‘ಕೀಲು ಕುದುರೆ ನೃತ್ಯ v/s ಬೀಡಿ ಡಾನ್ಸ್?!’

‘ಕೀಲು ಕುದುರೆ ನೃತ್ಯ v/s ಬೀಡಿ ಡಾನ್ಸ್?!’

ಹಳೇ ದಾವಣಗೆರೆಯಲ್ಲಿ ಆ ಕಾಲದ ಗಣೇಶೋತ್ಸವದ ಮತ್ತೊಂದು ದೊಡ್ಡ ಆಕರ್ಷಣೆ ಎಂದರೆ ದೊಡ್ಡಪೇಟೆ ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ `ಕೀಲು ಕುದುರೆ ನೃತ್ಯ’, ತಮಿಳುನಾಡಿನ ತಂಜಾವೂರಿನಿಂದ ಬರುತ್ತಿದ್ದ ಸುಂದರಮೂರ್ತಿ ಮತ್ತು ತಂಡದವರ ಕೀಲು ಕುದುರೆ ನೃತ್ಯ ಎಂದರೆ ಕೇವಲ ದಾವಣಗೆರೆಯವರಿಗಷ್ಟೇ ಅಲ್ಲ ಸುತ್ತಮುತ್ತಲಿನ ಊರಿನವರೆಲ್ಲಾ ಆ ದಿನ ಕೀಲು ಕುದುರೆ ನೃತ್ಯ ನೋಡಲಿಕ್ಕಾಗಿ ಅನೇಕ ಸಹಸ್ರ ಸಂಖ್ಯೆಯಲ್ಲಿ ದಾವಣಗೆರೆಗೆ ಬಂದು ಸೇರುತ್ತಿದ್ದರು. 

ಸುಂದರಮೂರ್ತಿ, ಅವರ ಹೆಂಡತಿ, ಅವರ ಮಗ ಹಾಗೂ ಅನೇಕ ಕಲಾವಿದರ ದೊಡ್ಡ ತಂಡ ಅದು. 

ಸುಂದರ ಮೂರ್ತಿ ದಂಪತಿ ರಾಜ ರಾಣಿಯರಂತೆಯೂ, ಈಶ್ವರ ಪಾರ್ವತಿಯರಂತೆಯೂ, ಮೀನಾಕ್ಷಿ ಸೌಂದರನಾಥರಂತೆಯೂ, ಶಿವಾಜಿ ಮಹಾರಾಜರಂತೆಯೂ ವಿವಿಧ ವೇಶಭೂಷಣಗಳಲ್ಲಿ ಮರಗಾಲು ಕಟ್ಟಿಕೊಂಡು ಕೀಲು ಕುದುರೆಯ ಮೇಲೆ ಮಾಡುವ ನೃತ್ಯ ಮನಮೋಹಕವಾಗಿರುತ್ತಿತ್ತು. ರಾಜ – ರಾಣಿಯರ ಪೋಷಾಕು, ಒಡವೆಗಳು, ಕುದುರೆಯ ಒಡವೆಗಳು, ಅಲಂಕಾರಗಳು ಮಂದ ಬೆಳಕಿನಲ್ಲೂ ಜಗಜಗ ಮಿಂಚುತ್ತಿದ್ದವು. ಕಣ್ಣು ಕುಕ್ಕುವಂತಿರುತ್ತಿದ್ದವು. ಜೊತೆಯಲ್ಲಿ ನವಿಲಿನ ವೇಷದವರು, ನಂದಿ ವೇಷದವರು, ತಮಾಷೆ ಮುಖವಾಡದವರು, ಕರಗ ರೀತಿಯ ಕುಂಭದ ಮೇಲೆ ರೆಕ್ಕೆ ಬಿಡಿಸಿದ ಹಕ್ಕಿಯ ಗೊಂಬೆ ಹೊತ್ತು ನರ್ತಿಸುವ ಸ್ತ್ರೀ ವೇಷದ ಪುರುಷರು, ಕಮಾನಿನ ಆಕಾರದ ಪುಷ್ಪಕಾವಡಿಯನ್ನು ಕುತ್ತಿಗೆ ಭುಜ ತಲೆಯ ಮೇಲೆಲ್ಲಾ ಸುತ್ತಿಸುತ್ತಾ ಕುಣಿಯುವವರು, ಪೂರಕವಾದ ನಾದಸ್ವರ ಮತ್ತು ಡೋಲಿನವರು ಗಂಧರ್ವ ಲೋಕವೇ ಬಂದಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು.  

ನಾದಸ್ವರ ಮತ್ತು ಡೋಲಿನ ಶಬ್ದವಂತೂ  ಕಿಲೋಮೀಟರುಗಟ್ಟಲೇ ದೂರಕ್ಕೂ ಕೇಳಿಸುವಷ್ಟು ಭಾರೀಯಾಗಿರುತ್ತಿತ್ತು. ಉತ್ಸವ ಪ್ರಾರಂಭವಾಗುವುದು ಸಂಜೆ 7 ಗಂಟೆಯ ನಂತರವಾದರೂ ಜನ ಸಂಜೆ 4 ರಿಂದಲೇ ಗಣೇಶನ ದೇವಸ್ಥಾನದ ಬಳಿ ಜಮಾಯಿಸುತ್ತಿದ್ದರು. 

ಪ್ರಾರಂಭದಲ್ಲಿ ಗಣೇಶನ ದೇವಸ್ಥಾನದ ಬಳಿ ನೃತ್ಯ ಮಾಡಿದ ಕೀಲು ಕುದುರೆಯವರು ದೊಡ್ಡಪೇಟೆಯಿಂದ ಚೌಕಿಪೇಟೆಗೆ ಬಂದು ಶ್ರೀ ಬಕೇಶ್ವರ ದೇವಸ್ಥಾನದ ಕಣದಲ್ಲಿ ಕುಣಿಯುತ್ತಿದ್ದರು. ನಂತರದಲ್ಲಿ ಹಾಸಬಾವಿ ವೃತ್ತ  ಅದಾದ ಮೇಲೆ ಚಾಮರಾಜಪೇಟೆ ವೃತ್ತ ನಂತರದಲ್ಲಿ ಲಕ್ಷ್ಮೀ ಸರ್ಕಲ್  ಅಲ್ಲಿಂದ ಮುಂದೆ ಕಾಯಿಪೇಟೆ ಬಸವೇಶ್ವರ ದೇವಸ್ಥಾನದ ಮುಂದೆ ಅದಾದ ಮೇಲೆ ಹೊಂಡದ ವೃತ್ತದಲ್ಲಿ ಕುಣಿಯುವಾಗ ಹೊಂಡದಲ್ಲಿ ಗಣಪತಿಯ ವಿಸರ್ಜನೆಯ ನೆರವೇರುತ್ತಿತ್ತು. ಆ ವೇಳೆಗಾಗಲೇ ಬೆಳಗಿನ ಜಾವಾಗಿರುತ್ತಿತ್ತು. ನಂತರ ಗಣಪತಿ ದೇವಸ್ಥಾನದ ಸ್ಥಾಪಕ ಪ್ರಮುಖರಲ್ಲಿ ಒಬ್ಬರಾದ ಅಣ್ಣಿಗೇರಿ ವಿಶ್ವನಾಥಪ್ಪನವರ ಮನೆಯ ಮುಂದೆ ಕೊನೆಯ ನೃತ್ಯವನ್ನು ಪ್ರದರ್ಶಿಸುತ್ತಿ ದ್ದರು. ಆಗ ಸಾಮಾನ್ಯವಾಗಿ ಬೆಳಗಿನ ಆರೂವರೆ ಗಂಟೆ ಆಗಿರುತ್ತಿತ್ತು. ಹಿಂದಿನ ಸಂಜೆಯಿಂದ ಮಾರನೇ ಬೆಳಗಿನವರೆಗೂ ಸಹಸ್ರಾರು ಜನ ಈ ಕೀಲು ಕುದುರೆ ನೃತ್ಯ ನೋಡಲು ತಂಡದ ಲಾರಿಗಳ ಹಿಂದೆ ಓಡುತ್ತಿದ್ದರು. 

ಮುನಿಸಿಪಾಲಿಟಿಯ ಲಾರಿಗಳನ್ನು ಈ ಕೀಲುಕುದರೆ ನೃತ್ಯ ತಂಡದವರಿಗೆ ಒದಗಿಸಲಾಗುತ್ತಿತ್ತು. ಆ ಕಾಲದಲ್ಲೇ ಈ ಕೀಲು ಕುದುರೆ ನೃತ್ಯ ತಂಡಕ್ಕೆ ಸುಮಾರು 1,200 ರೂ ಗಳ ಸಂಭಾವನೆ ಕೊಡಲಾಗುತ್ತಿತ್ತು!. ಆ ಮೊತ್ತ  ಈಗಿನ ಸುಮಾರು 6 ಲಕ್ಷ ರೂಪಾಯಿಗಳಿಗೆ ಸಮ ಎನ್ನಬಹುದು.

ಈ ಸಂದರ್ಭದಲ್ಲಿ ಬೀಡಿ ಕಂಪನಿಗಳ ಪ್ರಚಾರದ ವ್ಯಾನುಗಳು ವಿದ್ಯುತ್ ದೀಪ ಅಲಂಕಾರ ಮಾಡಿಕೊಂಡು ಪ್ರಚಾರಕ್ಕಾಗಿ ರಸ್ತೆಯಲ್ಲಿ ಓಡಾಡುತ್ತಿದ್ದವು. ಆ ವ್ಯಾನುಗಳ ಮೇಲೆ ಓರ್ವ ಮಾಡ್ರನ್ ಹೀರೋ ಡ್ರೆಸ್ಸಿನ ಯುವಕ, ಮತ್ತೋರ್ವ ಮಾಡ್ರನ್ ಲೇಡಿ ಡ್ರೆಸ್ಸಿನ ಯುವಕ ಪ್ರೇಮಿಗಳಂತೆ ನೃತ್ಯ ಮಾಡುತ್ತಿದ್ದರು. ಒಂದು ವರ್ಷ ಗಣೇಶೋತ್ಸವದಲ್ಲಿ ಕೆಲವು ಮಂದಿ ಪುರುಷರು ಕೀಲು ಕುದುರೆ ನೃತ್ಯ ನೋಡುವುದು ಬಿಟ್ಟು ಬೀಡಿ ನೃತ್ಯವನ್ನೇ ನೋಡುತ್ತಾ ಆ ವ್ಯಾನುಗಳ ಹಿಂದೆ ಓಡುತ್ತಿದ್ದರು?!. ಅವರಲ್ಲಿ ಅನೇಕರು ನನ್ನ ಪರಿಚಿತರೂ ಇದ್ದರು.

ಗಣೇಶೋತ್ಸವ ಮೆರವಣಿಗೆಯ ಮರುದಿನ ಚೌಕಿಪೇಟೆಯ ನಾವು ಕೆಲವು ಹುಡುಗರು ಶ್ರೀ ಬಕ್ಕೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ಹೀಗೇ ಮಾತಾಡುತ್ತಾ ಕುಳಿತಾಗ ಈ ವಿಷಯವೂ ಬಂದಿತು. ಅಂಥಾ ಕೀಲು ಕುದುರೆ ನೃತ್ಯ ನೋಡುವುದು ಬಿಟ್ಟು ಅವರೇಕೆ ಬೀಡಿ ಡ್ಯಾನ್ಸ್ ನೋಡಲು ವ್ಯಾನಿನ ಹಿಂದೆ ಓಡುತ್ತಿದ್ದರು ? ಎಂಬ ಪ್ರಶ್ನೆ ನಮ್ಮಲ್ಲಿ ಚರ್ಚೆಗೆ ಬಂತು. ನಮಗೆ ತೋಚಿದಂತೆ ಅಭಿಪ್ರಾಯ ಹೇಳುತ್ತಿದ್ದೆವು. ಅದೇ ವೇಳೆಗೆ ಮಹಾರಾಜ ಪೇಟೆ ಷಣ್ಮುಖಪ್ಪ ಅಲ್ಲಿಗೆ ಬಂದರು. `ಏನ್ ಮಾತಾಡಾಕತ್ತೀರೋ ಹುಡ್ರಾ?’ ಅಂತ ಕೇಳಿದರು. `ಅಲ್ಲಾ.. ಅಂಥ ಕೀಲು ಕುದುರೆ ನೃತ್ಯ ನೋಡದು ಬಿಟ್ಟು ಬೀದಿ ಡ್ಯಾನ್ಸ್ ನೋಡಕ್ಕೆ ವ್ಯಾನ್ ಹಿಂದೆ ಓಡ್ತಿದ್ರಲ್ಲ, ಅದರಾಗೆ ಏನ್ ಅಟ್ರಾಕ್ಷನ್ನು ಅಂತ ಮಾತಾಡ್ತಿದ್ವಿ’ ಎಂದೆವು. ಅದಕ್ಕವರು ನಗುತ್ತಾ ಹೇಳಿದರು `ಲೇ  ಹುಡ್ರಾ ಅವರೆಲ್ಲಾ ವ್ಯಾನ್ ಹಿಂದೆ ಓಡ್ತಾ ಇದ್ದದ್ದು ಡಾನ್ಸ್ ನೋಡಕ್ಕಲ್ಲ, ಸರ್ಕಲ್ ಗಳಾಗೆ ವ್ಯಾನ್ ನೋರು ಬೀಡಿ ತೂರ್ತಾರಂತೆ ಅಂತಾ ಯಾರೋ ಸುದ್ದಿ ಹಬ್ಸಿದ್ರು, ಬೀಡಿ ಆರುಸ್ಕಣಾಕೆ ಓಡ್ತಿದ್ರು ಕಣ್ರಲೇ’ ಎಂದರು.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!