್ತು ಸಹಾಯಕ ಕೃಷಿ ನಿರ್ದೇಶಕ ಗೌಡಪ್ಪಗೌಡ್ರ ಆಗಮಿಸಿ ಮನವಿ ಸ್ವೀಕರಿಸಿದರು. 

error: Content is protected !!