ಶಿಕ್ಷಣ ಸಂಸ್ಥೆಗಳಿಂದ ಉದ್ಯೋಗಗಳ ಸೃಷ್ಟಿ

ಪ್ರತಿ ಮೂರು ತಾಸಿಗೊಮ್ಮೆ ತಂತ್ರ ಜ್ಞಾನ ಬದಲಾಗುವ ಕಾಲದಲ್ಲಿ ಮಂತ್ರದಿಂದ ಮಾವಿನ ಕಾಯಿ ಬೀಳುಸುತ್ತೇವೆ ಎಂದರೆ ಯಾರೂ ನಂಬುವುದಿಲ್ಲ. ಇದು ಕೇವಲ ಭಾಷಣ, ಬೋಧನೆ ಮಾಡುವ ಕಾಲವಲ್ಲ. ಪಠ್ಯ ಪುಸ್ತಕಗಳ ಮೂಲಕ ಕೈ ಕೆಸರು ಮಾಡಿಕೊಳ್ಳುವ ಸಮಾಜ ನಿರ್ಮಾಣದ ಅಗತ್ಯವಿದೆ.

 – ಪ್ರೊ. ತೇಜಸ್ವಿ ವಿ. ಕಟ್ಟೀಮನಿ, ಕೇಂದ್ರೀಯ ಬುಡಕಟ್ಟು ವಿ.ವಿ. ಕುಲಪತಿ

ದಾವಣಗೆರೆ, ಅ. 21- ಶಿಕ್ಷಣ ಸಂಸ್ಥೆಗಳನ್ನು ಉದ್ಯೋಗ ಸೃಷ್ಟಿಯ ತಾಣಗಳನ್ನಾಗಿ ಮಾಡುವುದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮುಖ್ಯ ಉದ್ದೇಶ ಎಂದು ಆಂಧ್ರಪ್ರದೇಶ ವಿಜಯನಗರ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ತೇಜಸ್ವಿ ವಿ. ಕಟ್ಟೀಮನಿ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ವತಿಯಿಂದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ಆವರಣ ದಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿ ದ್ದ `ರಾಷ್ಟ್ರೀಯ ನೂತನ ಶಿಕ್ಷಣ ನೀತಿ-2020  ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.

ಪಠ್ಯ ತಯಾರಿಕೆಯಲ್ಲಿ ತೊಡಗಿದವರು ತಮ್ಮ ಕಥೆ, ಕವನಗಳನ್ನೇ ಸೇರಿಸುವುದು ಭಾರತೀಯ ಪರಂಪರೆಯಲ್ಲ. ಪಂಪ, ರನ್ನ, ಕುಮಾರ ವ್ಯಾಸ ಯಾರೂ ತಮ್ಮ ಹೆಸರುಗಳನ್ನು ಬರೆದುಕೊಂಡಿರಲಿಲ್ಲ ಎಂದ ಅವರು, ಪಠ್ಯದಲ್ಲಿ ಸ್ಥಳೀಯ ಇತಿಹಾಸದ ಬಗ್ಗೆ ಮಾಹಿತಿ ಇರಬೇಕು.  ಸ್ಥಳೀಯವಾಗಿ ಉತ್ಪತ್ತಿಯಾಗುವ ತ್ಯಾಜ್ಯ ಹಾಗೂ ಅದರ ಬಳಕೆ, ಕೈಗಾರಿಕೆಗಳ ಬೆಳವಣಿಗೆ ಇತ್ಯಾದಿಗಳು ಸಂಶೋಧನೆಯ ಮುಖ್ಯ ಭಾಗವಾಗಬೇಕು ಎಂದು ಅಭಿಪ್ರಾಯಿಸಿದರು.

ಹೊಸ ಶಿಕ್ಷಣ ನೀತಿಯಲ್ಲಿ ತಂತ್ರಜ್ಞಾನದ ಬಳಕೆ, ಸ್ಥಳೀಯ ಸಂಪನ್ಮೂಲಗಳ ಸದುಪಯೋಗ, ಸಾಮಾಜಿಕ ಜವಾಬ್ದಾರಿ, ನೈತಿಕ ಮೌಲ್ಯಗಳ ಜೊತೆಗೆ ಉದ್ಯಮಗಳ ಒಡನಾಟದಲ್ಲಿ ಕಲಿಕೆಯನ್ನು ಒಳಗೊಳ್ಳುವಂತೆ ಮಾಡುತ್ತದೆ. ಸಂಶೋಧನೆ, ಪ್ರಯೋಗ, ಅನುಭವಗಳಿಗೆ ವಿಶೇಷ ಮನ್ನಣೆ ನೀಡಲಾಗುತ್ತದೆ. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದಿಲ್ಲಾ ಒಂದು ಕೌಶಲ ಕಲಿತು ಸ್ವಾವಲಂಬಿಯಾಗಲು ಸಹಕಾರಿ ಆಗಲಿದೆ. 

ಹೊಸ ಶಿಕ್ಷಣ ನೀತಿಯು ಅಲಾವುದ್ದೀನ್‌ನ ಅದ್ಭುತ ದೀಪವೇನಲ್ಲ. ಆದರೆ ಪ್ರಸ್ತುತ ಜಾಗತಿಕ ಅಗತ್ಯಕ್ಕೆ ತಕ್ಕಂತೆ ನೀತಿಗಳನ್ನು ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿಯಲ್ಲಿ ಪ್ರಮಾಣ ಪತ್ರಕ್ಕಿಂತ ವಿದ್ಯಾರ್ಥಿಯ ಕಲಿಕೆಯ ಗುಣಮಟ್ಟ, ಬದುಕಿಗೆ ಬೇಕಾಗಿರುವ ವೃತ್ತಿಯ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನದ ಶಿಕ್ಷಣವು ಹೆಚ್ಚು ಮಹತ್ವ ಪಡೆಯುತ್ತದೆ. ಆದ್ದರಿಂದ ಇದು ಭವಿಷ್ಯ ರೂಪಿಸುವ ಬದುಕಿನ ಶಿಕ್ಷಣವಾಗಿದೆ. ಮೌಲ್ಯಾಧಾರಿತ, ಸಾಮಾಜಿಕ ಕಳಕಳಿಯ ಸುಭದ್ರ ಭಾರತ ನಿರ್ಮಾಣದ ಪರಿಕಲ್ಪನೆಯ ನೂತನ ನೀತಿಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿಯಾಗಲಿದೆ ಎಂದು ನುಡಿದರು.

ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಮಾತನಾಡಿ, ಬೋಧನೆಯೇ ಪಾಠವಲ್ಲ. ಪ್ರಾಯೋಗಿಕ ಶಿಕ್ಷಣ ಅತ್ಯಗತ್ಯ. ಬೋಧನೆಗೆ ಶಿಕ್ಷಕರು ಇಲ್ಲವೆಂದು ಕೊರಗುವ ಬದಲಾಗಿ, ಲಭ್ಯವಿರುವ ಪ್ರಾಧ್ಯಾಪಕರೇ ಹೊಸ ವಿಷಯಗಳನ್ನು ಕಲಿತು ಬೋಧನೆಗೆ ಮುಂದಾಗುವಂತಾಗಬೇಕು. ಆಗಲೇ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದ ಅವರು, ನೂತನ ಶಿಕ್ಷಣ ನೀತಿ ಅನುಷ್ಠಾನಕ್ಕೆ ಮುನ್ನವೇ ಬಾಪೂಜಿ ಎಂಜಿನಿಯರಿಂಗ್ ಕಾಲೇಜು ಹಲವಾರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ದಾವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಜ್ಞಾನ, ವೃತ್ತಿ ಮತ್ತು ಭವಿಷ್ಯ ಒಂದಕ್ಕೊಂದು ಪೂರಕವಾಗಿವೆ. ವಿದ್ಯಾರ್ಥಿಗಳ ಆಸಕ್ತಿ, ಒಲವು ಮತ್ತು ಕೌಶಲ್ಯಗಳನ್ನು ಆಧರಿಸಿ ಶಿಕ್ಷಣ ಕಲಿಯಲು ಮುಕ್ತ ಅವಕಾಶವನ್ನು ನೂತನ ಶಿಕ್ಷಣ ನೀತಿಯಲ್ಲಿ ಕಲ್ಪಿಸಲಾಗಿದೆ. ಶಿಕ್ಷಕರ ಸಹಕಾರ, ಸಹಭಾಗಿತ್ವದಿಂದ ಮಾತ್ರ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಲು ಸಾಧ್ಯ ಎಂದು ಹೇಳಿದರು.

ಬಿಐಇಟಿ ಕಾಲೇಜು ಪ್ರಾಚಾರ್ಯ ಪ್ರೊ. ಅರವಿಂದ್, ದಾವಿವಿ ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್, ಹಣಕಾಸು ಅಧಿಕಾರಿ ಪ್ರಿಯಾಂಕ ಡಿ, ಸಿಂಡಿಕೇಟ್ ಸದಸ್ಯರಾದ ಡಾ. ರಾಮನಾಥ, ವಿಜಯಲಕ್ಷ್ಮಿ ಹಿರೇಮಠ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾದ ಪ್ರೊ. ಅಂಗಡಿ, ಶಿವಕುಮಾರ ಉಪಸ್ಥಿತರಿದ್ದರು. ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ್ ಸ್ವಾಗತಿಸಿದರು. ಡಾ. ಪ್ರವೀಣ್ ನಿರೂಪಿಸಿದರು. ಡಾ. ಗೋಪಾಲ ಎಂ. ಅಡವಿರಾವ್ ವಂದಿಸಿದರು.

error: Content is protected !!