ಸ್ವಕುಳಸಾಳಿ ಸಮಾಜದ ಭಗವಾನ್ ಶ್ರೀ ಜಿಹ್ವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಸೆ. 11- ಸರ್ಕಾರದ ವಿಶೇಷ ಯೋಜನೆಗಳನ್ನು ರೂಪಿಸುವ ಮೂಲಕ ಸ್ವದೇಶಿ ಕೈಮಗ್ಗ ಉದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಿರೇಮಠದಲ್ಲಿ ಸ್ವಕುಳ ಸಾಳಿ ಸಮಾಜದ ವತಿಯಿಂದ ಕಳೆದ ವಾರ ಹಮ್ಮಿಕೊಂಡಿದ್ದ ಭಗವಾನ್ ಶ್ರೀ ಜಿಹ್ವೇಶ್ವರ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈಮಗ್ಗ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ಪ್ರಚಾರದ ಅಗತ್ಯವಿದೆ. ನೇಕಾರ ಸಮುದಾಯದ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಮತ್ತು ಸ್ವದೇಶಿ ಉತ್ಪನ್ನಗಳ ತಯಾರಿಕೆ ಕುರಿತಂತೆ ಅವರಿಗೆ ವಿಶೇಷ ಕಾರ್ಯಾಗಾರಗಳ ಮೂಲಕ ತರಬೇತಿ ನೀಡಲಾಗುವುದು ಎಂದರು.
ಸ್ವಕುಳಸಾಳಿ ಸಮುದಾಯದವರ ಮೂಲ ಕಸುಬು ನೇಕಾರಿಕೆಯಾಗಿದ್ದು, ಸಮುದಾಯದವರ ಸಮಸ್ಯೆಗಳು, ಬೇಡಿಕೆಗಳಿದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಪರಿಹಾರ ನೀಡುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಜಡೇಸಿದ್ಧೇಶ್ವರ ಶಿವಯೋಗಾಶ್ರಮದ ಶ್ರೀ ಶಿವಾನಂದ ಸ್ವಾಮೀಜಿ ಮಾತನಾಡಿ, ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು. ಭಾರತದಲ್ಲಿ ಆಚರಿಸಲಾಗುವ ಪ್ರತಿಯೊಂದು ಹಬ್ಬಗಳಲ್ಲೂ ಆಧ್ಯಾತ್ಮದ ತತ್ವ ಅಡಗಿದೆ ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ನಾವುಗಳೆಲ್ಲರೂ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದೇವೆ. ಭಾರತೀಯ ಸಂಸ್ಕೃತಿ, ಆಚಾರ-ವಿಚಾರಗಳನ್ನು ಮರೆಯುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಯಾರು ಧರ್ಮದ ಹಾದಿಯಲ್ಲಿ ನಡೆಯುತ್ತಾರೋ ಅವರು ಧರ್ಮಾತ್ಮರೆನಿಸಿಕೊಳ್ಳುತ್ತಾರೆ. ಮನುಷ್ಯ ಎಷ್ಟೇ ಸಿರಿ-ಸಂಪತ್ತು, ಆಸ್ತಿ-ಅಂತಸ್ತು ಹೊಂದಿದ್ದರೂ ಸಹ ದಾನ, ಧರ್ಮದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದಿದ್ದರೆ ಬದುಕು ಸಾರ್ಥಕವಾಗುವುದಿಲ್ಲ ಎಂದರು.
ಸ್ವಕುಳಸಾಳಿ ಸಮಾಜದ ಅಧ್ಯಕ್ಷ ಮೋಹನ್ ಪಿ. ಗಾಯಕವಾಡ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದೂಡಾ ಮಾಜಿ ಅಧ್ಯಕ್ಷ ಮಾಲತೇಶರಾವ್ ಜಾಧವ್, ವೃತ್ತಿಪರ ಪತ್ರಬರಹಗಾರರ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆ. ಸಂಗಮೇಶ್ ಎಲಿಗಾರ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸ್ವಕುಳಸಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ಏಕಬೋಟೆ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಕ್ಷೀರಸಾಗರ ಗಣೇಶ್ ಸ್ವಾಗತಿಸಿದದರು. ಸಹ ಕಾರ್ಯದರ್ಶಿ ವಾಸುದೇವ ಸಾಕ್ರೆ ವಂದಿಸಿದರು.
ಸ್ವಕುಳಸಾಳಿ ಸಮಾಜದ ಉಪಾಧ್ಯಕ್ಷ ಸುರೇಂದ್ರ ವಾಂಜ್ರೆ, ಸ್ವಕುಳಸಾಳಿ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಸುಜಾತಾ ರೋಖಡೆ, ಸ್ವಕುಳಸಾಳಿ ಯುವ ಸಮಿತಿ ಅಧ್ಯಕ್ಷ ನಂದಕಿಶೋರ ಭಂಡಾರೆ, ಪ್ರಧಾನ ಕಾರ್ಯದರ್ಶಿ ಸಂತೋಷ್ ಏಕಬೋಟೆ ಇನ್ನಿತರರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ 2023-24 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸ್ವಕುಳ ಸಾಳಿ ಸಮಾಜದ ವಿದ್ಯಾರ್ಥಿ – ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.